ಐದು ದಿನ ದೆಹಲಿಯಲ್ಲಿ ಬಿಡಾರ; ಅಧಿಕಾರದಲ್ಲಿ ಮುಂದುವರೆಯುವ ತಂತ್ರಗಾರಿಕೆ
ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್ನಲ್ಲಿ ನವೆಂಬರ್ನಲ್ಲಿ ಕ್ರಾಂತಿ ಆಗುತ್ತದೆ ಎಂಬ ಚರ್ಚೆ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡ ಮರುದಿನವೇ ದೆಹಲಿ ಪ್ರವಾಸ ಕೈಗೊಳ್ಳುತ್ತಿದ್ದಾರೆ.
ನವೆಂಬರ್ 15ರಂದು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ದೆಹಲಿಗೆ ತೆರಳುತ್ತಿರುವ ಮುಖ್ಯಮಂತ್ರಿ, ಐದು ದಿನ ರಾಜಧಾನಿಯಲ್ಲೇ ಬಿಡಾರ ಹೂಡಲಿದ್ದಾರೆ. ಮುಖ್ಯಮಂತ್ರಿ ಕಾರ್ಯಾಲಯವು ನವೆಂಬರ್ 15ರ ನಂತರದ ಮೂರು ವಾರಗಳ ಕಾರ್ಯಕ್ರಮಗಳ ಪಟ್ಟಿ ಈಗಾಗಲೇ ಸಿದ್ಧಪಡಿಸಿದೆ.
ದೆಹಲಿ ಭೇಟಿಯ ಐದು ದಿನಗಳ ಖಾಸಗಿ ಕಾರ್ಯಕ್ರಮಗಳನ್ನು ಪಟ್ಟಿ ಮಾಡಲಾಗಿದೆ. ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡು ನವೆಂಬರ್ಗೆ ಎರಡೂವರೆ ವರ್ಷ ಅವಧಿ ಪೂರ್ಣಗೊಳ್ಳಲಿದೆ. ಕಾಂಗ್ರೆಸ್ ವಲಯದ ಮೂಲಗಳ ಪ್ರಕಾರ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ತಲಾ 30 ತಿಂಗಳ ಅಧಿಕಾರ ಹಂಚಿಕೆ ಒಪ್ಪಂದವಾಗಿದೆ.
ಇದರಂತೆ ಸಿದ್ದರಾಮಯ್ಯ ನವೆಂಬರ್ ಮೂರನೇ ವಾರದಲ್ಲಿ ಅಧಿಕಾರ ಬಿಟ್ಟುಕೊಡಬೇಕಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ನವೆಂಬರ್ 2ನೇ ವಾರದಲ್ಲಿ ದೆದಹಲಿಗೆ ತೆರಳಿ ಬಿಡಾರ ಹೂಡಿ ಅಧಿಕಾರ ಹಂಚಿಕೆ ಕುರಿತ ಗೊಂದಲ ನಿವಾರಿಸಲು ವರಿಷ್ಠರನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ.
ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಪಕ್ಷದ ಎಲ್ಲಾ ವರಿಷ್ಠರು ರಾಜಧಾನಿ ದೆಹಲಿಯಲ್ಲೇ ಇರುತ್ತಾರೆ. ಈ ವೇಳೆಯೇ ಪಕ್ಷದ ಅಧಿನಾಯಕ ರಾಹುಲ್ ಗಾಂಧಿ, ಎಐಸಿಸಿ ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಲಿರುವ ಸಿದ್ದರಾಮಯ್ಯ, ಅಧಿಕಾರದಲ್ಲಿ ಮುಂದುವರೆಯುವ ತಂತ್ರಗಾರಿಕೆ ನಡೆಸಲಿದ್ದಾರೆ.
ವರಿಷ್ಠರ ಮನದಾಳ ಅರಿಯುವ ಉದ್ದೇಶದಿಂದ ತಮ್ಮ ಮಂತ್ರಿಮAಡಲವನ್ನು ಪೂರ್ಣ ಪ್ರಮಾಣದಲ್ಲಿ ಪುನರ್ ರಚಿಸಲು ಅವಕಾಶ ನೀಡುವಂತೆ ಕೋರಲಿದ್ದಾರೆ. ಮಂತ್ರಿಮAಡಲ ಪುನಾರಚನೆಗೆ ಅವಕಾಶ ನೀಡಿದರೆ, ತಮ್ಮ ಸ್ಥಾನ ಗಟ್ಟಿ ಎಂದು ಮುಂದಿನ ರಾಜಕೀಯ ನಿರ್ಧಾರಗಳನ್ನು ಸಿದ್ದರಾಮಯ್ಯ ಕೈಗೊಳ್ಳುತ್ತಾರೆ.
ಒಂದು ವೇಳೆ ಮಂತ್ರಿ ಮಂಡಲ ಪುನಾರಚನೆಗೆ ಅವಕಾಶ ದೊರೆಯದಿದ್ದರೆ, ತಮ್ಮ ಮುಂದಿನ ರಾಜಕೀಯ ನಿರ್ಧಾರಗಳ ಬಗ್ಗೆ ಆಪ್ತರ ಜೊತೆ ಸಮಾಲೋಚನೆ ನಡೆಸಲಿದ್ದಾರಂತೆ. ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಅವರು ನೀಡುವ ಆದೇಶದ ಮೇಲೆ ಸಿದ್ದರಾಮಯ್ಯ ಅವರು ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

