ಬೆಂಗಳೂರು:ಶಿಕ್ಷಣ ಸಂಸ್ಥೆಗಳು, ಸಾರ್ವಜನಿಕ ರಸ್ತೆ ಹಾಗೂ ಸರ್ಕಾರಿ ಆವರಣಗಳಲ್ಲಿ ನಡೆಯುವ ನಮಾಜ್‌ಗೂ ತಡೆ ನೀಡುವಂತೆ ಕೇಂದ್ರದ ಮಾಜಿ ಸಚಿವ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
ಆರ್‌ಎಸ್‌ಎಸ್ ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಕೆಲವು ಕಠಿಣ ತೀರ್ಮಾನ ಕೈಗೊಂಡ ಬೆನ್ನಲ್ಲೇ ಯತ್ನಾಳ್ ಮುಖ್ಯಮಂತ್ರಿ ಅವರಿಗೆ ಸುದೀರ್ಘ ಪತ್ರ ಬರೆದು, ಸಾರ್ವಜನಿಕ ಹಾಗೂ ಸರ್ಕಾರಿ ಜಾಗಗಳಲ್ಲಿ ಸಂಘ ಸಂಸ್ಥೆಗಳು ಪೂರ್ವಾನುಮತಿ ಇಲ್ಲದೆ ಚಟುವಟಿಕೆ ನಡೆಸುವಂತಿಲ್ಲ ಎಂಬ ಆದೇಶ ಮುಸ್ಲೀಮರಿಗೂ ಅನ್ವಯವಾಗಬೇಕು.
ಅನುಮತಿ ಇಲ್ಲದೆ ನಮಾಜ್
ಅನುಮತಿ ಇಲ್ಲದೆ ರಸ್ತೆ ಹಾಗೂ ಸಾರ್ವಜನಿಕ ಸ್ಥಳ ಮತ್ತು ಸರ್ಕಾರಿ ಆವರಣಗಳಲ್ಲಿ ನಮಾಜ್ ಸಲ್ಲಿಸುತ್ತಿರುವ ದೃಶ್ಯಗಳು ನೋಡುತ್ತಲೇ ಇದ್ದೇವೆ.
ಇಂತಹ ಚಟುವಟಿಕೆಗಳಿಂದ ಪಾದಚಾರಿ ಹಾಗೂ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ, ಇದು ಭಾರತೀಯ ಸಂವಿಧಾನ 19 ಹಾಗೂ 21 ರಡಿ ಖಾತರಿಯಾದ ಮುಕ್ತ ಸಂಚಾರ ಮತ್ತು ಭದ್ರತೆಯ ಉಲ್ಲಂಘನೆಯಾಗಿದೆ.
ಹೀಗಾಗಿ ನಮಾಜ್ ಮಾಡಲು ಈ ಸ್ಥಳಗಳಲ್ಲಿ ವಿಶೇಷದ ಅನುಮತಿ ನೀಡಬಾರದು, ನೀವು ಕಳೆದ ಗುರುವಾರ ಸಂಪುಟ ಸಭೆಯಲ್ಲಿ ಕೈಗೊಂಡಿರುವ ತೀರ್ಮಾನ ಎಲ್ಲಾ ಸಮುದಾಯ ಹಾಗೂ ನಾಗರಿಕರಿಗೂ ಅನ್ವಯವಾಗಬೇಕು ಎಂದಿದ್ದಾರೆ.
ಪೋಲಿಸ್ ವರಿಷ್ಠಾಧಿಕಾರಿಗೆ ಆದೇಶಿಸಿ
ಇನ್ನು ಮುಂದೆ ಸರ್ಕಾರಿ ಕಾಯಿದೆ ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗೆ ಆದೇಶ ನೀಡುವಂತೆ ಒತ್ತಾಯಿಸಿದ್ದಾರೆ.
ಸರ್ಕಾರಿ ಕಚೇರಿ ಹಾಗೂ ಅನುದಾನಿತ ಸಂಸ್ಥೆಗಳಲ್ಲಿ ನಮಾಜ್‌ಗೆ ಅವಕಾಶ ನೀಡಬಾರದು, ಇಂತಹ ಸಂಸ್ಥೆಗಳಲ್ಲಿ ಕಾರ್ಯ ಚಟುವಟಿಕೆ ನಿರ್ಬಂಧಿಸಿ, ಒಂದು ವೇಳೆ ಈ ಧಾರ್ಮಿಕ ಚಟುವಟಿಕೆಗಳಿಗೆ ಅವಕಾಶ ನೀಡುವುದು ಆಡಳಿತದ ಮೇಲಿನ ನಂಬಿಕೆಗೆ ಚ್ಯುತಿ ತರುತ್ತದೆ.
ನೀತಿ ನಿರೂಪಣೆ ರೂಪಿಸಿ
ಕರ್ನಾಟಕ ಪೋಲಿಸ್ ಕಾಯಿದೆ ಮತ್ತು ಸಂಬಂಧಿತ ಸಂಚಾರ ನಿಯಮಗಳಡಿ ಸಾರ್ವಜನಿಕ ಸ್ಥಳಗಳನ್ನು ಧಾರ್ಮಿಕ ಉದ್ದೇಶಗಳಿಗೆ ಅನಧಿಕೃತವಾಗಿ ಬಳಸುವುದನ್ನು ತಡೆಗಟ್ಟಲು ಸ್ಪಷ್ಟವಾದ ನೀತಿ ನಿರೂಪಣೆಯನ್ನು ಸರ್ಕಾರ ರೂಪಿಸಬೇಕು.
ಕಾನೂನಿನ ಸಮಾನತೆ ಮತ್ತು ಸಾರ್ವಜನಿಕ ಶಿಸ್ತಿನ ಬಗ್ಗೆ ತನ್ನ ಬದ್ಧತೆಯನ್ನು ದೃಢಪಡಿಸಬೇಕೆಂದು ಮುಖ್ಯಮಂತ್ರಿ ಅವರನ್ನು ಯತ್ನಾಳ್ ಒತ್ತಾಯಿಸಿದ್ದಾರೆ.

