ನವೆಂಬರ್ 21 ಅಥವಾ 26ಕ್ಕೆ ಅಧಿಕಾರ ವಹಿಸಿಕೊಳ್ಳಲು ಸಕಲ ಸಿದ್ಧತೆ
ಬೆಂಗಳೂರು:ಸಿದ್ದರಾಮಯ್ಯ ಆಪ್ತ ಸಚಿವರು ಎಷ್ಟೇ ಅಪಸ್ವರ ಎತ್ತಿದರೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ನವೆಂಬರ್ 21 ಅಥವಾ 26ಕ್ಕೆ ಅಧಿಕಾರ ವಹಿಸಿಕೊಳ್ಳುವ ಮುಹೂರ್ತ ಫಿಕ್ಸ್ ಆಗಿದೆ.
ನಿರ್ದಿಷ್ಟ ದಿನ ಮತ್ತು ಶುಭ ಗಳಿಗೆಯ ಮಾಹಿತಿಯನ್ನು ಶಿವಕುಮಾರ್, ಭಕ್ತಿ-ಭಾವದಿಂದ ನಂಬಿರುವ ತುಮಕೂರು ಜಿಲ್ಲೆ ಮಠದ ಗುರುಗಳು, 21, 26 ಸೇರಿದಂತೆ ನಾಲ್ಕು ದಿನಗಳ ಶುಭ ಗಳಿಗೆಯ ಮುಹೂರ್ತ ನಿಗದಿ ಪಡಿಸಿದ್ದಾರೆ.
ಸಿದ್ದರಾಮಯ್ಯ ಎರಡೂವರೆ ವರ್ಷ
ಬರುವ ನವೆಂಬರ್ 20ಕ್ಕೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಎರಡೂವರೆ ವರ್ಷ ಅವಧಿ ಪೂರ್ಣಗೊಳ್ಳಲಿದೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವುದಕ್ಕೂ ಮುನ್ನ ವರಿಷ್ಠರ ಸಮ್ಮುಖದಲ್ಲಿ ತಲಾ ಎರಡೂವರೆ ವರ್ಷಗಳ ಅಧಿಕಾರಾವಧಿ ಸೂತ್ರ ರೂಪಿಸಲಾಗಿತ್ತು.
ಸಿದ್ದರಾಮಯ್ಯ ಅಧಿಕಾರಾವಧಿ ಪೂರ್ಣಗೊಳ್ಳುವ ಸಮಯ ಹತ್ತಿರವಾಗುತ್ತಿದ್ದಂತೆ ಶಿವಕುಮಾರ್, ಕಳೆದ ಎರಡು ತಿಂಗಳಿನಲ್ಲಿ ಎರಡು-ಮೂರು ಬಾರಿ ಖಾಸಗಿ ಕಾರ್ಯಕ್ರಮ ಹೆಸರಿನಲ್ಲಿ ದೆಹಲಿಗೆ ತೆರಳಿ ವರಿಷ್ಠರನ್ನು ತೆರೆಮರೆಯಲ್ಲಿ ಭೇಟಿ ಮಾಡಿದ್ದರು.
ಭರವಸೆಯಂತೆ ಅಧಿಕಾರ
ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವು ಹಿರಿಯ ಮುಖಂಡರು ನೀಡಿರುವ ಭರವಸೆಯಂತೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ.
ಕಳೆದ ಎರಡು-ಮೂರು ದಿನಗಳ ಹಿಂದೆ ಹಠಾತ್ತಾಗಿ ದೆಹಲಿಗೆ ತೆರಳಿದ್ದ ಶಿವಕುಮಾರ್ ಕೆಲವು ನಾಯಕರನ್ನು ಭೇಟಿ ಮಾಡಿದ್ದರು, ಇದರ ನಂತರ ಮುಖ್ಯಮಂತ್ರಿ ಗಾದಿಗೇರುವ ಖಾತ್ರಿ ಹೆಚ್ಚಿದೆ.
