ಬೆಂಗಳೂರು:ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿ ಕುರಿತ ಜಾತಿಗಣತಿ ಸಮೀಕ್ಷೆಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲೇ ಭಿನ್ನಾಭಿಪ್ರಾಯ ತಾರಕಕ್ಕೇರಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ವರಿಷ್ಠರು ಮಧ್ಯಪ್ರವೇಶ ಮಾಡಿದ್ದಾರೆ.
ಗುಗುವಾರ ನಡೆದ ಸಂಪುಟ ಸಭೆಯಲ್ಲಿ ಜಾತಿಗಣತಿ ವಿಷಯ ಸ್ಫೋಟಗೊಂಡ ನಂತರ ನಿನ್ನೆ ತಡರಾತ್ರಿವರೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರುಗಳ ಜೊತೆ ಸುದೀರ್ಘ ಚರ್ಚೆ ನಡೆಸಿದರು.
ಲೋಪ ಸರಿಪಡಿಸಲು ಸೂಚನೆ
ಮುಖ್ಯಮಂತ್ರಿ ಸಭೆಗೂ ಮುನ್ನ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಜಾತಿಗಣತಿ ವಿರೋಧಿಸುತ್ತಿರುವ ಸಚಿವರುಗಳು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರೊಂದಿಗೆ ಚರ್ಚೆ ನಡೆಸಿ, ಸಮೀಕ್ಷಾ ಕಾರ್ಯದ ಸಿದ್ಧತೆಯಲ್ಲಿ ಆಗಿರುವ ಲೋಪಗಳನ್ನು ಗಮನಕ್ಕೆ ತಂದಿದ್ದಲ್ಲದೆ, ಅವುಗಳನ್ನು ಸರಿಪಡಿಸಿಕೊಂಡು ಮುಂದುವರೆಯುವಂತೆ ಸೂಚಿಸಿದ್ದರು.
ಸಿದ್ದರಾಮಯ್ಯ ಕರೆದಿದ್ದ ರಾತ್ರಿ ಮತ್ತು ಬೆಳಗಿನ ಸಭೆಯಲ್ಲಿ ಶಿವಕುಮಾರ್, ಸರ್ಕಾರ ಮತ್ತು ಪಕ್ಷಕ್ಕೆ ಮುಳುವಾಗಿರುವ ಸಮೀಕ್ಷೆಯನ್ನೇ ಸ್ಥಗಿತಗೊಳಿಸಿ ಎಂದು ಬಿಗಿ ಪಟ್ಟು ಹಿಡಿದರು.
ಶಿವಕುಮಾರ್ ಮಾತಿಗೆ ವೀರಶೈವ ಸಮುದಾಯದ ಸಚಿವರುಗಳು ರಾತ್ರಿ ನಡೆದ ಸಭೆಯಲ್ಲಿ ಧ್ವನಿಗೂಡಿಸಿದರಾದರೂ, ಬೆಳಗ್ಗೆ, ಈಗಾಗಲೇ ನಾವು ಹೇಳುವುದನ್ನು ಹೇಳಿದ್ದಾಗಿದೆ ಎನ್ನುವ ಮೂಲಕ ಸಭೆಯಿಂದ ಹೊರಗುಳಿದರು.
ಸುರ್ಜೇವಾಲ ದಿಢೀರನೆ ನಗರಕ್ಕೆ
ಜಾತಿ ಗಣತಿ ಸರ್ಕಾರಕ್ಕೆ ಕಗ್ಗಂಟ್ಟಾಗುತ್ತಿದೆ ಎಂಬುದನ್ನು ಅರಿತ ತಕ್ಷಣ ಪಕ್ಷದ ರಾಜ್ಯ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ರಾತ್ರಿಯೇ ದಿಢೀರನೆ ನಗರಕ್ಕೆ ಧಾವಿಸಿದರು.
ತಾವು ತಂಗಿದ್ದ ವೆಸ್ಟ್ ಎಂಡ್ ಹೋಟೆಲ್‌ಗೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರನ್ನು ಕರೆಸಿಕೊಂಡು, ಈ ವಿಷಯವಾಗಿ ಸುದೀರ್ಘ ಸಮಾಲೋಚನೆ ನಡೆಸಿದರು.
ಶಿವಕುಮಾರ್ ಸೇರಿದಂತೆ ಕೆಲವು ಸಚಿವರು, ಕೆಲವು ದೋಷಗಳಾಗಿವೆ ಎಂಬುದನ್ನು ನನ್ನ ಗಮನಕ್ಕೆ ತಂದಿದ್ದಾರೆ, ಅದನ್ನು ಸರಿಪಡಿಸಲು ಆಯೋಗಕ್ಕೆ ಸೂಚಿಸುತ್ತೇನೆ, ಆದರೆ, ಯಾವುದೇ ಕಾರಣಕ್ಕೂ ಜಾತಿ ಗಣತಿ ಸಮೀಕ್ಷೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಸುರ್ಜೇವಾಲ ಅವರಿಗೆ ಮುಖ್ಯಮಂತ್ರಿ ತಿಳಿಸಿದ್ದಾರೆ.
