ಬೆಂಗಳೂರು:ನಾಯಕತ್ವ ಗೊಂದಲ ಪರಿಹರಿಸಿ ಸುಗಮ ಆಡಳಿತಕ್ಕೆ ಅವಕಾಶ ಮಾಡಿಕೊಡಿ ಎಂದು ಪಕ್ಷದ ವರಿಷ್ಠರಿಗೆ ಮನವಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣಕ್ಕೆ ಸೇರಿದ ಸಚಿವರು ಇಂದಿಲ್ಲಿ ನಿರ್ಧರಿಸಿದ್ದಾರೆ.
ನವೆಂಬರ್‌ನಲ್ಲಿ ಅಧಿಕಾರ ಹಸ್ತಾಂತರ ಊಹಾಪೋಹಗಳಿಗೆ ತೆರೆ ಎಳೆಯಲು ಸಚಿವರುಗಳು ಈ ತೀರ್ಮಾನಕ್ಕೆ ಬಂದಿದ್ದಾರೆ.
ಉಪಹಾರ ನೆಪದಲ್ಲಿ ಗೌಪ್ಯ ಸಭೆ
ಗೃಹ ಸಚಿವ ಡಾ.ಜಿ.ಪರಮೇಶ್ವರ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಇಂದು ಬೆಳಗಿನ ಉಪಹಾರ ನೆಪದಲ್ಲಿ ಗೌಪ್ಯ ಸಭೆ ನಡೆಸಿ ಸಿದ್ದರಾಮಯ್ಯ ಬೆನ್ನಿಗೆ ನಿಲ್ಲಲು ನಿರ್ಧರಿಸಿದ್ದಾರೆ.
ಸಚಿವ ಸ್ಥಾನ ತೊರೆದು ಪಕ್ಷದ ಹುದ್ದೆ ವಹಿಸಿಕೊಳ್ಳಲು ಮುಂದಾಗಿರುವ ಜಾರಕಿಹೊಳಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕು.
ವರಿಷ್ಠರು ಈ ತೀರ್ಮಾನ ಕೈಗೊಳ್ಳುವುದರಿಂದ ವಾಲ್ಮೀಕಿ ಸಮುದಾಯಕ್ಕೆ ಬೇರೆ ಬೇರೆ ಕಾರಣಗಳಿಂದ ಆಡಳಿತದಲ್ಲಿ ಆಗಿರುವ ಅನ್ಯಾಯ ಸರಿಪಡಿಸಲು ಸಾಧ್ಯವಾಗಲಿದೆ.
ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ
ಸಿದ್ದರಾಮಯ್ಯ ಅವರನ್ನೇ ಅಧಿಕಾರದಲ್ಲಿ ಮುಂದುವರೆಸಿದರೆ ಮುಂದಿನ ದಿನಗಳಲ್ಲಿ ಉತ್ತಮ ಆಡಳಿತ ನೀಡಿ ಪಕ್ಷವನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರಲು ಸಾಧ್ಯವಾಗುತ್ತದೆ.
ಜನ ಬೆಂಬಲ ಮತ್ತು ಶಾಸಕರ ಬೆಂಬಲ ಹೊಂದಿರುವ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸುವ ಕಾರ್ಯ ಯಾವುದೇ ಕಾರಣಕ್ಕೂ ಆಗಬಾರದು.
ಅಧಿಕಾರ ಹಸ್ತಾಂತರದ ಬಗ್ಗೆ ಎದ್ದಿರುವ ಊಹಾಪೋಹಗಳಿಗೆ ಸ್ಪಷ್ಟ ಸಂದೇಶ ನೀಡಿ, ಇನ್ನು ಮುಂದೆ ಯಾರೂ ಈ ವಿಷಯ ಕುರಿತು ಚಕಾರ ಎತ್ತದಂತೆ ನೋಡಿಕೊಳ್ಳಬೇಕೆಂದು ವರಿಷ್ಠರನ್ನು ಒತ್ತಾಯಿಸಲು ತೀರ್ಮಾನಿಸಿದ್ದಾರೆ.
ನಿಲುವು ತಿಳಿಸಲು ನಿರ್ಧಾರ
ಸದ್ಯದಲ್ಲೇ ವಿವಿಧ ಸಮುದಾಯಗಳ ಸಚಿವರುಗಳನ್ನು ಒಳಗೊಂಡ ನಿಯೋಗವನ್ನು ದೆಹಲಿಗೆ ಕೊಂಡೊಯ್ದು ವರಿಷ್ಠರಿಗೆ ನಿಲುವು ತಿಳಿಸಲು ನಿರ್ಧರಿಸಿದ್ದಾರೆ.
ಅಧಿಕಾರ ಹಂಚಿಕೆ ಆಗಲೇಬೇಕೆಂಬ ನಿಲುವು ತೆಗೆದುಕೊಂಡಿದ್ದೇ ಆದಲ್ಲಿ ಪರಿಶಿಷ್ಟ ಸಮುದಾಯಸೇರಿದ ವ್ಯಕ್ತಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಲಿದ್ದಾರೆ.
ಅಲ್ಲದೆ, ಪರಿಶಿಷ್ಟ ಸಮುದಾಯದ ಬೃಹತ್ ಸಮಾವೇಶವನ್ನು ಮೈಸೂರು, ತುಮಕೂರು ಇಲ್ಲವೇ ದಾವಣಗೆರೆಯಲ್ಲಿ ನಡೆಸಲು ಸಭೆ ನಿರ್ಧರಿಸಿದೆ.

