ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲಾಗದ ಮುಖ್ಯಮಂತ್ರಿ
ಮೈಸೂರು:ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಲಾಗದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಧಾನಮಂತ್ರಿಗೆ ಪತ್ರ ಬರೆದಿದ್ದಾರೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಕಷ್ಟಕ್ಕೆ ಸ್ಪಂದಿಸಬೇಕು ಎನ್ನುವ ಇರಾದೆ ಈ ಸರ್ಕಾರಕ್ಕೆ ಇಲ್ಲ, ಪ್ರತಿಯೊಂದು ವಿಷಯವನ್ನೂ ಕೇಂದ್ರದ ಮೇಲೆ ಹಾಕಿ ನುಣುಚಿಕೊಳ್ಳುವ ಕೆಲಸ ಮಾಡುತ್ತಿದೆ ಎಂದರು.
ಅತ್ಯಂತ ಚಿಕ್ಕ ವಿಚಾರ
ಮುಖ್ಯಮಂತ್ರಿ ಮನಸು ಮಾಡಿದರೆ ಇದು ಅತ್ಯಂತ ಚಿಕ್ಕ ವಿಚಾರ, ಕೆಲವೇ ನಿಮಿಷಗಳಲ್ಲಿ ಬಗೆಹರಿಸಬಹುದಾದ ವಿಷಯ ಇದಾಗಿದೆ, ಆದರೆ, ಪ್ರತಿಯೊಂದಕ್ಕೂ ರಾಜಕೀಯ ಮಾಡುತ್ತಾ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಧಾನಮಂತ್ರಿಗೆ ಪತ್ರ ಬರೆದಿದ್ದಾರೆ.
ದೇಶದ ಯಾವ ರಾಜ್ಯದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು ಪ್ರಧಾನಮಂತ್ರಿ ಮಧ್ಯಸ್ಥಿಕೆ ವಹಿಸಿದ್ದಾರೆ ಎಂದು ಪ್ರಶ್ನಿಸಿದರು.
ಸಮಸ್ಯೆ ವಿಚಾರದಲ್ಲಿ ಜನ ಪ್ರತಿನಿಧಿಗಳನ್ನು ಕರೆದು ಮಾತನಾಡಲು ಏನಿದೆ, ಮುಖ್ಯಮಂತ್ರಿಗಳೇ ನೇರ ನಿರ್ಧಾರ ಕೈಗೊಳ್ಳಬಹುದು, ಬೆಳೆಗಾರರ ಜತೆ ಮಾತನಾಡಿ ಬಿಕ್ಕಟ್ಟು ಬಗೆಹರಿಸಬಹುದು, ಅದನ್ನು ಮಾಡದೇ ಕೇವಲ ರಾಜಕೀಯ ಮಾಡುವುದರಲ್ಲಿ ಸರ್ಕಾರ ಮುಳುಗಿದೆ.
ಸಕ್ಕರೆ ಲಾಬಿಗೆ ಮಣಿದಿರುವ ಸಾಧ್ಯತೆ
ಮುಕ್ತವಾಗಿ ಕಬ್ಬು ಬೆಳೆಗಾರರ ಪರ ನಿರ್ಧಾರ ತೆಗೆದುಕೊಳ್ಳಬಹುದು, ಅದನ್ನು ಬಿಟ್ಟು ಕೇಂದ್ರದ ಮೇಲೆ ಆರೋಪ ಮಾಡುತ್ತಿದ್ದಾರೆ, ಬೆಳಗಾವಿಯ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸಕ್ಕರೆ ಲಾಬಿ ಒತ್ತಡಕ್ಕೆ ಮಣಿದಿರುವ ಸಾಧ್ಯತೆ ಇದೆ, ಒತ್ತಡಗಳಿಗೆ ಮಣಿಯದೆ ಮೊದಲು ಬೆಳೆಗಾರರ ಹಿತ ಕಾಯುವ ಕೆಲಸ ಮಾಡಬೇಕು.
