ಬೆಂಗಳೂರು:ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಸೇರಿದಂತೆ ಎಲ್ಲ ಸಂಘ ಸಂಸ್ಥೆಗಳ ಚಟುವಟಿಕೆಗಳಿಗೆ ಸರ್ಕಾರ ಕಡಿವಾಣ ಹಾಕಿದೆ.
ಸರ್ಕಾರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಇನ್ನು ಮುಂದೆ ಯಾವುದೇ ಸಂಘ ಸಂಸ್ಥೆಗಳು ಚಟುವಟಿಕೆ ನಡೆಸಲು ಪೂರ್ವಾನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.
ಆರ್‌ಎಸ್‌ಎಸ್ ಶತಮಾನೋತ್ಸವ
ಆರ್‌ಎಸ್‌ಎಸ್ ಶತಮಾನೋತ್ಸವ ಆಚರಣೆ ವೇಳೆ ರಾಜ್ಯಾದ್ಯಂತ ಪಥಸಂಚಲನ ಹಾಗೂ ಸಾರ್ವಜನಿಕ ಸಮಾರಂಭಗಳನ್ನು ಹಮ್ಮಿಕೊಂಡಿತ್ತು.
ಪಥಸಂಚಲನದ ಬಗ್ಗೆ ಸಂಪುಟದ ಸಚಿವರೇ ಆಕ್ಷೇಪ ವ್ಯಕ್ತಪಡಿಸಿ, ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಮಾಡಿದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮಿಳುನಾಡು ಸರ್ಕಾರದ ಮಾದರಿಯಲ್ಲೇ ರಾಜ್ಯದಲ್ಲೂ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು.
ಇಂದು ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿ, ನೆರೆಯ ತಮಿಳುನಾಡಿನಲ್ಲಿ ತಂದಿರುವ ಕಾನೂನನ್ನೇ ಅಳವಡಿಸಿಕೊಂಡು ಆರ್‌ಎಸ್‌ಎಸ್ ಸೇರಿದಂತೆ ಯಾವುದೇ ಸಂಘ ಸಂಸ್ಥೆಗಳು ಪೂರ್ವಾನುಮತಿ ಪಡೆಯದೆ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ಆಯೋಜಿಸುವಂತಿಲ್ಲ ಎಂಬ ತೀರ್ಮಾನ ಕೈಗೊಂಡಿದೆ.
ಸ್ವಯಂ ಪ್ರೇರಿತ ಚಟುವಟಿಕೆ
ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್.ಕೆ.ಪಾಟೀಲ್, ಸರ್ಕಾರಿ ಸ್ಥಳಗಳಷ್ಟೇ ಅಲ್ಲದೆ, ಶಾಲಾ-ಕಾಲೇಜು, ಖಾಸಗಿ ಪ್ರದೇಶಗಳಲ್ಲೂ ಸ್ವಯಂ ಪ್ರೇರಿತವಾಗಿ ಚಟುವಟಿಕೆ ನಡೆಸುವಂತಿಲ್ಲ.
ಇರುವ ಕಾನೂನನ್ನು ಮತ್ತಷ್ಟು ಬಿಗಿಗೊಳಿಸಿ ಚಟುವಟಿಕೆಗಳಿಗೆ ನಿರ್ಬಂಧ ಹಾಕಲಾಗಿದೆ, ನಿಬಂಧನೆಗಳಿಗೆ ಸಂಬಂಧಿಸಿದಂತೆ ಗೃಹ ಇಲಾಖೆ ಆದೇಶ ಹೊರಡಿಸಲಿದೆ.
ಸಂಘ ಸಂಸ್ಥೆಗಳಿರಬಹುದು, ಇಲ್ಲವೇ ರಾಜಕೀಯ ಪಕ್ಷಗಳಾಗಿರಬಹುದು, ಏನೇ ಚಟುವಟಿಕೆ ಕೈಗೊಳ್ಳಬೇಕಾದರೂ ಕಾರಣ ನೀಡಿ ಗೃಹ ಇಲಾಖೆ ಅನುಮತಿ ಪಡೆಯಬೇಕು.
ಕಠಿಣ ಕಾನೂನು ಕ್ರಮ
ಶಾಂತಿ, ಸುವ್ಯವಸ್ಥೆ ಮತ್ತು ಸಾರ್ವಜನಿಕ ಆಸ್ತಿ ಕಾಪಾಡುವ ಉದ್ದೇಶದಿಂದ ಮುಂಜಾಗ್ರತೆಯಾಗಿ ಕಠಿಣ ಕಾನೂನು ಕ್ರಮ ತೆಗೆದುಕೊಂಡಿದೆ ಎಂದರು.
