ಅಧಿಕಾರ ಹಂಚಿಕೆ ಕುರಿತು ಬೇರೆಯವರು ದಣಿವು ಮಾಡಿಕೊಳ್ಳಬೇಡಿ
ಬೆಂಗಳೂರು:ಅಧಿಕಾರ ಹಂಚಿಕೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಏನು ಮಾತುಕತೆ ನಡೆದಿದೆಯೋ ಅದೇ ಅಂತಿಮ, ಈ ಬಗ್ಗೆ ಯಾರೂ ದಣಿವು ಮಾಡಿಕೊಳ್ಳುವುದು ಬೇಡ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ನವೆಂಬರ್ ಕ್ರಾಂತಿ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಮುಖ್ಯಮಂತ್ರಿ ಮತ್ತು ನಮ್ಮ ನಡುವೆ ಒಳ್ಳೆ ಬಾಂಧವ್ಯ ಇರುವಾಗ ನೀವು (ಮಾಧ್ಯಮ) ಹಾಗೂ ಸಚಿವರು, ಮುಖಂಡರುಗಳು ಮಾತನಾಡಿ ಆಯಾಸ ಮಾಡಿಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.
ಉತ್ತಮ ಸರ್ಕಾರ ನೀಡಿದ್ದೇವೆ
ಸುದ್ದಿಗಾರರೊಂದಿಗೆ ಹಸನ್ಮುಖಿಯಾಗಿ ಮಾತನಾಡಿದ ಶಿವಕುಮಾರ್, ನಮ್ಮಿಬ್ಬರ ನಡುವೆ ಸಾಮರಸ್ಯ ಇರುವುದರಿಂದಲೇ ಉತ್ತಮ ಸರ್ಕಾರ ನೀಡಿದ್ದೇವೆ, ಪಂಚ ಗ್ಯಾರಂಟಿಗಳನ್ನು ಯಶಸ್ವಿಯಾಗಿ ನೀಡಿದ್ದೇವೆ ಎಂದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಟ್ಟಾಗಿ ಹೋರಾಟ ಮಾಡಿದ್ದರಿಂದಲೇ 135 ಸ್ಥಾನಗಳಲ್ಲಿ ಜಯಗಳಿಸಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಿತು.
ಒಗ್ಗಟ್ಟಿನಿಂದ ೧೪೧ಕ್ಕೆ ತಲುಪಿದ್ದೇವೆ
ನಮ್ಮ ಒಗ್ಗಟ್ಟಿನಿಂದ 135 ರಿಂದ 141ಕ್ಕೆ ತಲುಪಿದ್ದೇವೆ, ಭಿನ್ನಾಭಿಪ್ರಾಯ ಇದ್ದಿದ್ದರೆ, ಈ ಗುರಿ ಮುಟ್ಟಲು ಸಾಧ್ಯವಿತ್ತೇ ಎಂದು ಪ್ರಶ್ನಿಸಿದರು.
ನಾಲ್ಕು ಗೋಡೆಗಳ ಮಧ್ಯೆ ನಾವು ಮಾತನಾಡಿರುವ ಕುರಿತು ಬೇರೆಯವರು ಉಸಾಬರಿ ತೆಗೆದುಕೊಳ್ಳುವ ಅಗತ್ಯವೂ ಇಲ್ಲ, ಸುಮ್ಮನೆ ಮಾತನಾಡಿ ಬೆವರು ಹರಿಸಿಕೊಳ್ಳಬೇಡಿ ಎಂದಿದ್ದಾರೆ.

