ಬೆಂಗಳೂರು:ನವೆಂಬರ್ ಕ್ರಾಂತಿಯ ಹೇಳಿಕೆ ನೀಡಿದ್ದ ಮಾಜಿ ಸಚಿವ ಕೆ.ಎನ್.ರಾಜಣ್ಣ ಬರುವ ತಿಂಗಳ 8ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಸಚಿವರು, ಶಾಸಕರಿಗೆ ಔತಣಕೂಟ ಏರ್ಪಡಿಸಿದ್ದಾರೆ.
ಸಿದ್ದರಾಮಯ್ಯ ಕೈಬಲಪಡಿಸುವ ಮತ್ತು ನಿಮ್ಮ ಜೊತೆ ನಾವಿದ್ದೇವೆ ಎಂಬ ಶಕ್ತಿ ಪ್ರದರ್ಶನಕ್ಕೆ ಈ ಔತಣಕೂಟ ನಡೆಯಲಿದೆ.
ಸಿದ್ದರಾಮಯ್ಯಗೂ ಆಹ್ವಾನ
ರಾಜಣ್ಣ ತಮ್ಮ ನಿವಾಸದಲ್ಲಿ ಔತಣಕೂಟ ಏರ್ಪಡಿಸಿದ್ದು, ಸಿದ್ದರಾಮಯ್ಯ ಅವರಿಗೂ ಆಹ್ವಾನ ನೀಡಲಿದ್ದಾರೆ.
ನವೆಂಬರ್ 20ಕ್ಕೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಎರಡೂವರೆ ವರ್ಷ ಆಗಲಿದ್ದು, ಮುಖ್ಯಮಂತ್ರಿ ಗಾದಿಯಲ್ಲಿ ಕೂರಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೆಹಲಿ ಮಟ್ಟದಲ್ಲಿ ಎಲ್ಲಾ ತಂತ್ರಗಾರಿಕೆ ನಡೆಸಿದ್ದಾರೆ.
ಶಿವಕುಮಾರ್ ತಂತ್ರಗಾರಿಕೆ ಮತ್ತು ಪ್ರಮಾಣವಚನಕ್ಕೆ ಸಮಯ ನಿಗದಿ ಮಾಡಿರುವ ಮಾಹಿತಿ ಲಭ್ಯವಾಗುತ್ತಿದ್ದಂತೆ ಸಿದ್ದರಾಮಯ್ಯ ಬೆಂಬಲಿಗರು ರಾಜಣ್ಣ ಮೂಲಕ ಈ ಔತಣಕೂಟ ಏರ್ಪಡಿಸಿದ್ದಾರೆ.
ಅಧಿಕಾರದಲ್ಲಿ ಮುಂದುವರೆಯಬೇಕು
ಸಿದ್ದರಾಮಯ್ಯ ಅಧಿಕಾರದಲ್ಲಿ ಮುಂದುವರೆಯಬೇಕು, ಅಧಿಕಾರ ಹಸ್ತಾಂತರ ಬೇಡ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀಡಿದ ಭರವಸೆ ಮತ್ತು ನಾಯಕತ್ವಕ್ಕೆ ಮತದಾರರು ಕಾಂಗ್ರೆಸ್ ಬೆಂಬಲಿಸಿದ್ದಾರೆ.
ಜನರ ತೀರ್ಪಿಗೆ ತಕ್ಕಂತೆ ಐದು ವರ್ಷ ಮುಖ್ಯಮಂತ್ರಿ ಆಗಬೇಕು, ಮುಂಬರುವ ವಿಧಾನಸಭಾ ಚುನಾವಣೆ ನಿಮ್ಮ ನಾಯಕತ್ವದಲ್ಲೇ ಎದುರಿಸಬೇಕೆಂಬ ನಿರ್ಣಯ ಕೈಗೊಂಡು ಸಿದ್ದರಾಮಯ್ಯ ಅವರಿಗೆ ತಿಳಿಸಲಿದ್ದಾರೆ.
ಪಕ್ಷದ ವರಿಷ್ಠರ ಯಾವುದೇ ಒತ್ತಡಗಳಿಗೆ ಮಣಿಯುವುದು ಬೇಡ, ಶಾಸಕರ ಬೆಂಬಲ ನಿಮಗಿದೆ, ಬೇಕಾದರೆ ಮತ್ತೊಮ್ಮೆ ಶಾಸಕಾಂಗ ಸಭೆ ಕರೆದು ಬಹುಮತ ಯಾರಿಗಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಲಿ.
ಏಕಾಂಗಿ ನಿರ್ಧಾರ ಬೇಡ
ನೀವು ಏಕಾಂಗಿಯಾಗಿ ಯಾವ ನಿರ್ಧಾರವನ್ನೂ ಕೈಗೊಳ್ಳಬೇಡಿ, ನಾವು ನಿಮ್ಮ ಜೊತೆಯಲ್ಲಿದ್ದೇವೆ, ಅಗತ್ಯಬಿದ್ದರೆ ವರಿಷ್ಠರಿಗೂ ಮನವರಿಕೆ ಮಾಡಿಕೊಡುತ್ತೇವೆ ಎನ್ನಲಿದ್ದಾರೆ.
ಔತಣಕೂಟ ವೇಳೆ ದಲಿತರ ಸಮಾವೇಶ ಎಲ್ಲಿ ನಡೆಸಬೇಕೆಂಬ ತೀರ್ಮಾನವನ್ನೂ ಸಭೆ ಕೈಗೊಳ್ಳಲಿದೆ.
ಪರಿಶಿಷ್ಟ ಜಾತಿಗೆ ಒಳಮೀಸಲಾತಿ ಅನುಷ್ಟಾನಗೊಳಿಸಿದ ಮುಖ್ಯಮಂತ್ರಿ ಅವರನ್ನು ಅಭಿನಂದಿಸುವ ನೆಪದಲ್ಲಿ ದಲಿತರ ಸಮಾವೇಶ ನಡೆಯಲಿದೆ.
ದಲಿತ ನಾಯಕರಿಗೆ ಅವಕಾಶ
ಸಿದ್ದರಾಮಯ್ಯ ನಂತರ ದಲಿತ ಸಮುದಾಯದ ನಾಯಕರಿಗೆ ಅವಕಾಶ ಮಾಡಿಕೊಡಬೇಕು ಎಂಬ ನಿರ್ಣಯವನ್ನು ಸಮಾವೇಶದಲ್ಲಿ ಕೈಗೊಳ್ಳಲಿದ್ದಾರೆ.
ಸಮಾವೇಶವನ್ನು ನವೆಂಬರ್ 15ರೊಳಗೆ ದಾವಣಗೆರೆ ಅಥವಾ ಚಿತ್ರದುರ್ಗದಲ್ಲಿ ಮಾಡಬೇಕೆಂಬ ಬಗ್ಗೆ ಸಭೆ ತೀರ್ಮಾನಿಸಲಿದೆ.
ಔತಣಕೂಟದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಣ್ಣ, ನಾನು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮುಖ್ಯಮಂತ್ರಿಯಾದಿಯಾಗಿ ಸಚಿವರು ಮತ್ತು ಶಾಸಕರಿಗೆ ಬೋಜನ ವ್ಯವಸ್ಥೆ ಮಾಡಲು ನಿರ್ಧರಿಸಿದ್ದೆ.
ಇದೀಗ ಕಾಲ ಕೂಡಿ ಬಂದಿದೆ, ನನ್ನ ಮನೆಯಲ್ಲೇ ಔತಣಕೂಟ ಏರ್ಪಡಿಸಿದ್ದು, ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದಿದ್ದಾರೆ.

