ಬೆಂಗಳೂರು:ನರೇಂದ್ರ ಮೋದಿ ದೇಶದ ಪ್ರಧಾನಿ ಆದ ಬಳಿಕ ಸಂವಿಧಾನಿಕ ಸಂಸ್ಥೆಗಳ ಮೌಲ್ಯ ಹಾಳಾಗಿದ್ದು, ಮುಖ್ಯ ಚುನಾವಣಾ ಆಯೋಗ, ಸಿಬಿಐ ಕೇಂದ್ರ ಸರ್ಕಾರದ ಅಡಿಯಾಳಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಆರೋಪಿಸಿದ್ದಾರೆ.
ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ವ್ಯವಸ್ಥಿತ ಷಡ್ಯಂತ್ರ ಮತ್ತು ಕಾರ್ಯತಂತ್ರದ ಮೂಲಕ ಮತಗಳ್ಳತನ ನಡೆದಿದೆ ಎಂದು ದಾಖಲೆಗಳ ಸಹಿತ ವಿವರಿಸಿದರು.
ಬಿಜೆಪಿಯವರು ಮತಗಳ್ಳತನದಲ್ಲೂ ನಿಸ್ಸೀಮರು
ಬಿಜೆಪಿಯವರು ಸುಳ್ಳಿನಲ್ಲಿ ಮಾತ್ರವಲ್ಲದೆ ಮತಗಳ್ಳತನದಲ್ಲೂ ನಿಸ್ಸೀಮರು ಎನ್ನುವುದು ಸಾಬೀತಾಗಿದೆ, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯ ಕಾಪಾಡಲು ಕಾಂಗ್ರೆಸ್ ಹೋರಾಟ ನಡೆಸಲಿದೆ.
ಮತಗಳ್ಳತನದ ಮೂಲಕ ಅನೇಕ ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಸ್ಪಷ್ಟವಾಗಿದೆ, ಲೋಕಸಭೆಯಲ್ಲಿನ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ನಿರಂತರ ಅಧ್ಯಯನ, ತಪಾಸಣೆಯಿಂದ ದಾಖಲೆ ಸಮೇತ ಮತಗಳ್ಳತನವನ್ನು ದೇಶದ ಜನರಿಗೆ ಮನವರಿಕೆ ಮಾಡಿಸಿದ್ದಾರೆ.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನವನ್ನು ಸ್ಪಷ್ಟ ದಾಖಲೆ ಸಮೇತ ಬಯಲಿಗೆಳೆದು ದೇಶದ ಜನರ ಮುಂದಿಟ್ಟಿದ್ದಾರೆ, ಇಷ್ಟಾದರೂ ಚುನಾವಣಾ ಆಯೋಗ ಪಕ್ಷ ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ, ದಾಖಲೆಗಳಿಗೂ ಉತ್ತರ ನೀಡುತ್ತಿಲ್ಲ.
ಎಲ್ಲಾ ಪಕ್ಷಗಳ ಜವಾಬ್ದಾರಿ
ನಮ್ಮ ಸಂವಿಧಾನ ಮುಕ್ತ ಮತ್ತು ಪಾರದರ್ಶಕ ಚುನಾವಣಾ ವ್ಯವಸ್ಥೆ ರೂಪಿಸಿದೆ, ಸಂವಿಧಾನದ ಮೌಲ್ಯ ಉಳಿಯಬೇಕಾದರೆ ಸ್ವತಂತ್ರ ಚುನಾವಣಾ ಪ್ರಕ್ರಿಯೆ ನಡೆಯುವಂತೆ ನೋಡಿಕೊಳ್ಳುವುದು ಎಲ್ಲಾ ಪಕ್ಷಗಳ ಜವಾಬ್ದಾರಿ.
ಸಂವಿಧಾನ ಮತ್ತು ಪ್ತಜಾಪ್ರಭುತ್ವ ವ್ಯವಸ್ಥೆ ಕಾಪಾಡಲು ಕಾಂಗ್ರೆಸ್‌ನಿಂದ ಕೋಟಿಗೂ ಅಧಿಕ ಸಹಿ ಸಂಗ್ರಹ ಮಾಡಲಾಗಿದ್ದು, ಚುನಾವಣಾ ಆಯೋಗ ಮತ್ತು ರಾಷ್ಟ್ರಪತಿ ಅವರಿಗೆ ಅರ್ಪಿಸಲಾಗುವುದು.
ಸಹಿ ಸಂಗ್ರಹ ಅಭಿಯಾನದಲ್ಲಿ ಕರ್ನಾಟಕದಿಂದ 1,12,40,000 ಸಹಿ ಸಂಗ್ರಹಿಸಲಾಗಿದೆ, ಎಲ್ಲಾ ವಿಧಾನಸಭಾ ಕ್ಷೇತ್ರ ಹಾಗೂ ಜಿಲ್ಲೆಗಳಿಂದ ಸಹಿ ಸಂಗ್ರಹಿಸಿದ್ದು, ಪಕ್ಷದ ಕಾರ್ಯಕರ್ತರು ಪ್ರಾಮಾಣಿಕ ಕೆಲಸ ಮಾಡಿದ್ದಾರೆ, ಬೂತ್‌ವಾರು ಸಹಿ ಸಂಗ್ರಹಿಸಲಾಗಿದೆ, ಅಲ್ಲದೆ, ಜನರಲ್ಲಿ ಮತಗಳ್ಳತನ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ಸಹಿ ಸಂಗ್ರಹ ವಿಮಾನದಲ್ಲಿ ದೆಹಲಿಗೆ
ಸಹಿ ಸಂಗ್ರಹ ಅರ್ಜಿಗಳನ್ನು ವಿಮಾನದಲ್ಲಿ ದೆಹಲಿಗೆ ತಲುಪಿಸಲಾಗುವುದು, ನವೆಂಬರ್ 25ಕ್ಕೆ ಅಂದರೆ, ಮೂರನೇ ವಾರದಲ್ಲಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸಲು ಚಿಂತನೆ ಇದೆ.
