ಬೆಂಗಳೂರು:ಜಾತಿಗಣತಿ ಸಮೀಕ್ಷೆಯಲ್ಲಿ ಭಾಗವಹಿಸುವುದು ಕಡ್ಡಾಯವಲ್ಲ, ಸಾರ್ವಜನಿಕರು ನೀಡುವ ಮಾಹಿತಿಯ ಗೌಪ್ಯತೆ ಕಾಪಾಡಬೇಕು ಎಂಬ ಹೈಕೋರ್ಟ್ ಆದೇಶವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಗಾಳಿಗೆ ತೂರಿ ನ್ಯಾಯಾಂಗ ನಿಂದನೆ ಎಸಗುತ್ತಿದೆ ಎಂದು ವಿಧಾನಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಇಂದಿಲ್ಲಿ ಟೀಕಿಸಿದ್ದಾರೆ.
ಈ ಎರಡೂ ಅಂಶಗಳ ಬಗ್ಗೆ ಸ್ವತಃ ಹೈಕೋರ್ಟ್ ಸ್ಪಷ್ಟನೆ ನೀಡಿದಾಗ ಮಾಹಿತಿಯ ಗೌಪ್ಯತೆ ಕಾಪಾಡುವುದಾಗಿ ರಾಜ್ಯ ಸರ್ಕಾರ ಒಪ್ಪಿಕೊಂಡಿತ್ತು, ಆದರೆ, ಇನ್ಫೋಸಿಸ್‌ನ ಸುಧಾಮೂರ್ತಿ ಹಾಗೂ ನಾರಾಯಣಮೂರ್ತಿ ಕುಟುಂಬ ನೀಡಿದ ಮಾಹಿತಿ ಹೇಗೆ ಬಹಿರಂಗವಾಯಿತು.
ಸಮೀಕ್ಷೆ ಮಾಹಿತಿ ಸೋರಿಕೆ
ಸಾರ್ವಜನಿಕರು ನೀಡುವ ಮಾಹಿತಿ ಸೋರಿಕೆ ಮಾಡಿದ ಸರ್ಕಾರಿ ಅಧಿಕಾರಿ, ಸಿಬ್ಬಂದಿಗಳ ಮೇಲೆ ಕ್ರಮ ಜರುಗಿಸುತ್ತೀರಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಶೋಕ್ ಪ್ರಶ್ನಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಕಡ್ಡಾಯವಲ್ಲ ಎಂದು ಹೇಳಿರುವಾಗ ಸಮೀಕ್ಷೆಯಲ್ಲಿ ಭಾಗವಹಿಸದವರು ದೇಶದ್ರೋಹಿಗಳು ಎಂಬುದಾಗಿ ಆರೋಪಿಸಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ನ್ಯಾಯಾಲಯ ನಿಂದನೆಗೆ ಉತ್ತರಿಸುತ್ತಾರೆಯೇ ಎಂದಿದ್ದಾರೆ.
ನ್ಯಾಯಾಲಯದ ಆದೇಶ ಪಾಲನೆ ಮಾಡಿದವರು ದೇಶದ್ರೋಹಿ ಹೇಗಾಗುತ್ತಾರೆ ಎಂಬುದನ್ನು ಹರಿಪ್ರಸಾದ್ ರಾಜ್ಯದ ಜನತೆಗೆ ವಿವರಿಸಬೇಕು.
ಉದ್ಯಮಿಗಳಿಗೆ ಬೆದರಿಕೆ
ಬೆಂಗಳೂರಿನ ಗುಂಡಿಬಿದ್ದ ರಸ್ತೆಗಳ ಬಗ್ಗೆ ಜಾಗತಿಕ ಉದ್ಯಮಿಗಳು ದನಿ ಎತ್ತಿದಾಗ, ’ನಿಮ್ಮ ಸಿಎಸ್‌ಆರ್ ನಿಧಿಯಲ್ಲಿ ನೀವೇ ರಸ್ತೆಗುಂಡಿ ಮುಚ್ಚಿ, ಸಿಎಸ್‌ಆರ್ ನಿಧಿಯ ಲೆಕ್ಕಕೊಡಿ ಎಂಬುದಾಗಿ ಬೆದರಿಸಿ ಅವಮಾನ ಮಾಡಿದ ಕಾಂಗ್ರೆಸ್ ನಾಯಕರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ’ಇನ್ಫೋಸಿಸ್‌ನವರು ಬೃಹಸ್ಪತಿಗಳಾ, ಜಾತಿಗಣತಿ ಸಮೀಕ್ಷೆಯಲ್ಲಿ ಭಾಗವಹಿಸದವರು ದೇಶದ್ರೋಹಿಗಳು ಎಂದು ಹೀಯಾಳಿಸುವ ಮೂಲಕ ಮತ್ತೊಮ್ಮೆ ದರ್ಪ, ದುರಹಂಕಾರ ಮೆರೆದಿದ್ದಾರೆ.
ಲಕ್ಷಾಂತರ ಜನಕ್ಕೆ ಉದ್ಯೋಗ ಕೊಟ್ಟು ದೇಶದ ಆರ್ಥಿಕತೆಗೆ ಶಕ್ತಿ ತುಂಬುತ್ತಿರುವ ಉದ್ಯಮಿಗಳ ಬಗ್ಗೆ ನಾಲಿಗೆ ಹರಿಬಿಡುವ ಕಾಂಗ್ರೆಸ್ ನಾಯಕರಿಗೆ ನಿಜಕ್ಕೂ ನಾಚಿಕೆಯಾಗಬೇಕು ಎಂದು ಅಶೋಕ್ ನಿಂದಿಸಿದ್ದಾರೆ.

