ಬದಲಾದರೆ ರಾಜಕೀಯ ಬೆಳವಣಿಗೆಗಳು ತಲೆಕೆಳಗಾಗಲಿವೆ: ಕೆ.ಎನ್.ರಾಜಣ್ಣ
ಬೆಂಗಳೂರು:ಸಂಪುಟ ಪುನರ್ ರಚನೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅವಕಾಶ ನೀಡದಿದ್ದರೆ, ಮುಂದಿನ ರಾಜಕೀಯ ಬೆಳವಣಿಗೆಗಳು ಏನಾಗುವುದೋ ತಿಳಿಯದು ಎಂದು ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಕೆ.ಎನ್.ರಾಜಣ್ಣ ಇಂದಿಲ್ಲಿ ವರಿಷ್ಠರಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ಮಂತ್ರಿಮಂಡಲ ಪುನರ್ ರಚನೆಗೆ ಅವಕಾಶ ಮಾಡಿಕೊಟ್ಟರೆ ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿ ಅವಧಿ ಪೂರೈಸುತ್ತಾರೆ, ಒಂದು ವೇಳೆ ವರಿಷ್ಠರು ಸಂಪುಟ ಪುನರ್ ರಚನೆಗೆ ಅವಕಾಶ ನೀಡದಿದ್ದರೆ, ಎಲ್ಲಾ ರಾಜಕೀಯ ಬೆಳವಣಿಗೆಗಳು ತಲೆಕೆಳಗಾಗುತ್ತವೆ ಎಂದರು.
ಸಿದ್ದರಾಮಯ್ಯ ನಾಯಕತ್ವಕ್ಕೆ ತೀರ್ಪು
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿ ಆಗಿರಬೇಕು, ಕಳೆದ ಚುನಾವಣೆಯಲ್ಲಿ ಮತದಾರರು ಅವರ ನಾಯಕತ್ವಕ್ಕೆ ತೀರ್ಪು ನೀಡಿದ್ದಾರೆ ಎಂದರು.
ಬಿಜೆಪಿಗೆ ಬಿ.ಎಸ್.ಯಡಿಯೂರಪ್ಪ, ಜೆಡಿಎಸ್‌ಗೆ ಎಚ್.ಡಿ.ದೇವೇಗೌಡರು ಮತ್ತು ಅವರ ಕುಟುಂಬ ಹೇಗೆ ಅನಿವಾರ್ಯವೋ ಹಾಗೆಯೇ ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಅನಿವಾರ್ಯ ಎಂದಿದ್ದಾರೆ.
ದಲಿತ ಮುಖ್ಯಮಂತ್ರಿ ತಪ್ಪೇನಿದೆ
ಸಿದ್ದರಾಮಯ್ಯ ನಂತರ ದಲಿತರೊಬ್ಬರು ಮುಂದಿನ ಮುಖ್ಯಮಂತ್ರಿ ಆಗುವುದರಲ್ಲಿ ತಪ್ಪೇನಿದೆ ಎಂಬುದಾಗಿ ಪ್ರಶ್ನಿಸಿರುವ ಅವರು, ಆ ಸಮಾಜದವರು ನಾಯಕತ್ವ ವಹಿಸಿದರೆ ಎಲ್ಲರೂ ಸಂತೋಷ ಪಡಬೇಕು ಎಂದರು.
ಮತ್ತೊಂದೆಡೆ ಮುಖ್ಯಮಂತ್ರಿ ಆಪ್ತ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಕರ್ನಾಟಕ ಕಾಂಗ್ರೆಸ್ ನಾಯಕತ್ವದಲ್ಲಿರುವ ಗೊಂದಲವನ್ನು ವರಿಷ್ಠರು ಮಧ್ಯಪ್ರವೇಶಿಸಿ ಬಗೆಹರಿಸಬೇಕಿದೆ ಎಂದಿದ್ದಾರೆ.
ನವೆಂಬರ್ 30ರೊಳಗೆ ನಾಯಕತ್ವ ಸಮಸ್ಯೆ ಪರಿಹರಿಸಿ ಆಡಳಿತ ಸುಸೂತ್ರವಾಗಿ ನಡೆಯಲು ಅವಕಾಶ ಮಾಡಿಕೊಡಬೇಕು, ಅಲ್ಲದೆ, ಸಿದ್ದರಾಮಯ್ಯ ಅವರೇ ಐದು ವರ್ಷಕ್ಕೆ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು ಎಂದು ತಿಳಿಸಿದ್ದಾರೆ.
ಆಪ್ತ ಸಚಿವರ ಸ್ವಪ್ರೇರಿತ ಘೋಷಣೆ
ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಭಾನುವಾರ ದಿಢೀರನೆ ದೆಹಲಿಗೆ ತೆರಳುತ್ತಿದ್ದಂತೆ ಮುಖ್ಯಮಂತ್ರಿ ಆಪ್ತ ಸಚಿವರುಗಳು ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿ ಎಂದು ಸ್ವಪ್ರೇರಿತವಾಗಿ ಘೋಷಿಸುತ್ತಿದ್ದಾರೆ.