ಜಾತಿ ವಿರೋಧಿ ಹಣೆಪಟ್ಟಿ
ಶಿವಕುಮಾರ್ ಸಹಾ ತಮ್ಮ ನಿಲುವಿನಿಂದ ಹಿಂದೆ ಸರಿಯದೆ, ಆಯೋಗ ನಡೆಸುತ್ತಿರುವ ಸಮೀಕ್ಷೆ ಪಕ್ಷ ಮತ್ತು ಸರ್ಕಾರಕ್ಕೆ ಕೆಟ್ಟ ಹೆಸರು ತರುತ್ತಿದೆ, ಇವರು ಮಾಡಲು ಹೊರಟಿರುವ ಜಾತಿಗಣತಿಯಿಂದ ನಮಗೆ ಮುಂದುವರೆದ ಜಾತಿಗಳ ವಿರೋಧಿ ಎಂಬ ಹಣೆಪಟ್ಟಿ ಅಂಟಿಸಲಾಗಿದೆ.
ಕೇಂದ್ರ ಸರ್ಕಾರ ಜಾತಿಗಣತಿ ಕಾರ್ಯ ನಡೆಸುವುದಾಗಿ ಹೇಳಿದೆ ಮತ್ತು ಸಿದ್ಧತೆಯೂ ನಡೆಯುತ್ತಿದೆ, ನಾವೂ ಅದನ್ನೇ ಮಾಡುವುದರಿಂದ ಏನು ಪ್ರಯೋಜನ, ಸರ್ಕಾರದ ಹಣ ಪೋಲು ಮಾಡುವುದಾದರೂ ಏಕೆ.
ಒಂದೆಡೆ ದಸರಾ, ಮತ್ತೊಂದೆಡೆ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ, ಇಂತಹ ಸಂದರ್ಭದಲ್ಲಿ ಸಮೀಕ್ಷೆ ಪೂರ್ಣ ಪ್ರಮಾಣದಲ್ಲಿ ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಸಮೀಕ್ಷೆಗೆ ವಿರುದ್ಧವಾಗಿ ಹೇಳಿಕೆ
ಇದಕ್ಕೂ ಮಿಗಿಲಾಗಿ ಆಯೋಗ ಇಲ್ಲದ ಜಾತಿಗಳನ್ನು ಪಟ್ಟಿಗೆ ಸೇರಿಸಿ ಗೊಂದಲ ಉಂಟು ಮಾಡಿದೆ, ಈಗಾಗಲೇ ಒಕ್ಕಲಿಗ, ಲಿಂಗಾಯತ ಸಮುದಾಯಗಳು ಸಮೀಕ್ಷೆಗೆ ವಿರುದ್ಧವಾಗಿ ಹೇಳಿಕೆ ನೀಡಲು ಆರಂಭಿಸಿವೆ.
ಇಲ್ಲದ ಜಾತಿಗಳನ್ನು ಸೇರಿಸಲು ಇವರಿಗೆ ಅಧಿಕಾರ ಕೊಟ್ಟವರು ಯಾರು, ಸಮೀಕ್ಷೆಗೆ ನಮ್ಮ ಸಂಪೂರ್ಣ ವಿರೋಧವಿದೆ, ನಾವು ಇದನ್ನು ಮಂತ್ರಿಮಂಡಲ ಸಭೆ ಹಾಗೂ ಆಯೋಗದೊಂದಿಗಿನ ಸಭೆಯಲ್ಲೂ ತಿಳಿಸಿದ್ದೇವೆ.
ಸರ್ಕಾರ ಮತ್ತು ಪಕ್ಷಕ್ಕಾಗುವ ಹಿನ್ನಡೆ ತಪ್ಪಿಸಲು ನೀವೇ ತೀರ್ಮಾನ ಕೈಗೊಳ್ಳಬೇಕು ಎಂದು ಶಿವಕುಮಾರ್ ಎಐಸಿಸಿ ಅಂಗಳಕ್ಕೆ ಚೆಂಡನ್ನು ಹಾಕಿದ್ದಾರೆ.
ಪರ-ವಿರೋಧ
ಸರ್ಕಾರದ ಸೂಚನೆ ಮೇರೆಗೆ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಸಭೆಯಲ್ಲೂ ಪರ-ವಿರೋಧ ವ್ಯಕ್ತವಾಗಿದೆ ಎಂದು ಹೇಳಲಾಗಿದೆ.
ಇಷ್ಟರ ನಡುವೆಯೂ ಮುಖ್ಯಮಂತ್ರಿ, ಜಾತಿಗಣತಿ ಸಮೀಕ್ಷೆ ಮುಂದೂಡಲಾಗದುಮ ಎಂದು ಸ್ಪಷ್ಟಪಡಿಸಿದ್ದಾರೆ.

