ಬೆಂಗಳೂರು:ರಾಜ್ಯ ವ್ಯಾಪಿ ಸಿಸಿ ಮತ್ತು ಓಸಿ ಇಲ್ಲದೆ ನಿರ್ಮಿಸಿದ ಕಟ್ಟಡಗಳಿಗೆ ವಿದ್ಯುತ್ ಮತ್ತು ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ಒಂದು ಬಾರಿಗೆ ಅನ್ವಯ ಆಗುವಂತೆ ಸರ್ಕಾರ ಮಹತ್ವದ ತೀರ್ಮಾನ ಕೈಗೊಳ್ಳಲಿದೆ.
ಈ ಸಂಬಂಧ ಸುಪ್ರೀಂಕೋರ್ಟ್ ತೀರ್ಪಿಗೆ ಮುನ್ನ ಓಸಿ ಮತ್ತು ಸಿಸಿಗೆ ಸಲ್ಲಿಸಿರುವ ಅರ್ಜಿಗಳಿಗೆ ಮಾತ್ರ ವಿನಾಯಿತಿ ನೀಡಲು ಸರ್ಕಾರ ಮುಂದಾಗಿದೆ.
ಸಿದ್ದರಾಮಯ್ಯ ತೀರ್ಮಾನ
ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹ ಕಚೇರಿ ಕೃಷ್ಣಾದಲ್ಲಿ ಓಸಿ ಮತ್ತು ಸಿಸಿ ಗೊಂದಲ ನಿವಾರಣೆಗೆ ಕರೆದಿದ್ದ ಸಚಿವರು ಮತ್ತು ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.
ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ಸೂಕ್ತ ಅನುಮತಿ ಇಲ್ಲದೆ, ಸುಮಾರು 2 ಲಕ್ಷಕ್ಕೂ ಹೆಚ್ಚು ಮನೆಗಳು ನಿರ್ಮಾಣಗೊಂಡಿವೆ, ಈ ಪೈಕಿ ಕೆಲವಲ್ಲಿ ವಾಸವೂ ಇದ್ದಾರೆ, ಅಂತಹವರಿಗೆ ಒಂದು ಬಾರಿಗೆ ಅನ್ವಯವಾಗುವಂತೆ ಕಾನೂನು ಅವಕಾಶ ಕಲಿಸುವ ಕುರಿತು ಚರ್ಚಿಸಲಾಗಿದೆ ಎಂದರು.
ಈಗಾಗಲೇ ನಿರ್ಮಾಣಗೊಂಡ ಕಟ್ಟಡಗಳನ್ನು ನೆಲಸಮ ಮಾಡಲು ಸಾಧ್ಯವಿಲ್ಲ, ಸರ್ಕಾರ ದೃಢ ನಿರ್ಧಾರ ಕೈಗೊಂಡರೆ ಜನರಿಗೆ ಅನಾನುಕೂಲ ಆಗಲಿದೆ.
ಸುಪ್ರೀಂಕೋರ್ಟ್ ಆದೇಶ
ಸುಪ್ರೀಂಕೋರ್ಟ್ ಆದೇಶವನ್ನು ಬೇರೆ ಬೇರೆ ರಾಜ್ಯಗಳಲ್ಲಿ ಯಾವ ರೀತಿ ಅನುಷ್ಟಾನಗೊಳಿಸಲಾಗಿದೆ ಎಂಬ ಮಾಹಿತಿ ಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.
ಅಕ್ಟೋಬರ್ 8ರಂದು ಮತ್ತೆ ಸಭೆ ಕರೆದು, ಅನುಮತಿ ಇಲ್ಲದೆ, ನಿರ್ಮಾಣಗೊಂಡ ಮನೆಗಳಿಗೆ ವಿದ್ಯುತ್ ಮತ್ತು ನೀರಿನ ಸಂಪರ್ಕ ನೀಡುವ ಕುರಿತು ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಎಲ್ಲ ರಾಜ್ಯಗಳಿಗೂ ಅನ್ವಯ
ಉತ್ತರ ಪ್ರದೇಶದವರೊಬ್ಬರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮೇಲೆ ತೀರ್ಪು ನೀಡಲಾಗಿದ್ದು, ಸುಪ್ರೀಂಕೋರ್ಟ್ ತೀರ್ಪು ಎಲ್ಲ ರಾಜ್ಯಗಳಿಗೂ ಅನ್ವಯವಾಗಲಿದೆ.
ಕಾನೂನಿನ ಅರಿವಿಲ್ಲದೆ ಸಾಲ ಮಾಡಿ ಮನೆ ಕಟ್ಟಿದ್ದಾರೆ, ಅಂತಹವರ ಮನೆಗಳನ್ನು ನೆಲಸಮ ಮಾಡಲು ಸಾಧ್ಯವಾಗದು, ಕಾನೂನು ಚೌಕಟ್ಟಿನಲ್ಲಿ ಒಂದು ಬಾರಿಗೆ ವಿನಾಯಿತಿ ನೀಡಲು ಸರ್ಕಾರ ಮುಂದಾಗಿದೆ ಎಂದರು.

