ಗುತ್ತಿಗೆದಾರರ ಸಂಘದಿಂದ ಸರ್ಕಾರದ ವಿರುದ್ಧ ಶೇಕಡ 80 ಕಮಿಷನ್ ಆರೋಪ
ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭ್ರಷ್ಟಾಚಾರ ಶೇಕಡ 80ರಷ್ಟು ಕಮಿಷನ್‌ಗೆ ತಲುಪಿದೆ ಎಂದು ಆರೋಪಿಸಿ ಪ್ರತಿಪಕ್ಷ ಬಿಜೆಪಿ ರಾಜ್ಯಾದ್ಯಂತ ’ಪೇ-ಸಿಎಂ’ ಆಂದೋಲನ ನಡೆಸಲು ಮುಂದಾಗಿದೆ.
ಹಿಂದಿನ ಬಿಜೆಪಿ ಆಡಳಿತಕ್ಕಿಂತ ಕಾಂಗ್ರೆಸ್ ಆಡಳಿತದಲ್ಲಿ ಕಮಿಷನ್ ದುಪ್ಪಟ್ಟುಗೊಂಡಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘ ಬಹಿರಂಗವಾಗಿಯೇ ಆರೋಪ ಮಾಡಿತ್ತು.
ಈ ಹಿಂದೆ ಬಿಜೆಪಿ ಮೇಲೆ ಆರೋಪ
ಬಿಜೆಪಿ ಆಡಳಿತ ಸಂದರ್ಭದಲ್ಲಿ ಇದೇ ಗುತ್ತಿಗೆದಾರರ ಸಂಘ, ಶೇಕಡ 40ರಷ್ಟು ಕಮೀಷನ್ ಪಡೆಯುತ್ತಿದೆ ಎಂಬುದಾಗಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧ ಆರೋಪ ಮಾಡಿದ ಬೆನ್ನಲ್ಲೇ ಕಾಂಗ್ರೆಸ್ ಇದನ್ನು ’ಪೇ ಟಿಎಂ’ ಸರ್ಕಾರ ಎಂದು ಬಿಂಬಿಸಿ ಮನೆ ಮಾತಾಗುವಂತೆ ಮಾಡಿದ್ದರು.
ನಂತರ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಇದನ್ನೂ ಅಸ್ತ್ರವನ್ನಾಗಿ ಮಾಡಿಕೊಂಡು ಅಧಿಕಾರ ಹಿಡಿಯಿತು.
ಕಳೆದ ಎರಡು ವರ್ಷಗಳಿಂದ ಅಧಿಕಾರದಲ್ಲಿರುವ ಕಾಂಗ್ರೆಸ್ ವಿರುದ್ಧವೂ ಗುತ್ತಿಗೆದಾರರ ಸಂಘ ಆರೋಪ ಮಾಡುತ್ತಲೇ ಬಂದಿತ್ತು, ಇದೀಗ ಬಿಜೆಪಿ ಆಡಳಿತಕ್ಕಿಂತ ಡಬಲ್ ಕಮೀಷನ್ ಪಡೆದು ಹಣ ಬಿಡುಗಡೆ ಮಾಡುತ್ತಿದ್ದಾರೆಂದು ಬಲವಾಗಿ ದೂರಿದ್ದಾರೆ.
ಕಮೀಷನ್ ಅಸ್ತ್ರ ಬಳಕೆ
ಇದನ್ನೇ ಅಸ್ತ್ರವಾಗಿ ಬಳಸಿ ರಾಜ್ಯಾದ್ಯಂತ ಹೋರಾಟಕ್ಕೆ ಬಿಜೆಪಿ ಮುಂದಾಗಿದೆ.
ದಸರಾ ಹಬ್ಬ ಮುಗಿಯುತ್ತಿದ್ದಂತೆ ರಾಜ್ಯ ಮುಖಂಡರು ಮತ್ತೊಮ್ಮೆ ಸಭೆ ಸೇರಿ ಪ್ರತಿ ಜಿಲ್ಲೆಯಲ್ಲೂ ಪೇ-ಸಿಎಂ ಪೋಸ್ಟರ್ ಆಂದೋಲನ ಹಾಗೂ ಸಾರ್ವಜನಿಕ ಸಭೆಗಳನ್ನು ನಡೆಸಲು ತೀರ್ಮಾನಿಸಿದ್ದಾರೆ.

