ಕೇಂದ್ರ ಸರ್ಕಾರ ಜನರಿಗೆ ನೀಡಿದ ಜಿಎಸ್‌ಟಿ ಲಾಭ ಕಬಳಿಸುವ ಹುನ್ನಾರ !
ಬೆಂಗಳೂರು:ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಹಾಗೂ ಎಥೆನಾಲ್ ಮೇಲೆ ಒಂದು ರೂ. ದರ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.
ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಗಣನೀಯವಾಗಿ ಇಳಿಕೆ ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ತನ್ನ ಆದಾಯ ಮೂಲಗಳನ್ನು ಹೆಚ್ಚಿಸಿಕೊಳ್ಳಲು ಪರೋಕ್ಷ ಮಾರ್ಗಗಳನ್ನು ಕಂಡುಕೊಳ್ಳುತ್ತಿದೆ.
2,120 ಕೋಟಿ ರೂ. ಸಂಗ್ರಹಣೆ ಗುರಿ
ತಲಾ ಒಂದು ರೂ. ತೆರಿಗೆ ಹೆಚ್ಚಳದಿಂದ ವಾರ್ಷಿಕ 2,120 ಕೋಟಿ ರೂ. ಸಂಗ್ರಹಣೆ ಗುರಿ ಹೊಂದಿದೆ.
ಪೆಟ್ರೋಲ್, ಡೀಸೆಲ್ ದರ ಹೆಚ್ಚಳಕ್ಕೂ ಮುನ್ನ ಅಬಕಾರಿ ಇಲಾಖೆಯಿಂದ ಹೆಚ್ಚುವರಿಯಾಗಿ 10,000 ಕೋಟಿ ರೂ. ಸಂಗ್ರಹಿಸುವ ಉದ್ದೇಶದಿಂದ ಮಧ್ಯಮ ವರ್ಗದವರು ಸೇವಿಸುವ ಪಾನೀಯಗಳ ದರ ಪರಿಷ್ಕರಣೆ ಮಾಡಿರುವುದಲ್ಲದೆ, ಇದೀಗ ಹರಾಜಿನ ಮೂಲಕ 500ಕ್ಕೂ ಹೆಚ್ಚು ಹೊಸ ಬಾರ್‌ಗಳಿಗೆ ಲೈಸೆನ್ಸ್ ನೀಡಲು ಈಗಾಗಲೇ ಸಂಬಂಧಪಟ್ಟ ಸಚಿವರು ದರ ನಿಗದಿ ಮಾಡಿದ್ದಾರೆ.
ಪಂಚ ಗ್ಯಾರಂಟಿಗಳಿಗೆ ಹಣ ಕ್ರೋಡೀಕರಿಸುವುದು ಮತ್ತು ಶಾಸಕರ ಕ್ಷೇತ್ರಗಳಲ್ಲಿ ಅಭಿವೃದ್ಧಿಗಾಗಿ 50 ರಿಂದ 100 ಕೋಟಿ ರೂ. ನೀಡಲು ಈ ಹೆಚ್ಚುವರಿ ಹಣ ಸಂಗ್ರಹ ಮಾಡಲಾಗುತ್ತಿದೆ.
ಸಂಪುಟ ಸಭೆಯಲ್ಲಿ ತೀರ್ಮಾನ
ನಾಳೆ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಥೆನಾಲ್ ದರ ಏರಿಕೆ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ.
ಪೆಟ್ರೋಲ್, ಡೀಸೆಲ್, ಎಥೆನಾಲ್ ಮೇಲೆ ಒಂದು ರೂ. ಹೆಚ್ಚುವರಿಯಾಗಿ ಸೆಸ್ ವಿಧಿಸಲು ಸರ್ಕಾರ ತನ್ನ ಅಧಿಕಾರ ಬಳಕೆ ಮಾಡಿಕೊಳ್ಳಲು ಇಂತಹ ನಿರ್ಧಾರಕ್ಕೆ ಮುಂದಾಗಿದೆ.
