ಬೆಂಗಳೂರು:ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿಯ ವಿದೇಶ ಪ್ರವಾಸ ವೇಳೆಯಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶನಿವಾರ ದೆಹಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಸುಪ್ರೀಂ ಕೋರ್ಟ್ನ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಅವರ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಉಭಯ ನಾಯಕರು ಒಂದು ದಿನದ ದೆಹಲಿ ಪ್ರವಾಸ ಕೈಗೊಂಡಿದ್ದಾರೆ.
ಕಾಂಗ್ರೆಸ್ ವಲಯದಲ್ಲಿ ಚರ್ಚೆ
ನವೆಂಬರ್ ಕ್ರಾಂತಿ ವದಂತಿಗಳ ಬೆನ್ನಲ್ಲೇ ಇಬ್ಬರೂ ನಾಯಕರು ದೆಹಲಿಗೆ ತೆರಳುತ್ತಿರುವ ವಿಚಾರ ಕಾಂಗ್ರೆಸ್ ವಲಯದಲ್ಲಿ ಭಾರೀ ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ.
ಆದರೆ, ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ರಾಹುಲ್ ಪೂರ್ವ ನಿಗದಿಯಂತೆ ಫಿನ್ಲ್ಯಾಂಡ್ ಪ್ರವಾಸಕ್ಕೆ ತೆರಳಲಿದ್ದಾರೆ.
ರಾಹುಲ್ ಅನುಪಸ್ಥಿತಿಯಲ್ಲಿ ಯಾವುದೇ ಪ್ರಮುಖ ರಾಜಕೀಯ ನಿರ್ಧಾರಗಳನ್ನು ಕೈಗೊಳ್ಳಲಾಗದ ಕಾರಣ ಉಭಯ ನಾಯಕರ ಪ್ರವಾಸ ಉದ್ದೇಶವೂ ಈಡೇರುತ್ತಿಲ್ಲ.
ನಾಯಕತ್ವ ಶಿವಕುಮಾರ್ ಕಸರತ್ತು
ನವೆಂಬರ್ 20ರ ನಂತರ ಕರ್ನಾಟಕದಲ್ಲಿ ತಮಗೆ ನಾಯಕತ್ವ ದೊರೆಕಿಸುವಂತೆ ವರಿಷ್ಠರನ್ನು ಕಳೆದ ಒಂದು ತಿಂಗಳಿಂದ ಶಿವಕುಮಾರ್ ಭೇಟಿ ಮಾಡುತ್ತಲೇ ಬಂದಿದ್ದಾರೆ.
ಶನಿವಾರದ ಭೇಟಿ ವೇಳೆ ಅಂತಿಮ ಸ್ವರೂಪ ದೊರೆಯಲಿದೆ ಎಂಬ ನಿರೀಕ್ಷೆಯಲ್ಲಿ ಶಿವಕುಮಾರ್ ಇದ್ದರು, ಆದರೆ, ರಾಹುಲ್ ಅನುಪಸ್ಥಿತಿ ಹಾಗೂ ಪಕ್ಷದ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ವರಿಷ್ಠರು ಕರ್ನಾಟಕದ ಬಗೆಗಿನ ನಿರ್ಧಾರ ಮುಂದೂಡಬಹುದು.
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಂಪುಟವನ್ನು ದೊಡ್ಡ ಪ್ರಮಾಣದಲ್ಲಿ ಪುನರ್ ರಚಿಸಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಕಳೆದ ಎರಡು ವಾರಗಳ ಹಿಂದೆಯೇ ದೆಹಲಿ ಪ್ರವಾಸ ದಿನಾಂಕ ನಿಗದಿ ಪಡಿಸಿದ್ದರು.
ಸಂಪುಟ ಪುನರ್ ರಚನೆ ಯತ್ನ
ಈ ಸಂದರ್ಭದಲ್ಲಿ ಐದು ದಿನ ದೆಹಲಿಯಲ್ಲೇ ಉಳಿದು, ವರಿಷ್ಠರನ್ನು ಭೇಟಿ ಮಾಡಿ ಸಂಪುಟ ಪುನರ್ ರಚನೆಗೆ ಅನುಮತಿ ಪಡೆಯುವ ಯತ್ನದಲ್ಲಿದ್ದರು.
ಆದರೆ, ರಾಹುಲ್ ಅನುಪಸ್ಥಿತಿಯಲ್ಲಿ ಉಳಿದ ಯಾವುದೇ ನಾಯಕರು ಇಂತಹ ಪ್ರಮುಖ ನಿರ್ಧಾರಕ್ಕೆ ಹಸಿರು ನಿಶಾನೆ ತೋರುವುದಿಲ್ಲ ಎಂಬ ಕಾರಣಕ್ಕೆ ಶನಿವಾರ ತಡರಾತ್ರಿಯೇ ನಗರಕ್ಕೆ ಹಿಂತಿರುಗುತ್ತಿದ್ದಾರೆ.
ಶನಿವಾರ ಮಧ್ಯಾನ್ಹದ ವೇಳೆಗೆ ದೆಹಲಿಗೆ ತೆರಳುವ ಮುಖ್ಯಮಂತ್ರಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪಕ್ಷದ ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ತಡರಾತ್ರಿ ಬೆಂಗಳೂರಿಗೆ ವಾಪಾಸ್
ಇವರ ಭೇಟಿ ನಂತರ ಸಂಜೆ ಕಪಿಲ್ ಸಿಬಲ್ ಕಾರ್ಯಕ್ರಮದಲ್ಲಿ ಭಾಗವಹಿಸಿ ತಡರಾತ್ರಿ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಹಿಂತಿರುಗಲಿದ್ದಾರೆ.
ಪ್ರತ್ಯೇಕವಾಗಿ ದೆಹಲಿಗೆ ತೆರಳುತ್ತಿರುವ ಶಿವಕುಮಾರ್, ಹಿಂತಿರುಗುವ ದಿನವನ್ನು ನಿಗದಿ ಪಡಿಸಿಲ್ಲ.
ಅವರ ದೆಹಲಿ ಭೇಟಿ ಸಂದರ್ಭದಲ್ಲಿ ರಾಹುಲ್ ಇಲ್ಲದಿದ್ದರೂ ತಮಗೆ ದಕ್ಕಬೇಕಾದ ಅಧಿಕಾರ ಪಡೆಯಲು ಕಸರತ್ತು ಮುಂದುವರೆಸಲಿದ್ದಾರೆ.

