ಬೆಂಗಳೂರು:ನವೆಂಬರ್ ಕ್ರಾಂತಿಯ ವದಂತಿ ಬೆನ್ನಲ್ಲೇ ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ರಾಜ್ಯಕ್ಕೆ ಎರಡು ದಿನಗಳ ಪ್ರವಾಸ ಕೈಗೊಳ್ಳುತ್ತಿದ್ದಾರೆ.
ಕರ್ನಾಟಕದಲ್ಲಿ 100 ಕಾಂಗ್ರೆಸ್ ಕಚೇರಿಗಳ ನಿರ್ಮಾಣ ಶಂಕುಸ್ಥಾಪನೆ ಕಾರ್ಯಕ್ಕೆ ರಾಹುಲ್ ನವೆಂಬರ್ 18 ರಿಂದ 21ರೊಳಗೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ.
ನಗರದ ರೇಸ್‌ಕೋರ್ಸ್ ರಸ್ತೆಯ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಕೆಪಿಸಿಸಿ ಬೃಹತ್ ಸಮಾರಂಭ ಹಮ್ಮಿಕೊಂಡಿದೆ.
ರಾಹುಲ್ ಗಾಂಧಿ ನಗರಕ್ಕೆ
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಎಲ್ಲಾ ಮುಖಂಡರು ನಗರಕ್ಕೆ ಧಾವಿಸುತ್ತಿದ್ದಾರೆ.
ನವೆಂಬರ್ 20ಕ್ಕೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಎರಡು ವರ್ಷ ಪೂರ್ಣಗೊಳ್ಳುತ್ತಿದೆ, ಉಳಿದ ಅಧಿಕಾರಾವಧಿಯನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಹಸ್ತಾಂತರಿಸಲಿದ್ದಾರೆ ಎಂಬ ದಟ್ಟ ವದಂತಿ ಹಿನ್ನೆಲೆಯಲ್ಲಿ ರಾಹುಲ್ ಭೇಟಿ ಮಹತ್ವ ಪಡೆದಿದೆ.
ಅಧಿಕಾರ ಹಸ್ತಾಂತರ ಕುರಿತಂತೆ ಕಳೆದ ಆರು ತಿಂಗಳಿಂದ ಸರ್ಕಾರ ಮತ್ತು ರಾಜ್ಯ ಕಾಂಗ್ರೆಸ್‌ನಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.
ವಾಸ್ತವಸ್ಥಿತಿ ಏನು
ಆದರೆ, ವಾಸ್ತವಸ್ಥಿತಿ ಏನೆಂಬುದನ್ನು ಮುಖ್ಯಮಂತ್ರಿಯಾಗಲಿ, ಉಪಮುಖ್ಯಮಂತ್ರಿಯಾಗಲಿ ಇದುವರೆಗೂ ಬಹಿರಂಗಪಡಿಸಿಲ್ಲ, ಆದರೆ, ಅವರ ಆಪ್ತರು ಸಾರ್ವಜನಿಕವಾಗಿ ಚರ್ಚಿಸುತ್ತಿದ್ದಾರೆ.
ಇದಕ್ಕೆ ಇತಿಶ್ರೀ ಹಾಡುವ ಉದ್ದೇಶದಿಂದಲೇ ಮುಖ್ಯಮಂತ್ರಿ ವರಿಷ್ಠರ ಭೇಟಿ ಮಾಡಿ ನಾಯಕತ್ವ ಕುರಿತ ಗೊಂದಲಕ್ಕೆ ತೆರೆ ಎಳೆಯುವ ಉದ್ದೇಶದಿಂದ ನವೆಂಬರ್ 15ರಿಂದ 20 ರವರೆಗೆ ಖಾಸಗಿ ಕಾರ್ಯಕ್ರಮ ನಿಮಿತ್ತ ದೆಹಲಿಯಲ್ಲೇ ಉಳಿಯಲಿದ್ದಾರೆ.
ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ಕಪಿಲ್ ಸಿಬಲ್ ಬರೆದಿರುವ ಪುಸ್ತಕ ಬಿಡುಗಡೆ ಸಮಾರಂಭ ನವೆಂಬರ್ 15 ರಂದು ನಡೆಯಲಿದ್ದು ಆ ಕಾರ್ಯಕ್ರಮದಲ್ಲಿ ಭಾಗವಹಿಸುವ ಉದ್ದೇಶ ಇಟ್ಟುಕೊಂಡು ಮುಖ್ಯಮಂತ್ರಿ ದೆಹಲಿ ಪ್ರವಾಸ ಕೈಗೊಳ್ಳುತ್ತಿದ್ದಾರೆ.
ಅಧಿಕಾರ ಹಸ್ತಾಂತರ ಗೊಂದಲ
ಈ ಸಂದರ್ಭದಲ್ಲೇ ರಾಹುಲ್ ಗಾಂಧಿ ಹಾಗೂ ಪಕ್ಷದ ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಭೇಟಿ ಮಾಡಿ ಸಂಪುಟ ಪುನರ್ ರಚನೆಗೆ ಅವಕಾಶ ಮಾಡಿಕೊಡುವಂತೆ ಮತ್ತು ಅಧಿಕಾರ ಹಸ್ತಾಂತರ ಗೊಂದಲಕ್ಕೆ ತೆರೆ ಎಳೆಯುವಂತೆ ಮನವಿ ಮಾಡಿಕೊಳ್ಳಲಿದ್ದಾರೆ.
ಮುಖ್ಯಮಂತ್ರಿ ಅವರ ಪ್ರವಾಸ ಮಾಹಿತಿ ಅರಿತ ಡಿ.ಕೆ.ಶಿವಕುಮಾರ್, ಕಳೆದ ಎರಡು ದಿನಗಳ ಹಿಂದೆ ದಿಢೀರನೆ ದೆಹಲಿಗೆ ತೆರಳಿ ಪಕ್ಷದ 100 ಕಚೇರಿ ನಿರ್ಮಾಣ ಶಂಕುಸ್ಥಾಪನೆಗೆ ನಾಯಕರನ್ನು ಆಹ್ವಾನಿಸಿ ಕರ್ನಾಟಕಕ್ಕೆ ಕರೆ ತರುವ ಪ್ರಯತ್ನ ನಡೆಸಿದ್ದಾರೆ.
ರಾಹುಲ್ ಗಾಂಧಿ ರಾಜ್ಯ ಪ್ರವಾಸ ವೇಳೆ ಸಿದ್ದರಾಮಯ್ಯ ದೆಹಲಿಯಲ್ಲಿ ಉಳಿಯಲು ಸಾಧ್ಯವಿಲ್ಲ, ರಾಜ್ಯಕ್ಕೆ ಹಿಂತಿರುಗಬೇಕಾಗುತ್ತದೆ.
ರಾಹುಲ್ ರಾಜ್ಯ ಪ್ರವಾಸಕ್ಕೆ ಮುನ್ನವೇ ಸಿದ್ದರಾಮಯ್ಯ ಕರ್ನಾಟಕ ಆಡಳಿತ ಪಕ್ಷದಲ್ಲಿನ ಗೊಂದಲ ನಿವಾರಿಸಿಕೊಳ್ಳಬೇಕಿದೆ.

