ಬೆಂಗಳೂರು:ಪಕ್ಷ ಮತ್ತು ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರಲಿರುವ ಜಾತಿ ಗಣತಿ ಸಮೀಕ್ಷೆ ಕೈಬಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪುಟ ಸಭೆಯಲ್ಲೇ ಒತ್ತಾಯಿಸಿದ್ದಾರೆ.
ಶಿವಕುಮಾರ್ ಮಾತಿಗೆ ಧ್ವನಿಗೂಡಿಸಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಸಮಾಜ-ಸಮಾಜವನ್ನು ಗೊಂದಲಕ್ಕೆ ಸಿಲುಕಿಸಲು ಹಿಂದುಳಿದ ಆಯೋಗ ಹೊರಟಿದೆ ಎಂದು ಕಿಡಿಕಾರಿದ್ದಾರೆ.
ಸಮಾಜದಲ್ಲಿ ಗೊಂದಲ
ಸಮಾಜದಲ್ಲಿ ಗೊಂದಲ ಮೂಡಿಸಲಿರುವ ಈ ಸಮೀಕ್ಷೆ ಕಾರ್ಯವೇ ಬೇಡ ಎಂದು ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಹಾಗೂ ಈಶ್ವರ ಖಂಡ್ರೆ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿದ್ದಾರೆ.
ಸಮೀಕ್ಷೆ ದಿನಾಂಕ ಸಮೀಪವಾಗುತ್ತಿದ್ದಂತೆ ಜಾತಿ-ಜಾತಿಯಲ್ಲಿ ಸಾಮರಸ್ಯ ಹದಗೆಡುವ ಹಂತಕ್ಕೆ ತಲುಪಿದೆ.
ನಾವು ಸಾಮರಸ್ಯ ಮೂಡಿಸಿ ಅಭಿವೃದ್ಧಿ ಕಡೆ ಚಿಂತನೆ ಮಾಡುವ ಬದಲು ಇಂತಹ ಸಮೀಕ್ಷೆಯಿಂದ ನಮ್ಮ ಪಕ್ಷ ಹಾಗೂ ಗ್ಯಾರಂಟಿ ಸರ್ಕಾರಕ್ಕೆ ಹಿನ್ನಡೆ ಆಗುತ್ತದೆ ಎಂದು ಶಿವಕುಮಾರ್ ಸಭೆಗೆ ವಿವರಣೆ ನೀಡಿದ್ದಾರೆ.
ಸಮೀಕ್ಷೆ ಹಿಂದಿನ ಮರ್ಮ ಏನು
ಆಯೋಗ ಸಮೀಕ್ಷೆಗೆ ಬಿಡುಗಡೆ ಮಾಡಿರುವ ಪಟ್ಟಿ ನೋಡಿದರೆ, ಇದರ ಹಿಂದಿನ ಮರ್ಮ ಏನು ಎಂಬ ಪ್ರಶ್ನೆ ಎದ್ದಿದೆ, ಆಯೋಗದ ತೀರ್ಮಾನವನ್ನು ಸರ್ಕಾರದ ತೀರ್ಮಾನ ಎಂಬುದಾಗಿ ಮಸಿ ಬಳಿಯುವ ಕಾರ್ಯ ಆರಂಭಗೊಂಡಿದೆ.
ಪ್ರತಿಪಕ್ಷ ಬಿಜೆಪಿ ಇದನ್ನೇ ರಾಜಕೀಯ ಬಂಡವಾಳ ಮಾಡಿಕೊಳ್ಳಲು ಶಿಬಿರ ಆರಂಭಿಸಿದೆ, ವೀರಶೈವ, ಒಕ್ಕಲಿಗ ಸಮಾಜದ ಮಠಾಧೀಶರು ತಮ್ಮ ಸಮುದಾಯಗಳ ಪರ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ.
ಸಮೀಕ್ಷೆ ಹೀಗೇ ಇರಬೇಕು ಎಂಬುದಾಗಿ ಸರ್ಕಾರ ಹೇಳಿಲ್ಲ, ಆದರೆ, ಆಯೋಗ ಸಮುದಾಯಗಳನ್ನು ವಿಭಜಿಸಿ ಸಮೀಕ್ಷೆಗೆ ಹೊರಟಿದೆ, ಇದು ಸರಿಯಲ್ಲ, ಇದಕ್ಕೆ ತಿಲಾಂಜಲಿ ಹಾಡಲೇಬೇಕು.
ಹೆಚ್ಚುವರಿ 331 ಜಾತಿ
ಹೆಚ್ಚುವರಿಯಾಗಿ 331 ಜಾತಿಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ, ಈ ಜಾತಿಗಳ ಹೆಸರು ಕೊಟ್ಟವರಾರು, ಹಿಂದೆ ಇಲ್ಲದ್ದು ಈಗ ಏಕೆ ಎಂದು ಖಾರವಾಗಿ ಶಿವಕುಮಾರ್, ಎಂ.ಬಿ.ಪಾಟೀಲ್, ಖಂಡ್ರೆ ಪ್ರಶ್ನೆ ಮಾಡಿದ್ದಾರೆ.
ಮಧ್ಯೆ ಪ್ರವೇಶಿಸಿದ ಮುಖ್ಯಮಂತ್ರಿ, ನನಗೂ ಮೇಲ್ಜಾತಿ ವಿರೋಧಿ ಪಟ್ಟ ಕಟ್ಟಲಾಗುತ್ತಿದೆ, ಈ ಬಗ್ಗೆ ಸಂಪುಟ ಸಭೆ ನಂತರ ಕುಳಿತು ಚರ್ಚಿಸಿ ತೀರ್ಮಾನ ಕೈಗೊಳ್ಳೋಣ ಎಂದಿದ್ದಾರೆ.
ಇದಕ್ಕೆ ಮಣಿಯದ ಸಚಿವರುಗಳು ರಾಜ್ಯ ಸರ್ಕಾರಕ್ಕೆ ಜಾತಿ ಗಣತಿ ನಡೆಸಲು ಅಧಿಕಾರ ಇಲ್ಲ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಎಂದು ಜಾತಿ ಹಣೆಪಟ್ಟಿ ಕೊಟ್ಟಿರುವುದು ಹೈಕೋರ್ಟ್ ಮೆಟ್ಟಿಲೇರಿದೆ.
ಹೈಕೋರ್ಟ್ ವಿಚಾರಣೆ
ಅರ್ಜಿ ಶುಕ್ರವಾರ ವಿಚಾರಣೆಗೆ ಬರಲಿದ್ದು, ಸರ್ಕಾರ ಇದನ್ನು ಯಾವ ರೀತಿ ಸಮರ್ಥನೆ ಮಾಡಿಕೊಳ್ಳಲಿದೆ ಎಂದು ಮುಖ್ಯಮಂತ್ರಿ ಅವರನ್ನು ಪ್ರಶ್ನಿಸಿದ್ದಾರೆ.
ಏನೇ ಇರಲಿ, ಸಮೀಕ್ಷಾ ಉಸಾಬರಿಯೇ ಸರ್ಕಾರಕ್ಕೆ ಬೇಡ ಎಂದು ಬಲವಾದ ವಾದ ಮಂಡಿಸಿದ್ದಾರೆ.