ಧಾರ್ಮಿಕ ಸಂಘಟನೆಗಳಷ್ಟೇ ಅಲ್ಲ, ಯಾವುದೇ ಸಂಸ್ಥೆ, ಪಕ್ಷಗಳಾದರೂ ಕಾನೂನು ಚೌಕಟ್ಟಿನಲ್ಲಿಯೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದರು.
ನಿಮ್ಹಾನ್ಸ್ ಶಾಖೆ
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ( ನಿಮ್ಹಾನ್ಸ್ ) ಶಾಖೆಗಳನ್ನು 100 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಹಾಗೂ ಕಲಬುರಗಿಯ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಆರಂಭಿಸಲು ಸಂಪುಟ ಅನುಮೋದನೆ ನೀಡಿದೆ.
ಜಯದೇವ ಹೃದ್ರೋಗ ಸಂಸ್ಥೆ ರಾಜ್ಯದ ವಿವಿಧ ಭಾಗಗಳಲ್ಲಿ ಶಾಖೆಗಳನ್ನು ತೆರೆದಿರುವ ಮಾದರಿಯಲ್ಲೇ ನಿಮ್ಹಾನ್ಸ್ ಶಾಖೆಗಳನ್ನು ಪ್ರಾರಂಭಿಸಲು ಸರ್ಕಾರ ನಿರ್ಧರಿಸಿದೆ.
ನರ ರೋಗ, ಮಾನಸಿಕ ಖಾಯಿಲೆಗಳು ಹಾಗೂ ಅಪಘಾತದಲ್ಲಿ ತಲೆಗೆ ಪಟ್ಟು ಬಿದ್ದವರು ಬೆಂಗಳೂರಿನ ನಿಮ್ಹಾನ್ಸ್‌ನಲ್ಲೇ ಚಿಕಿತ್ಸೆ ಪಡೆಯಬೇಕಿತ್ತು.
ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆ ಮೇಲೆ ಒತ್ತಡ ಹೆಚ್ಚಿರುವುದು ಹಾಗೂ ಸ್ಥಳೀಯವಾಗಿಯೇ ರೋಗಿಗಳಿಗೆ ಚಿಕಿತ್ಸೆ ದೊರೆಯಬೇಕೆಂಬ ಉದ್ದೇಶದಿಂದ ತಲಾ 50 ಕೋಟಿ ರೂ. ವೆಚ್ಚದಲ್ಲಿ ಶಾಖೆಗಳನ್ನು ತೆರೆಯಲು ಸಂಪುಟ ಸಮ್ಮತಿಸಿದೆ.
ವ್ಯಾಸ್ಕ್ಯೂಲರ್ ಶಸ್ತ್ರಚಿಕಿತ್ಸಾ ವಿಭಾಗ
ಸಂಜಯ ಗಾಂಧಿ ಅಪಘಾತ ಮತ್ತು ಅಸ್ತಿ ಚಿಕಿತ್ಸಾ ಸಂಸ್ಥೆಯಲ್ಲಿ ನೂತನ ವ್ಯಾಸ್ಕ್ಯೂಲರ್ ಶಸ್ತ್ರಚಿಕಿತ್ಸಾ ವಿಭಾಗವನ್ನು 26.09 ಕೋಟಿ ರೂ. ಅಂದಾಜು ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಿದೆ.
ವಿಜಯಪುರ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ 100 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭಿಸಲು ಸಮ್ಮತಿಸಿದೆ.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ತಲಾ 2 ಸೀರೆಗಳನ್ನು ನೀಡಲು 13.98 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.
ಅಂಗನವಾಡಿಗೆ ಔಷಧ ಕಿಟ್
ಅಲ್ಲದೆ, ರಾಜ್ಯದ 69,921 ಅಂಗನವಾಡಿಯ ಪ್ರತಿ ಘಟಕಕ್ಕೆ 1,500 ರೂ. ವೆಚ್ಚದಲ್ಲಿ ಔಷಧ ಕಿಟ್ ನೀಡಲು ಸಮ್ಮತಿಸಿದೆ.
ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣ ಮಾದರಿಯಲ್ಲಿ ಆನೇಕಲ್ ಸಮೀಪ 2,350 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಅಂತರ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಮತ್ತು ಕ್ರೀಡಾಂಗಣ ಸಂಕೀರ್ಣ ನಿರ್ಮಿಸಲು ಒಪ್ಪಿಗೆ ಸೂಚಿಸಿದೆ.