ಮುಂಬರುವ ಪಾಲಿಕೆ ಚುನಾವಣೆಗಳನ್ನು ಮತಪತ್ರಗಳ ಮೂಲಕ ನಡೆಸಲು ಚಿಂತನೆ ನಡೆದಿದೆ ಎಂದರು.
ರಾಹುಲ್ ಗಾಂಧಿ ನೇತೃತ್ವದಲ್ಲಿ ದೇಶದಾದ್ಯಂತ ಪ್ರಜಾಪ್ರಭುತ್ವ, ಸಂವಿಧಾನ ಉಳಿಸಿ, ಮತದಾನದ ಹಕ್ಕು ಕಾಪಾಡಲು ಸಹಿ ಸಂಗ್ರಹ ಮೂಲಕ ಬೃಹತ್ ಆಂದೋಲನ ನಡೆಸಲಾಗುತ್ತಿದೆ.
151 ಮತದಾರರು ದೂರು
ಚುನಾವಣಾ ಪ್ರಕ್ರಿಯೆಯ ಸಂಪೂರ್ಣ ಜವಾಬ್ದಾರಿ ಮುಖ್ಯಚುನಾವಣಾ ಆಯೋಗದ್ದಾಗಿದೆ, ಉತ್ತರ ಪ್ರದೇಶ, ಬಿಹಾರ, ದೆಹಲಿ, ಜಾರ್ಖಂಡ್ ರಾಜ್ಯಗಳ ಜನರ ಮೊಬೈಲ್‌ನಿಂದ ಅರ್ಜಿ ಸಲ್ಲಿಕೆಯಾಗಿ ಮತದಾರ ಪಟ್ಟಿಯಿಂದ ಹೆಸರು ರದ್ದಾದ ಬಗ್ಗೆ 151 ಮತದಾರರು ದೂರು ನೀಡಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿ ಅಭ್ಯರ್ಥಿ ಸುಭಾಷ್ ಗುತ್ತೇದಾರ್ ಮತದಾರರ ಪಟ್ಟಿ ಸೇರಿದಂತೆ ಅನೇಕ ದಾಖಲೆ ಸುಟ್ಟು ಹಾಕಿದ ಮಾಹಿತಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ, ಈ ಪ್ರಕರಣದಲ್ಲಿ ಒಂದು ಮತ ಡಿಲೀಟ್‌ಗೆ 80 ರೂ. ನೀಡಲಾಗಿದೆ ಎಂಬ ಅಂಶವೂ ಬೆಳಕಿಗೆ ಬಂದಿದೆ.
ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ರಾಹುಲ್ ಗಾಂಧಿ ಬೆಳಕು ಚೆಲ್ಲಿದ್ದು, ಸುಮಾರು 25 ಲಕ್ಷ ಮತಗಳು ಅಕ್ರಮವಾಗಿವೆ ಎಂದಿದ್ದಾರೆ, ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸುವುದು ಅವರ ಹೋರಾಟದ ಚಿಂತನೆಯಾಗಿದ್ದು, ಕರ್ನಾಟಕದಿಂದ ಹೋರಾಟ ಆರಂಭವಾಗಿದೆ.
ಬಿಹಾರದಲ್ಲಿ ಬಹುಮತದ ವಿಶ್ವಾಸ
ಬಿಹಾರ ಚುನಾವಣೆಯಲ್ಲಿ ಅಲ್ಲಿನ ಜನತೆ ಬದಲಾವಣೆ ಬಯಸಿ, ಸಂವಿಧಾನ ಹಾಗೂ ಪ್ರಜಾಪ್ರಭುತ್ವ ರಕ್ಷಣೆಗೆ ನಮಗೆ ಸಂಪೂರ್ಣ ಬಹುಮತ ನೀಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.
ರಾಜ್ಯದಲ್ಲಿ ಪಕ್ಷದ 3 ಸಾವಿರ ಕಾರ್ಯಕರ್ತರಿಗೆ ನಿಗಮ, ಮಂಡಳಿಗಳಲ್ಲಿ ಅಧಿಕಾರ ನೀಡಲಾಗಿದೆ, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 15 ಜನರಿಗೆ ಗ್ಯಾರಂಟಿ ಸಮಿತಿ ಜವಾಬ್ದಾರಿ, ಪ್ರತಿ ಕ್ಷೇತ್ರಗಳಲ್ಲಿ 60 ಜನರ ನಾಮನಿರ್ದೇಶನ ಮಾಡಿದ್ದು, ರಾಜ್ಯ ಮಟ್ಟದಲ್ಲಿ ನಿಗಮ, ಮಂಡಳಿಗಳಲ್ಲಿನ 600 ಸ್ಥಾನಗಳಿಗೆ ಇನ್ನೊಂದು ವಾರದಲ್ಲಿ ನೇಮಕ ಮಾಡಲಾಗುವುದು ಎಂದರು.