ರಾಜ್ಯದ 34ನೇ ಮುಖ್ಯಮಂತ್ರಿಯಾಗಿ ಹಾಗೂ 24ನೇ ಮುಖ್ಯಮಂತ್ರಿ ವ್ಯಕ್ತಿಯಾಗಿ ಶಿವಕುಮಾರ್ ಅಧಿಕಾರ ಸ್ವೀಕರಿಸಲು ಅಣಿಯಾಗಿದ್ದಾರೆ.

ಫೇಸ್ಬುಕ್-ಇನ್ಸ್ಟಾಗ್ರಾಂ
ಈ ಬೆಳವಣಿಗೆಗೆ ಪುಷ್ಟಿ ಎಂಬಂತೆ ಶಿವಕುಮಾರ್ ಅವರ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಇಂದು ಮುಂಜಾನೆ ಪೋಸ್ಟ್ ಒಂದು ಹಾಕಿದ್ದು, ಅದರಲ್ಲಿ ಸಂಕ್ಷಿಪ್ತವಾಗಿ ವ್ಯಕ್ತಿ ಪರಿಚಯವನ್ನು ಇಂಗ್ಲೀಷ್ನಲ್ಲಿ ನೀಡಲಾಗಿದೆ.
ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಹಾಗೂ ಕೊನೆಯ ಹಂತದ ಮತದಾನ ನಡೆಯುವ ನವೆಂಬರ್ 11ರಂದು ಶಿವಕುಮಾರ್ ದೆಹಲಿಗೆ ತೆರಳಲಿದ್ದಾರೆ.
ಚುನಾವಣಾ ಪ್ರಚಾರ ಮುಗಿದು ಎಲ್ಲ ವರಿಷ್ಠ ನಾಯಕರು ದೆಹಲಿಗೆ ಹಿಂದಿರುಗಿರುತ್ತಾರೆ, ಇದೇ ಸಮಯದಲ್ಲೇ ಅಧಿಕಾರ ಹಸ್ತಾಂತರ ಹಾಗೂ ಅಧಿಕಾರ ಸ್ವೀಕಾರ ಸಮಯ ಸೇರಿದಂತೆ ಎಲ್ಲವೂ ನಿಗದಿಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಹೊಸಬರಿಗೆ ಅವಕಾಶ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿನ ಬಹುತೇಕ ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಮಾಡಿಕೊಡಬೇಕೆಂಬ ತೀರ್ಮಾನ ತೆಗೆದುಕೊಂಡಿದ್ದಾರೆ.
ಖರ್ಗೆ ನೀಡಿರುವ ಸಂದೇಶಕ್ಕೆ ಪುಷ್ಟಿ ಎಂಬಂತೆ ಕೃಷ್ಣಬೈರೇಗೌಡ ಎರಡೂವರೆ ವರ್ಷಗಳ ನಂತರ ನಾವೆಲ್ಲಾ ಅಧಿಕಾರ ತೊರೆಯಬೇಕಾಗುತ್ತದೆ ಎಂದು ಈ ಹಿಂದೆಯೇ ಹೇಳಿದ್ದರು.

ನುಂಗಲಾರದ ತುತ್ತು
ಆದರೆ, ಸಿದ್ದರಾಮಯ್ಯ ಆಪ್ತರಿಗೆ ಖರ್ಗೆ ಆದೇಶ ನುಂಗಲಾರದ ತುತ್ತಾಗಿದ್ದು, ಅಧಿಕಾರ ಹಸ್ತಾಂತರ ವಿಷಯ ಪ್ರಸ್ತಾಪಿಸಿ ಐದು ವರ್ಷ ನಮ್ಮ ನಾಯಕರೇ ಮುಂದುವರೆಯುತ್ತಾರೆ ಎಂಬ ಹೇಳಿಕೆ ನೀಡುತ್ತಿದ್ದರು.
ಇಷ್ಟೆಲ್ಲಾ ಬೆಳವಣಿಗೆ ನಡುವೆಯೂ ಶಿವಕುಮಾರ್ ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಯಾವುದೇ ಸುಳಿವು ಬಹಿರಂಗ ಪಡಿಸದೆ ಶುಭ ಮುಹೂರ್ತಕ್ಕಾಗಿ ಕಾಯುತ್ತಿದ್ದಾರೆ.

