ಕಾಂಗ್ರೆಸ್ ಶಾಸಕಾಂಗ ಪಕ್ಷದಲ್ಲಿ ಹೆಚ್ಚಿನ ಸಂಖ್ಯಾಬಲದ ಅಗತ್ಯವೂ ಇದೆ
ಬೆಂಗಳೂರು:ಕಾಂಗ್ರೆಸ್ ವರಿಷ್ಠರ ಆಶೀರ್ವಾದದ ಜೊತೆಗೆ ಶಾಸಕರ ಬೆಂಬಲ ಹೊಂದಿದವರು ಮಾತ್ರ ಮುಖ್ಯಮಂತ್ರಿಯಾಗಲು ಸಾಧ್ಯ ಎಂದು ಸಿದ್ದರಾಮಯ್ಯ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲು ಶಾಸಕರ ಸಂಖ್ಯಾಬಲ ಅಗತ್ಯವಿಲ್ಲ, ಹೈಕಮಾಂಡ್ ಕೃಪೆ ಇದ್ದರೆ ಸಾಕು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ನಾನು ಅವರ ಹೇಳಿಕೆಗೆ ಏನನ್ನೂ ಹೇಳುವುದಿಲ್ಲ.
ಶಾಸಕರ ಬೆಂಬಲ ಇಲ್ಲದೆ ಯಾರೂ ಶಾಸಕಾಂಗ ಪಕ್ಷದ ನಾಯಕರಾಗಲು ಸಾಧ್ಯವಿಲ್ಲ, ಇದು ಎಲ್ಲರಿಗೂ ತಿಳಿದಿರುವ ವಿಚಾರ ಅಲ್ಲವೇ ಎಂದು ಕುಹಕವಾಗಿ ನುಡಿದರು.
ವರಿಷ್ಠರ ನಿರ್ಧಾರ ಅಂತಿಮ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ವಿಷಯದಲ್ಲಿ ನಮ್ಮ ಕಾಂಗ್ರೆಸ್ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರ ಅಂತಿಮ ಎಂದರು.
ಆದರೆ, ಶಾಸಕರ ಬೆಂಬಲ ಇಲ್ಲದೇ ಯಾರೂ ಮುಖ್ಯಮಂತ್ರಿ ಆಗುವುದಕ್ಕೆ ಸಾಧ್ಯವಿಲ್ಲ, ಬಹುಮತದ ಜೊತೆಗೆ ವರಿಷ್ಠರ ಕೃಪೆಯೂ ಇರಬೇಕು.
ನವೆಂಬರ್‌ನಲ್ಲಿ ರಾಜ್ಯ ಕಾಂಗ್ರೆಸ್‌ನಲ್ಲಿ ಕ್ರಾಂತಿ ಆಗುತ್ತದೆ ಎಂಬ ವದಂತಿಗಳನ್ನು ತಳ್ಳಿಹಾಕಿದ ಮುಖ್ಯಮಂತ್ರಿ, ಯಾವ ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ.
ಒಳ್ಳೆ ಆಡಳಿತ ನೀಡಿದ್ದೇನೆ
ಕಳೆದ ಎರಡೂವರೆ ವರ್ಷಗಳಿಂದ ಒಳ್ಳೆ ಆಡಳಿತ ನೀಡಿದ್ದು, ಮುಂದಿನ ಅವಧಿಗೂ ಒಳ್ಳೆ ಕಾರ್ಯಕ್ರಮ ನೀಡಿ ಜನರ ಮುಂದೆ ಹೋಗುತ್ತೇವೆ.
ಸಚಿವರ ಔತಣಕೂಟ ವಿಶೇಷವೇನಲ್ಲ, ದಸರಾ, ದೀಪಾವಳಿ ಪ್ರಯುಕ್ತ ಸಹೋದ್ಯೋಗಿಗಳ ಜೊತೆ ಒಂದೆಡೆ ಕುಳಿತು ಊಟ ಮಾಡುವುದು ಅಷ್ಟೇ.
ಡಿನ್ನರ್ ಪಾರ್ಟಿಗೂ ಸಂಪುಟ ಪುನರ್ ರಚನೆಗೂ ಯಾವುದೇ ಸಂಬಂಧವಿಲ್ಲ, ಆದರೆ, ನಿಮಗೆ (ಮಾಧ್ಯಮಗಳಿಗೆ) ಮತ್ತು ಬಿಜೆಪಿಯವರಿಗೆ ಇದು ವಿಶೇಷವಾಗಿ ಕಾಣುತ್ತಿದೆ.
ಸಚಿವರನ್ನು ನಾನು ತೆಗೆಯಲಿಲ್ಲ
ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಕಾರ್ಯ ಮುಗಿದಿದೆ, ಇನ್ನೇನಿದ್ದರೂ ಜನವರಿಯಲ್ಲೇ, ವಾಲ್ಮೀಕಿ ಸಮುದಾಯದ ಇಬ್ಬರು ಸಚಿವರನ್ನು ಸಂಪುಟದಿಂದ ನಾನು ತೆಗೆಯಲಿಲ್ಲ, ಆವರಾಗಿಯೇ ರಾಜೀನಾಮೆ ನೀಡಿದರು.
ಮುಂದಿನ ಸಂಪುಟ ಪುನರ್ ರಚನೆ ವೇಳೆ ಆ ಸಮುದಾಯಕ್ಕೆ ಅವಕಾಶ ದೊರೆಯಲಿದೆ, ಸದ್ಯಕ್ಕೆ ಅವರನ್ನು ತೆಗೆದುಕೊಳ್ಳುವ ವಿಚಾರ ನಮ್ಮ ಮುಂದಿಲ್ಲ ಎಂದರು.
ಆರ್‌ಎಸ್‌ಎಸ್‌ಗೆ ಕಡಿವಾಣ
ತಮಿಳುನಾಡು ಸರ್ಕಾರ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ಯಾವ ರೀತಿ ಕಡಿವಾಣ ಹಾಕಿದೆಯೋ ಅದೇ ರೀತಿ ಕರ್ನಾಟಕದಲ್ಲೂ ಕಡಿವಾಣ ಹಾಕಬೇಕು ಎಂದು ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದಾರೆ.
ಪತ್ರವನ್ನು ಸರ್ಕಾರದ ಮುಖ್ಯಕಾರ್ಯದರ್ಶಿ ಅವರಿಗೆ ರವಾನೆ ಮಾಡಿ, ತಮಿಳುನಾಡು ಸರ್ಕಾರದ ಮಾದರಿಯಲ್ಲಿ ಕ್ರಮ ಕೈಗೊಳ್ಳಿ ಎಂದು ಸೂಚಿಸಿರುವುದಾಗಿ ತಿಳಿಸಿದರು.