ಮುಖ್ಯಮಂತ್ರಿ ಪುತ್ರ ಡಾ.ಯತೀಂದ್ರ ಅಹಿಂದ ಸಂಘಟನೆಗೆ ಸಂಬಂಧಿಸಿದಂತೆ ತಮ್ಮನ್ನು ಮುಂದಿನ ನಾಯಕರೆಂದು ಬಿಂಬಿಸಿರುವುದನ್ನು ತಪ್ಪಾಗಿ ಅರ್ಥೈಸುವ ಅಗತ್ಯವಿಲ್ಲ, ಅವರ ಹೇಳಿಕೆಯಲ್ಲಿ ಸಿಎಲ್‌ಪಿ ನಾಯಕತ್ವ ಕುರಿತು ಪ್ರಸ್ತಾಪಿಸಿಲ್ಲ ಎಂದರು.
ಇದರ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಂಪುಟ ಪುನರ್ ರಚನೆ ವರಿಷ್ಠರ ತೀರ್ಮಾನ, ಅಲ್ಲಿಂದ ಇದುವರೆಗೆ ಯಾವುದೇ ಮಾಹಿತಿ ಬಂದಿಲ್ಲ, ಸೂಚನೆ ಬಂದರೆ ಪ್ರತಿಕ್ರಿಯಿಸಬಹುದು ಎಂದರು.
ದಲಿತರೊಬ್ಬರಿಗೆ ನಾಯಕತ್ವ
ದಲಿತ ನಾಯಕರೊಬ್ಬರು ಮುಖ್ಯಮಂತ್ರಿ ಆದರೆ ನಮ್ಮ ಸಮಾಜಕ್ಕೆ ದೊರೆಯುವ ದೊಡ್ಡ ಗೌರವ, ಆದರೆ, ಸದ್ಯಕ್ಕೆ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ, ಮುಂದೆ ಅಂತಹ ಅವಕಾಶ ಬಂದಾಗ ನಮ್ಮವರೊಬ್ಬರು ರಾಜ್ಯದ ನಾಯಕತ್ವ ವಹಿಸಿಕೊಳ್ಳಲಿ.
ಏಳು ಬಾರಿ ಸಂಸದರಾಗಿ, ಕೇಂದ್ರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿ ಇದೀಗ ನಮ್ಮ ಸಹೋದ್ಯೋಗಿ ಆಗಿರುವ ಕೆ.ಎಚ್.ಮುನಿಯಪ್ಪ ಮುಖ್ಯಮಂತ್ರಿ ಆದರೆ ಸಂತೋಷ, ಅಂತೂ ನಮ್ಮವರಿಗೆ ಅವಕಾಶ ದೊರೆಯಿತು ಎಂದು ನಿಟ್ಟುಸಿರು ಬಿಡಬಹುದು.
ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಲ್ಲ, ನನ್ನನ್ನೂ ಸೇರಿದಂತೆ ಹಲವರಿಗೆ ಮುಖ್ಯಮಂತ್ರಿ ಆಗಬೇಕೆಂಬ ಕನಸಿದೆ, ಅದಕ್ಕೆಲ್ಲಾ ಕಾಲ ಕೂಡಿ ಬರಬೇಕು ಎಂದರು.
ಗೊಂದಲ ವರಿಷ್ಠರು ಬಗೆಹರಿಸುತ್ತಾರೆ
ಕೃಷಿ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯಿಸಿ, ನಮ್ಮಲ್ಲಿ ಯಾವುದೇ ಗೊಂದಲ ಇದ್ದರೂ ಪಕ್ಷದ ವರಿಷ್ಠರು ಬಗೆಹರಿಸುತ್ತಾರೆ, ಅವರ ನಿರ್ಧಾರವೇ ಅಂತಿಮ.
ಪಕ್ಷದ ಚೌಕಟ್ಟನಲ್ಲಿ ಮುಖ್ಯಮಂತ್ರಿ ಸೇರಿದಂತೆ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ, ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರು ಅನ್ಯೋನ್ಯವಾಗಿರುವುದಕ್ಕೆ ನಮ್ಮ ದೆಹಲಿ ನಾಯಕತ್ವವೇ ಕಾರಣ.
ಪಕ್ಷ ಮತ್ತು ಸರ್ಕಾರದಲ್ಲಿ ಎಂತಹದ್ದೇ ಗೊಂದಲಗಳಿದ್ದರೂ ಅದನ್ನು ಬಗೆಹರಿಸುವ ಶಕ್ತಿ ದೆಹಲಿ ನಾಯಕರಿಗಿದೆ, ನಮ್ಮ ನಡುವೆ ಗೊಂದಲ ಸೃಷ್ಠಿಸಲು ಸಾಧ್ಯವಿಲ್ಲ ಎಂದಿದ್ದಾರೆ.

