ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ತೆರಳುವುದಕ್ಕೂ ಮುನ್ನ ತಮ್ಮ ಆಪ್ತ ಸಚಿವರು ಮತ್ತು ಶಾಸಕರೊಂದಿಗೆ ಬೋಜನಕೂಟ ಸಭೆ ಕರೆದಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ನವೆಂಬರ್ 14 ರ ಸಂಜೆ ಅಥವಾ 15ರ ಬೆಳಗ್ಗೆ ಮುಖ್ಯಮಂತ್ರಿ ದೆಹಲಿಗೆ ತೆರಳಲಿದ್ದಾರೆ.
ರಾಜಧಾನಿಯಲ್ಲೇ ಬಿಡಾರ
ಖಾಸಗಿ ಕಾರ್ಯಕ್ರಮ ನಿಮಿತ್ತ ತೆರಳಲಿರುವ ಮುಖ್ಯಮಂತ್ರಿ ರಾಜಧಾನಿಯಲ್ಲೇ ಎರಡು-ಮೂರು ದಿನ ತಂಗಲಿದ್ದಾರೆ.
ದೆಹಲಿ ಪ್ರವಾಸ ಸಂದರ್ಭದಲ್ಲೇ ಪಕ್ಷದ ಅಧಿನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನೂ ಭೇಟಿ ಮಾಡಲಿದ್ದಾರೆ.
ಈ ವೇಳೆಯಲ್ಲೇ ಅಧಿಕಾರ ಹಸ್ತಾಂತರ ಗೊಂದಲಕ್ಕೆ ತೆರೆ ಎಳೆಯುವುದು ಹಾಗೂ ಸಂಪುಟ ಪುನರ್ ರಚನೆಗೆ ಅವಕಾಶ ಮಾಡಕೊಡುವಂತೆ ಮನವಿ ಮಾಡಲಿದ್ದಾರೆ.
ನ.13 ಬೋಜನಕೂಟ ಸಭೆ
ವರಿಷ್ಠರ ಭೇಟಿಗೆ ತೆರಳುವುದಕ್ಕೂ ಮುನ್ನ ತಮ್ಮ ಆಪ್ತರ ಜೊತೆ ನವೆಂಬರ್ 13 ರಂದು ಸಭೆ ನಡೆಸಲಿದ್ದಾರೆ, ಬೋಜನಕೂಟ ಸಭೆ ಎಲ್ಲಿ ನಡೆಯುವುದೆಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಕಳೆದ ಎರಡು-ಮೂರು ತಿಂಗಳಿಂದ ಅಧಿಕಾರ ಹಸ್ತಾಂತರ ವಿಷಯ ಮುನ್ನೆಲೆಗೆ ಬಂದು ಮುಖ್ಯಮಂತ್ರಿ ಇಕ್ಕಟ್ಟಿನ ಸ್ಥಿತಿ ಎದುರಿಸುತ್ತಿದ್ದಾರೆ.
ತೆರೆಮರೆಯಲ್ಲಿ ಹಕ್ಕೋತ್ತಾಯ ಮಾಡುತ್ತಿರುವ ಶಿವಕುಮಾರ್ ಬಹಿರಂಗ ಹೇಳಿಕೆ ನೀಡುತ್ತಿಲ್ಲ, ಆದರೆ, ಮುಖ್ಯಮಂತ್ರಿ ಆಪ್ತ ಸಚಿವರುಗಳೇ ಈ ವಿಷಯವನ್ನು ಪದೇ ಪದೇ ಮಾಧ್ಯಮಗಳ ಮುಂದೆ ಕೆದಕುವ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ.
ದೆಹಲಿಯಲ್ಲೇ ಉಳಿದು ಇತ್ಯರ್ಥ
ಈ ಬೆಳವಣಿಗೆಯನ್ನು ಅಧಿಕಾರಶಾಹಿ ಗಮನಿಸುತ್ತಿರುವುದರಿಂದ ಆಡಳಿತದ ಮೇಲೆ ತಮ್ಮ ಹಿಡಿತ ತಪ್ಪಿದೆ ಎಂಬ ಭಾವನೆ ಕಾಡುತ್ತಿದ್ದು, ಇದಕ್ಕೆ ತೆರೆ ಎಳೆಯಲು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಇಬ್ಬರೂ ನವೆಂಬರ್ 15ರ ನಂತರ ದೆಹಲಿಯಲ್ಲೇ ಉಳಿದು ಇತ್ಯರ್ಥ ಕಂಡುಕೊಂಡಲಿದ್ದಾರೆ.
ಸಿದ್ದರಾಮಯ್ಯ ದೆಹಲಿಗೆ ತೆರಳುವುದಕ್ಕೂ ಮುನ್ನವೇ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎರಡು ಬಾರಿ ದೆಹಲಿ ಪ್ರವಾಸ ಕೈಗೊಳ್ಳುತ್ತಿದ್ದಾರೆ.
ಇಲಾಖಾ ಕಾರ್ಯನಿಮಿತ್ತ ನವೆಂಬರ್ 6ರಂದು ದೆಹಲಿಗೆ ತೆರಳುವ ಶಿವಕುಮಾರ್, ಆ ಸಂದರ್ಭದಲ್ಲೇ ಪಕ್ಷದ ರಾಜ್ಯ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಜೊತೆ ಬಿಹಾರ ಪ್ರವಾಸ ಕೈಗೊಳ್ಳಲಿದ್ದಾರೆ.
ಬಿಹಾರ ಮತದಾರರಿಗೆ ಗ್ಯಾರಂಟಿಗಳ ಮಾಹಿತಿ
ಈ ವೇಳೆ ಸುರ್ಜೇವಾಲ ಜೊತೆಗೂಡಿ ಮೂರು ಪತ್ರಿಕಾಗೋಷ್ಠಿಗಳನ್ನು ಬಿಹಾರದ ವಿವಿಧೆಡೆ ನಡೆಸಿ, ಕರ್ನಾಟಕದಲ್ಲಿ ಜಾರಿಗೆ ತಂದಿರುವ ಐದು ಗ್ಯಾರಂಟಿಗಳ ಬಗ್ಗೆ ಆ ರಾಜ್ಯದ ಮತದಾರರಿಗೆ ಮಾಹಿತಿ ನೀಡಲಿದ್ದಾರೆ.
ಬಿಹಾರ ಪ್ರವಾಸದಿಂದ ಹಿಂತಿರುಗಿ ಪುನಃ ನವೆಂಬರ್ 11 ರಂದು ಶಿವಕುಮಾರ್ ದೆಹಲಿಗೆ ತೆರಳಿ, ಮುಖ್ಯಮಂತ್ರಿ ಸ್ಥಾನದ ಹಕ್ಕೋತ್ತಾಯಕ್ಕೆ ಸಂಬಂಧಿಸಿದಂತೆ ವರಿಷ್ಠರೊಂದಿಗೆ ಚರ್ಚಿಸಲಿದ್ದಾರೆ.

