ನವದೆಹಲಿ:ಸಿದ್ದರಾಮಯ್ಯ ಎಲ್ಲಿಯವರೆಗೆ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಇರಬೇಕು ಎಂಬ ಕುರಿತು ಪಕ್ಷದ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಅದು 5,10 ಇಲ್ಲವೇ 15 ವರ್ಷಗಳೂ ಆಗಬಹುದು, ವರಿಷ್ಠರು ಕೈಗೊಳ್ಳುವ ತೀರ್ಮಾನದಂತೆ ನಾವು ನಡೆದುಕೊಳ್ಳುತ್ತೇವೆ ಎಂದಿದ್ದಾರೆ.
ಪಕ್ಷ ಸಂಘಟನೆ ಚರ್ಚೆ
ಪಕ್ಷದ ವರಿಷ್ಠರನ್ನು ದೆಹಲಿಯಲ್ಲಿಂದು ಭೇಟಿ ಮಾಡುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಸಂಘಟನೆಗೆ ಸಂಬಂಧಿಸಿದಂತೆ ಚರ್ಚಿಸಲು ಬಂದಿದ್ದೇನೆ.
ಭೇಟಿ ವೇಳೆ ಅಧಿಕಾರ ಹಸ್ತಾಂತರ ವಿಚಾರವಾಗಲಿ, ಸಂಪುಟ ಪುನರ್ ರಚನೆ ಕುರಿತಾಗಲಿ ನಾನು ಚರ್ಚೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನವೆಂಬರ್ ಕ್ರಾಂತಿನೂ ಇಲ್ಲ, ಡಿಸೆಂಬರ್ ಕ್ರಾಂತಿನೂ ಇಲ್ಲ, ಜನವರಿ, ಫೆಬ್ರವರಿಗೂ ಆಗುವುದಿಲ್ಲ, ಕ್ರಾಂತಿ ಆಗುವುದು ಏನಿದ್ದರೂ 2028ರಲ್ಲಿ, ಅದು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಮೂಲಕ.
ಯಾರೋ ಸುಮ್ಮನೆ ಬರೆದಿದ್ದಾರೆ
ನವೆಂಬರ್ ಕ್ರಾಂತಿ ಹಾಗೂ ಈ ತಿಂಗಳು 22 ಹಾಗೂ 26ರ ದಿನಾಂಕದ ಬಗ್ಗೆ ಯಾರೋ ಸುಮ್ಮನೆ ಬರೆದಿದ್ದಾರೆ, ಪಕ್ಷ ನಮಗೆ ಬಿಹಾರ ಚುನಾವಣೆ ಸೇರಿದಂತೆ ಅನೇಕ ಜವಾಬ್ದಾರಿ ನೀಡಿದೆ, ನಾವು ಅದನ್ನು ಮಾಡುತ್ತಿದ್ದೇವೆ, ಇದರ ಹೊರತಾಗಿ ಬೇರೆ ಯಾವುದೇ ಕ್ರಾಂತಿ ಆಗುವುದಿಲ್ಲ.
ಸಂಪುಟ ವಿಸ್ತರಣೆ ಆಕಾಂಕ್ಷೆಯಲ್ಲಿ ಇರುವವರಿಗೆ ಏನು ಕೊಡಬೇಕು, ಏನು ನೀಡಬೇಕು ಎಂಬುದನ್ನು ವರಿಷ್ಠರು ನಿರ್ಧರಿಸುತ್ತಾರೆ, ಇದರಲ್ಲಿ ನಮ್ಮ ಪಾತ್ರವೇ ಇರುವುದಿಲ್ಲ.
ನಾನು ದೆಹಲಿ ಪ್ರವಾಸ ಕೈಗೊಂಡಿರುವುದು ನನ್ನ ಇಲಾಖೆ ಮತ್ತು ಪಕ್ಷ ಸಂಘಟನೆ ವಿಚಾರ ಕುರಿತು ಮಾತ್ರ, ಬೇರೇನೂ ಇಲ್ಲ ಎಂದರು.
ಯಾವ ವರಿಷ್ಠರನ್ನೂ ಭೇಟಿ ಮಾಡುವುದಿಲ್ಲ
ನಾನು ಪಕ್ಷದ ಯಾವ ವರಿಷ್ಠ ನಾಯಕರನ್ನೂ ಭೇಟಿ ಮಾಡುವುದಿಲ್ಲ, ನನ್ನ ಬಳಿ ಯಾರೂ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡಿಲ್ಲ, ನನಗೆ ಯಾವುದೇ ನಾಯಕರನ್ನು ಭೇಟಿ ಮಾಡುವ ಕಾರ್ಯಕ್ರಮ ಇಲ್ಲ, ಪಕ್ಷ ಸಂಘಟನೆ ವಿಚಾರವಾಗಿ ಚರ್ಚೆ ಮಾಡಲಾಗುವುದು.
ಮತಗಳ್ಳತನ ವಿಚಾರವಾಗಿ ನಿನ್ನೆ ರಾತ್ರಿಯೂ ಸಭೆ ಮಾಡಿದ್ದೇವೆ, ಇಂದು ಸಭೆ ಮಾಡಿದ್ದೇವೆ, ಸಂಪುಟ ವಿಸ್ತರಣೆ ಹಾಗೂ ನಾಯಕತ್ವ ಬದಲಾವಣೆ ವಿಚಾರ ಚರ್ಚೆ ಏನಿದ್ದರೂ ಮಾಧ್ಯಮದ್ದು.
ಎಲ್ಲಾ ನೀವೇ ಊಹಿಸಿಕೊಳ್ಳುತ್ತೀರಿ
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗುತ್ತದೆ, ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆಯೇ ಅಥವಾ ನಾನು ಹೇಳಿದ್ದೇನೆಯೇ, ಎಲ್ಲಾ ನೀವೇ ಊಹಿಸಿಕೊಳ್ಳುತ್ತೀರಿ.
ನಮಗೆ ಕೊಟ್ಟ ಕೆಲಸ ಮಾಡಿಕೊಂಡು ಹೋಗುತ್ತಿರಬೇಕು, ನಾನು ಪಕ್ಷದ ಶಿಸ್ತಿನ ಸಿಪಾಯಿ, ಪಕ್ಷದ ಲಕ್ಷ್ಮಣ ರೇಖೆ ಬಿಟ್ಟು ನಾನು ಎಂದಿಗೂ ಹೋಗುವುದಿಲ್ಲ ಎಂದರು.

