ಮೈಸೂರು:’ಗೋಡಾ ಹೈ-ಮೈದಾನ್ ಹೈ’ ಚುನಾವಣೆಯಲ್ಲಿ ರಾಜಕಾರಣ ಮಾಡೋಣ, ನಾಡಹಬ್ಬದ ವಿಚಾರದಲ್ಲಿ ಕೆಟ್ಟ ರಾಜಕಾರಣ ಮಾಡುವುದು ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಸವಾಲು ಹಾಕಿದ್ದಾರೆ.
ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ನಂತರ ನಾಡಹಬ್ಬ ದಸರಾ ಉದ್ಘಾಟನಾ ವೇದಿಕೆಯಲ್ಲಿ ಮಾತನಾಡಿದ ಅವರು, ದಸರಾ ಮತ್ತು ಸಾಂಸ್ಕೃತಿಕ ಹಿರಿಮೆಯ ಪರಿಚಯ ಇಲ್ಲದವರು ಬಾನು ಮುಷ್ತಾಕ್ ಅವರನ್ನು ವಿರೋಧಿಸಿದರು, ಇತಿಹಾಸ ತಿರುಚಿ, ಸ್ವಾರ್ಥ ರಾಜಕೀಯ ಮಾಡುವುದು ಅಕ್ಷಮ್ಯ ಅಪರಾಧ, ರಾಜಕಾರಣ ಮಾಡುವುದಿದ್ದರೆ ಚುನಾವಣೆಯಲ್ಲಿ ಮಾಡೋಣ, ನಾಡಹಬ್ಬದ ವಿಚಾರದಲ್ಲಿ ಕೆಳಮಟ್ಟದ ರಾಜಕಾರಣ ಮಾಡುವುದು ಕ್ಷುಲ್ಲಕತನ ಎಂದರು.
ದಸರಾ ಉದ್ಘಾಟನೆ
ನಾಡಿನ ಬಹುಸಂಖ್ಯಾತ ಸಮುದಾಯ ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟನೆಯನ್ನು ಸ್ವಾಗತಿಸಿದೆ, ಇದು ಹೆಮ್ಮೆಯ ಸಂಗತಿ, ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತರು ದಸರಾ ಉದ್ಘಾಟಿಸಿರುವುದು ಸೂಕ್ತವಾಗಿದೆ.
ಬಾನು ಮುಷ್ತಾಕ್ ಮುಸ್ಲಿಂ ಮಹಿಳೆ ಎನ್ನುವುದಕ್ಕಿಂತ ಮಾನವೀಯ ಮೌಲ್ಯ ಪಾಲಿಸುವವರು, ಮನುಷ್ಯರು ಪರಸ್ಪರ ಪ್ರೀತಿಯಿಂದ ಬಾಳಬೇಕು, ದ್ವೇಷ ಮನುಷ್ಯತ್ವದ ವಿರೋಧಿ, ದ್ವೇಷ ಆಚರಿಸುವವರು ಮನುಷ್ಯತ್ವದ ವಿರೋಧಿಗಳು.
ಸಂವಿಧಾನ ಮೌಲ್ಯಗಳಾದ ಸಹಿಷ್ಣುತೆ, ಸಹಬಾಳ್ವೆ ಪಾಲಿಸುವವರು ಮಾತ್ರ ಅಪ್ಪಟ ಭಾರತೀಯರು, ಸಂವಿಧಾನ ಜಾತ್ಯತೀತ ಮತ್ತು ಧರ್ಮಾತೀತ, ಹೈಕೋರ್ಟ್, ಸುಪ್ರೀಂಕೋರ್ಟ್ ಸಹಾ ಇದನ್ನೇ ಹೇಳಿದೆ.

ಸಂವಿಧಾನ ತಿಳಿದಿರಬೇಕು
ಭಾರತೀಯರು ಎನ್ನುವ ಹೆಮ್ಮೆ ಯಾರಿಗೆ ಇರುತ್ತದೋ ಅವರಿಗೆ ಮಾತ್ರ ಸಂವಿಧಾನದ ಬಗ್ಗೆ ಹೆಮ್ಮೆ ಇರುತ್ತದೆ, ನಮಗೆ ನಮ್ಮ ಹಕ್ಕು ಮತ್ತು ಜವಾಬ್ದಾರಿಗಳು ಗೊತ್ತಾಗಬೇಕಾದರೆ ಸಂವಿಧಾನ ತಿಳಿದಿರಬೇಕು.
ನಮ್ಮದು ಸರ್ವಜನಾಂಗದ ಶಾಂತಿಯ ತೋಟ ಎಂಬ ರಾಷ್ಟ್ರಕವಿ ಕುವೆಂಪು ಮಾತನ್ನು ಮರೆಯಬಾರದು, ಗುಡಿ-ಚರ್ಚು-ಮಸೀದಿಗಳ ಬಿಟ್ಟು ಹೊರಬನ್ನಿ, ರಾಜ್ಯವನ್ನು ಗಟ್ಟಿಗೊಳಿಸಬೇಕಿದೆ.
ಗ್ಯಾರಂಟಿಗಳನ್ನು ಕದ್ದಿದ್ದಾರೆ
ಸಂವಿಧಾನದ ಆಶಯದಂತೆ ಎಲ್ಲಾ ಜಾತಿ, ಧರ್ಮದ ಬಡವರಿಗೆ ಗ್ಯಾರಂಟಿ ಜಾರಿ ಮಾಡಿದ್ದೇವೆ, ಬಿಜೆಪಿಯವರು ಗ್ಯಾರಂಟಿಗಳ ಫಲಾನುಭವಿಗಳಲ್ಲವೇ, ಗ್ಯಾರಂಟಿಗಳನ್ನು ವಿರೋಧಿಸುವ ಅವರೇ ನಮ್ಮ ಗ್ಯಾರಂಟಿಗಳನ್ನು ಕದ್ದಿದ್ದಾರೆ.
ಗ್ಯಾರಂಟಿಗಳು ನಿಲ್ಲುವುದಿಲ್ಲ, ಗ್ಯಾರಂಟಿಗಳಿಂದಾಗಿ ರಾಜ್ಯದ ಜನರ ತಲಾ ಆದಾಯ ಹೆಚ್ಚಳವಾಗಿದೆ, ಜಿಡಿಪಿಯಲ್ಲಿ ದೇಶದಲ್ಲೇ ನಂಬರ್ ಒನ್ ಆಗಿದ್ದೇವೆ ಎಂದರು.

