ಬೆಂಗಳೂರು:ರಾಜಕಾರಣದಲ್ಲಿ ಶಾಶ್ವತವಾಗಿ ಉಳಿಯಬೇಕೆಂದರೆ ಕೊಟ್ಟ ಭರವಸೆಯಂತೆ ನಡೆದುಕೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹೋದರ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ಇಂದಿಲ್ಲಿ ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೆನಪಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದ ಸಮಯದಲ್ಲಿ ನಾಯಕತ್ವ ವಿಚಾರವೂ ಸೇರಿದಂತೆ ಬಹುತೇಕ ಎಲ್ಲಾ ಸಂದರ್ಭಗಳಲ್ಲೂ ನಾನು ಸಾಕ್ಷಿಯಾಗಿದ್ದೇನೆ.
ಹಿಂದೆ ಭರವಸೆ ಈಡೇರಿಸಿದ್ದರು
ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ಇದುವರೆಗೂ ನಡೆದುಕೊಂಡಿದ್ದಾರೆ, ಹಿಂದೆ ಅಧಿಕಾರದಲ್ಲಿದ್ದಾಗ ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದರು, ಈಗಲೂ ಅದನ್ನೇ ಮಾಡುತ್ತಿದ್ದಾರೆ.
ತಾವು ಕೊಟ್ಟ ಮಾತಿನಂತೆ ನಡೆದುಕೊಂಡರೆ ನಾಯಕರಾಗಿ ಉಳಿಯುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.
ಪಕ್ಷದ ಕಾರ್ಯಕರ್ತನಾಗಿ ನನಗೆ ಬಹಳಷ್ಟು ವಿಚಾರ ತಿಳಿದಿದೆ, ಶಿವಕುಮಾರ್ ಶ್ರಮಕ್ಕೆ ಪ್ರತಿಫಲ ಇಂದಲ್ಲಾ ನಾಳೆ ದೊರೆತೇ ದೊರೆಯುತ್ತದೆ ಎಂದಿದ್ದಾರೆ.
ಮಾರ್ಗದರ್ಶನದಂತೆ ನಡೆದುಕೊಳ್ಳಬೇಕು
ನಾಯಕತ್ವ, ಸಂಪುಟ ಪುನರ್ ರಚನೆ ಸೇರಿದಂತೆ ಪಕ್ಷದ ವರಿಷ್ಠರು ನೀಡುವ ಮಾರ್ಗದರ್ಶನದಂತೆ ಸಿದ್ದರಾಮಯ್ಯ, ಶಿವಕುಮಾರ್ ಎಲ್ಲರೂ ನಡೆದುಕೊಳ್ಳಬೇಕು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷ ಪೂರೈಸುತ್ತಿರುವ ಬೆನ್ನಲ್ಲೇ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಸುರೇಶ್, ಮುಖ್ಯಮಂತ್ರಿ ಅವರಿಗೆ ಅಧಿಕಾರ ಹಸ್ತಾಂತರದ ಬಗ್ಗೆ ಪರೋಕ್ಷವಾಗಿ ನೆನಪು ಮಾಡಿಕೊಟ್ಟಿದ್ದಾರೆ.
ಶಿವಕುಮಾರ್ ಪಕ್ಷವನ್ನು ಅಧಿಕಾರಕ್ಕೆ ತರಲು ಹಗಲು-ರಾತ್ರಿ ಶ್ರಮಿಸಿದ ಪ್ರತಿಫಲವಾಗಿ ಪಕ್ಷ ಮತ್ತೆ ಆಡಳಿತದ ಚುಕ್ಕಾಣಿ ಹಿಡಿಯಿತು.
ಪಕ್ಷ ಕಟ್ಟಿ ಬೆಳೆಸಿದ್ದಾರೆ
ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ವೇಳೆ ಪಕ್ಷ ಅಧೋಗತಿಯಲ್ಲಿತ್ತು, ಅದನ್ನು ಕಟ್ಟಿ ಬೆಳೆಸಿ, ಸಂಘಟಿಸಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಿ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯುವಂತೆ ಮಾಡಿದ್ದಾರೆ ಎಂದರು.
ದೆಹಲಿಗೆ ಹೋದ ಸಂದರ್ಭದಲ್ಲಿ ಪಕ್ಷದ ನಾಯಕರನ್ನು ಭೇಟಿ ಮಾಡುವುದು ಸಹಜ, ಅದರಂತೆ ಈ ಬಾರಿಯೂ ಭೇಟಿ ಮಾಡಿದ್ದೇನೆ, ಅದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಅವರನ್ನೂ ದೆಹಲಿಯಲ್ಲಿ ಭೇಟಿ ಮಾಡಿದ್ದೆ, ಅವರು ನಮ್ಮ ನಾಯಕರು, ನಮ್ಮ ಮುಖ್ಯಮಂತ್ರಿ, ಭೇಟಿ ಸಂದರ್ಭದಲ್ಲಿ ಯಾವುದೇ ರಾಜಕೀಯ ವಿಷಯ ಪ್ರಸ್ತಾಪವಾಗಿಲ್ಲ.
ಅಭಿಮಾನಿಗಳ ಆಸೆ
ನನ್ನ ಸಹೋದರ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕೆನ್ನುವುದು, ನನ್ನ ಹಾಗೂ ಅಭಿಮಾನಿಗಳ ಆಸೆ, ಅವರ ಹಣೆಯಲ್ಲಿ ಬರೆದಿದ್ದರೆ ಆಗೇ ಆಗುತ್ತಾರೆ ಎಂದರು.
ಪತ್ರಿಕಾಗೋಷ್ಠಿ ಉದ್ದಕ್ಕೂ ನೇರವಾಗಿ ಅಧಿಕಾರ ಹಸ್ತಾಂತರ ವಿಷಯ ಪ್ರಸ್ತಾಪಿಸದೆ, ಅವಕಾಶ ಸಿಕ್ಕ ಸಂದರ್ಭದಲ್ಲೆಲ್ಲಾ ಪರೋಕ್ಷವಾಗಿ, ನಿಮ್ಮ ಅಧಿಕಾರಾವಧಿ ಮುಗಿದಿದೆ, ಕೊಟ್ಟ ಮಾತಿನಂತೆ ನಡೆದುಕೊಳ್ಳಿ ಎಂದು ಸಂಬಂಧಪಟ್ಟವರಿಗೆ ಅರ್ಥವಾಗುವಂತೆ ಬಿಡಿಸಿ.., ಬಿಡಿಸಿ.., ಹೇಳಿದರು.