ಬೆಳಗಾವಿ ಜಿಲ್ಲೆಯಲ್ಲಿ ಎಲ್ಲಾ ಪಕ್ಷಗಳ ನಾಯಕರು ಸಕ್ಕರೆ ಕಾರ್ಖಾನೆ ಹೊಂದಿದ್ದಾರೆ ಎಂಬುದಾಗಿ ಕೆಲವು ಮಾಧ್ಯಮಗಳಲ್ಲಿ ವರದಿ ಆಗಿರುವುದನ್ನು ಗಮನಿಸಿದ್ದು, ಜೆಡಿಎಸ್‌ನ ಯಾವುದೇ ನಾಯಕ ಕಬ್ಬು ಕಾರ್ಖಾನೆ ಹೊಂದಿಲ್ಲ.
ಬಂಡೆಪ್ಪ ಕಾಶಂಪೂರ ಕಾರ್ಖಾನೆ ಒಂದಿತ್ತು, ಕೆಲವು ದಿನಗಳ ಹಿಂದೆ ಅದನ್ನು ಮಾರಿದ್ದಾರೆ. ಹಾಲಿ ನಮ್ಮ ಪಕ್ಷದಲ್ಲಿ ಯಾರೊಬ್ಬರ ಬಳಿಯೂ ಸಕ್ಕರೆ ಕಾರ್ಖಾನೆ ಇಲ್ಲ ಎಂದರು.
ಕ್ರಾಂತಿ, ವಾಂತಿ ಏನೂ ಆಗಲ್ಲ
ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಹಾಗೂ ನವೆಂಬರ್‌ನಲ್ಲಿ ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ, ನನಗೆ ಸಿದ್ದರಾಮಯ್ಯ ಗುಣ ಗೊತ್ತಿದೆ, ನಮ್ಮ ಪಕ್ಷದಲ್ಲೇ ಇದ್ದಾಗ ತಿಳಿದುಕೊಂಡಿದ್ದೇನೆ, ಯಾವ ಬದಲಾವಣೆಯೂ ಅಗುವುದಿಲ್ಲ.
ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯಾವಾಗಲೂ ದೇವರ ಜೊತೆ ಮಾತನಾಡುತ್ತಾರೆ, ದೇವರು ಅವರಿಗೆ ಏನೇನು ಹೇಳಿದ್ದಾನೋ ನಮಗೇನು ಗೊತ್ತು, ಅದೇನಿದ್ದರೂ ಅವರ ಹಾಗೂ ದೇವರಿಗೆ ಸಂಬಂಧಪಟ್ಟ ವಿಚಾರ, ಹಾಗಂತ ಅವರೇ ಹೇಳಿದ್ದಾರೆ ಎಂದರು.
ಮುಂದಿನ 10, 20 ವರ್ಷ ನಾವೇ ಅಧಿಕಾರ ನಡೆಸುತ್ತೇವೆ ಎಂಬುದಾಗಿ ಹೇಳಿದವರು ಏನಾಗಿದ್ದಾರೆಂದು ನನಗೆ ಗೊತ್ತಿದೆ, 2028ಕ್ಕೆ ಏನೇನಾಗುತ್ತೊ ಯಾರಿಗೆ ಗೊತ್ತು.
ಗ್ರೇಟರ್ ನಗರ ಪೈಪೋಟಿ
ಸಿದ್ದರಾಮಯ್ಯ ಮೈಸೂರು ನಗರವನ್ನು ಗ್ರೇಟರ್ ಮೈಸೂರು ಮಾಡುವುದಾಗಿ ಹೇಳಿರುವುದು ಅವರ ಹಾಗೂ ಶಿವಕುಮಾರ್ ನಡುವಿನ ಪೈಪೋಟಿ.
ಶಿವಕುಮಾರ್ ಗ್ರೇಟರ್ ಬೆಂಗಳೂರು ಘೋಷಣೆ ಮಾಡಿದರೆ, ಪ್ರತಿಯಾಗಿ ಸಿದ್ದರಾಮಯ್ಯ ಗ್ರೇಟರ್ ಮೈಸೂರು ಎನ್ನುತ್ತಿದ್ದಾರೆ, ಯಾವ ಗ್ರೇಟರೂ ಆಗುವುದಿಲ್ಲ, ಸುಮ್ಮನೆ ಕಾಲಹರಣ ಮಾಡುತ್ತಿದ್ದಾರೆ ಎಂದರು.

