ಬೆಂಗಳೂರು:ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಕೆ.ಎನ್.ರಾಜಣ್ಣ ಕರೆದಿರುವ ಔತಣಕೂಟದಲ್ಲಿ ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು, ಶಾಸಕರು ಭಾಗಿಯಾಗುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ರಾಜಣ್ಣ ಕರೆದಿರುವ ಔತಣಕೂಟದಲ್ಲಿ ಯಾವುದೇ ರಾಜಕೀಯ ಚರ್ಚೆ ಇಲ್ಲ ಎಂಬುದಾಗಿ ನಗು ನಗುತ್ತಲೇ ಹೇಳಿದ ಡಾ.ಪರಮೇಶ್ವರ್, ಹಿಂದೆಯೂ ಅವರು ಊಟಕ್ಕೆ ಕರೆದಾಗ ಹೋಗಿದ್ದೇವೆ, ಈಗಲೂ ಹೋಗುತ್ತೇವೆ ಎಂದರು.
ರಾಜಣ್ಣ ಊಟಕ್ಕೆ ಕರೆದಿದ್ದಾರೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ನನ್ನನ್ನು ದೂರವಾಣಿ ಮೂಲಕ ಸಂಪರ್ಕಿಸಿ, ರಾಜಣ್ಣ ಊಟಕ್ಕೆ ಕರೆದಿದ್ದಾರೆ ಹೋಗೋಣವೇ ಎಂದರು, ಆಗಲಿ ಹೋಗೋಣ ಎಂದೆ.
ಮುಖ್ಯಮಂತ್ರಿ ನಮ್ಮ ಜಿಲ್ಲೆಗೆ ಬರುತ್ತಿರುವುದರಿಂದ ರಾಜಣ್ಣ ತುಮಕೂರಿನ ಕ್ಯಾತ್ಸಂದ್ರ ನಿವಾಸದಲ್ಲಿ ಈ ಔತಣಕೂಟ ಏರ್ಪಡಿಸಿದ್ದಾರೆ, ಯಾರ‍್ಯಾರನ್ನು ಆಹ್ವಾನ ಮಾಡಿದ್ದಾರೆಂಬ ಕುರಿತು ಮಾಹಿತಿ ಇಲ್ಲ, ಆದರೆ, ನಾವೆಲ್ಲಾ ಹೋಗುತ್ತೇವೆ.
ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೆಹಲಿ ಪ್ರವಾಸ ಕೈಗೊಂಡಿರುವ ಹಿಂದೆ ರಾಜಕೀಯ ಇದೆ ಎನಿಸುವುದಿಲ್ಲ.
ಕಾನೂನು ತಜ್ಞರೊಂದಿಗೆ ಚರ್ಚೆ
ಅವರು ಪ್ರವಾಸ ತೆರಳುವುದಕ್ಕೂ ಮುನ್ನ ಏಕೆ ಹೋಗುತ್ತಿದ್ದಾರೆ ಎಂಬುದನ್ನು ತಿಳಿಸಿದ್ದಾರೆ, ನೀರಾವರಿ ಯೋಜನೆಗಳಿಗೆ ಸಂಬಂಧಿಸಿದ ಮೊಕದ್ದಮೆಗಳು ಕುರಿತು ಕಾನೂನು ತಜ್ಞರೊಂದಿಗೆ ಚರ್ಚಿಸುವ ವಿಷಯವನ್ನೂ ಪ್ರಸ್ತಾಪಿಸಿದ್ದಾರೆ.
ನನ್ನ ಇಲಾಖೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಹೆಚ್ಚಿನ ಕೆಲಸ ಇರುವುದಿಲ್ಲ, ಇದ್ದರೆ ನಾನೂ ಹೋಗುತ್ತಿದ್ದೆ ಎಂದರು.
ಎಸ್‌ಐಟಿ ತನಿಖೆ ಬಹುತೇಕ ಪೂರ್ಣ
ಧರ್ಮಸ್ಥಳ ಪ್ರದೇಶದಲ್ಲಿ ನಡೆದಿದೆ ಎನ್ನಲಾದ ಸಾವು ಪ್ರಕರಣಗಳಿಗೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ಬಹುತೇಕ ಪೂರ್ಣಗೊಂಡಿದೆ, ಕೆಲವು ತಾಂತ್ರಿಕ ವಿಷಯಗಳಿದ್ದು ಅವರುಗಳ ಕುರಿತು ಗಮನ ಹರಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಪ್ರಕರಣ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದರು.