ತೈಲ ಬೆಲೆ ಹೆಚ್ಚಳ ಸುಳಿವನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ಇಂದಿಲ್ಲಿ ಸುದ್ದಿಗಾರರಿಗೆ ನೀಡಿದ್ದಾರೆ.
ಹೆಚ್ಚುವರಿ ಸೆಸ್ ಸಂಗ್ರಹ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಸಂಘಟಿತ ವಲಯದ ಕಾರ್ಮಿಕರ ಕಲ್ಯಾಣಕ್ಕಾಗಿ ಹೆಚ್ಚುವರಿ ಸೆಸ್ ಸಂಗ್ರಹಕ್ಕೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದರು.
ಸೆಸ್ ಸಂಗ್ರಹದ ಮೂಲಕ 1.30 ಕೋಟಿ ಅಸಂಘಟಿತ ಕಾರ್ಮಿಕರಿಗೆ ನೆರವಾಗುವ ಉದ್ದೇಶ ಇದಾಗಿದೆ.
ಪೆಟ್ರೋಲ್, ಡೀಸೆಲ್, ಇಥೆನಾಲ್ ಉತ್ಪನ್ನಗಳ ಮೇಲೆ ಒಂದು ರೂ. ಸೆಸ್ ವಿಧಿಸುವ ಬಗ್ಗೆ ಚರ್ಚೆ ನಡೆದಿದ್ದು, ಗುರುವಾರ ನಡೆಯುವ ಸಂಪುಟ ಸಭೆಯಲ್ಲಿ ಅನುಮೋದನೆ ದೊರಕಿದರೆ ಕೋಟ್ಯಂತರ ಕಾರ್ಮಿಕರಿಗೆ ಅನುಕೂಲವಾಗಲಿದೆ.
62 ಲಕ್ಷ ಕುಟುಂಬಗಳಿಗೆ ಸೌಲಭ್ಯ
ಕೇವಲ ಒಂದು ರೂ. ಹೆಚ್ಚಳದಿಂದ 62 ಲಕ್ಷ ಕುಟುಂಬಗಳಿಗೆ ಆರೋಗ್ಯ ಸೌಲಭ್ಯ, ಅಪಘಾತ ಪರಿಹಾರ, ಶೈಕ್ಷಣಿಕ ಸಹಾಯಧನ ನೀಡಲು ಈ ಹಣ ಬಳಕೆ ಮಾಡಿಕೊಳ್ಳುತ್ತೇವೆ ಎಂದರು.
ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ನಿರ್ದಿಷ್ಟವಾದ ’ಸೆಸ್’ ಪ್ರಮಾಣವು ಕಾಲಕಾಲಕ್ಕೆ ಬದಲಾಗುತ್ತಿರುತ್ತದೆ. ಪ್ರಸ್ತುತ, ’ಮಾರಾಟ ತೆರಿಗೆ’ ವಿಧಿಸುತ್ತದೆ, ಇದರ ಜೊತೆಗೆ ಇತರ ಸಣ್ಣ ಸೆಸ್‌ಗಳು ಇರುತ್ತವೆ.
ಪೆಟ್ರೋಲ್ ಮೇಲೆ 29.84% ರಷ್ಟು ಮಾರಾಟ ತೆರಿಗೆ, ಡೀಸೆಲ್ ಮೇಲೆ 18.44% ರಷ್ಟು ಮಾರಾಟ ತೆರಿಗೆ ವಿಧಿಸಲಾಗುತ್ತದೆ.
ರಾಜ್ಯ ಮಟ್ಟದಲ್ಲಿ, ಬೆಂಗಳೂರಿನಂತಹ ಕೆಲವು ಸ್ಥಳಗಳಲ್ಲಿ ಕಸ ಸಂಗ್ರಹಣೆ, ನಿರ್ವಹಣೆಗಾಗಿ ಸಣ್ಣ ಪ್ರಮಾಣದ ಸೆಸ್ ವಿಧಿಸಿದೆ.

