ಬೆಂಗಳೂರು:ಅಧಿಕಾರ ಹಂಚಿಕೆ ಸಮರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ಶಾಸಕರ ಬಲಾ ಬಲ ಪ್ರದರ್ಶನ ಹಂತ ತಲುಪಿದೆ.
ಅಧಿಕಾರ ಪಡೆಯಲೇಬೇಕೆಂದು ಪಣ ತೊಟ್ಟಿರುವ ಶಿವಕುಮಾರ್ ಕಳೆದ ಎರಡು ದಿನಗಳಿಂದ ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಪಕ್ಷದ ಶಾಸಕರ ವಿಶ್ವಾಸ ಪಡೆಯುವಲ್ಲಿ ನಿರತರಾಗಿದ್ದಾರೆ.
ದಲಿತ ಸಚಿವರ ಉಪಹಾರ ಸಭೆ
ಮತ್ತೊಂದೆಡೆ ಸಿದ್ದರಾಮಯ್ಯ ಅವರನ್ನು ಅಧಿಕಾರದಲ್ಲಿ ಉಳಿಸಲೇಬೇಕೆಂದು ಪಣ ತೊಟ್ಟಿರುವ ದಲಿತ ಸಚಿವರುಗಳು ಇಂದು ಬೆಳಗ್ಗೆ ಉಪಹಾರ ಸಭೆ ನಡೆಸಿ ಶಾಸಕರ ಬಲ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ಇದರ ನಾಯಕತ್ವ ವಹಿಸಿಕೊಂಡಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಮುಖ್ಯಮಂತ್ರಿ ಪರ ಸಹಿ ಸಂಗ್ರಹಕ್ಕೆ ಇಳಿಯುವ ಜೊತೆಗೆ ವರಿಷ್ಠರ ಭೇಟಿ ಮಾಡಿ ಸಿದ್ದರಾಮಯ್ಯ ಅವರನ್ನೇ ಮುಂದುವರೆಸುವಂತೆ ಮನವಿ ಮಾಡಲು ಸಭೆ ನಿರ್ಧರಿಸಿದೆ.
ದೆಹಲಿಗೆ ತೆರಳುವುದಕ್ಕೂ ಮುನ್ನ ನಗರಕ್ಕೆ ಧಾವಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿ ನಂತರ ರಾಹುಲ್ ಗಾಂಧಿ ಭೇಟಿಗೆ ತೆರಳಲಿದ್ದಾರೆ.
ರಾಹುಲ್-ಖರ್ಗೆ ಭೇಟಿ
ರಾಹುಲ್ ಮತ್ತು ಖರ್ಗೆ ಭೇಟಿ ಸಮಯ ನಿಗದಿ ಅಧಿಕಾರವನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಸಭೆ ನೀಡಿದೆ.
ಸಿದ್ದರಾಮಯ್ಯ ಅವರ ಆಡಳಿತ ಎರಡೂವರೆ ವರ್ಷ ಪೂರ್ಣಗೊಳ್ಳುತ್ತಿದ್ದಂತೆ ಶಿವಕುಮಾರ್ ಬಣ ಅಧಿಕಾರ ಹಸ್ತಾಂತರಕ್ಕೆ ವರಿಷ್ಠರ ಮೊರೆ ಹೋಗಿದ್ದಾರೆ.
ಡಿ.ಕೆ. ಸಹೋದರರು ಕಳೆದ ದೀಪಾವಳಿ ಹಬ್ಬದಿಂದಲೇ ತಮಗೆ ದಕ್ಕಬೇಕಾದ ಸ್ಥಾನ ಪಡೆಯಲು ಪೂರ್ವ ಸಿದ್ಧತೆ ಮಾಡಿಕೊಂಡು ಬಂದಿದ್ದಾರೆ.
ಬಹಿರಂಗ ಹೋರಾಟ
ನವೆಂಬರ್ 20ಕ್ಕೆ ಎರಡೂವರೆ ವರ್ಷ ಆಡಳಿತ ಪೂರ್ಣಗೊಳ್ಳುತ್ತಿದ್ದಂತೆ ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡುವ ಲಕ್ಷಣಗಳನ್ನು ತೋರದೇ ಇರುವುದು ಹಾಗೂ ವರಿಷ್ಠರು ಅಧಿಕಾರ ಹಂಚಿಕೆ ಕುರಿತು ಏನನ್ನೂ ಹೇಳದಿರುವುದರಿಂದ ಶಿವಕುಮಾರ್ ಬಣ ಬಹಿರಂಗವಾಗಿ ಹೋರಾಟಕ್ಕೆ ಇಳಿದಿದೆ.
ಶಿವಕುಮಾರ್ ಬಣ ಸಹಿ ಸಂಗ್ರಹ ಜೊತೆಗೆ ತಂಡೋಪ ತಂಡವಾಗಿ ವರಿಷ್ಠರನ್ನು ಭೇಟಿ ಮಾಡಿ, ಸರ್ಕಾರ ರಚನೆ ವೇಳೆ ರೂಪಿಸಿರುವ ಸೂತ್ರ ಅನುಷ್ಟಾನಕ್ಕೆ ಒತ್ತಡ ಹೇರುತ್ತಿದ್ದಾರೆ.
ಇದರ ಮಧ್ಯೆ, ಶಿವಕುಮಾರ್ ಗೌಪ್ಯವಾಗಿ ಶಾಸಕರ ಜೊತೆ ಸಭೆಗಳನ್ನು ಒಂದೆಡೆ ನಡೆಸುತ್ತಿದ್ದರೆ, ಮತ್ತೊಂದೆಡೆ ಕೊಲೆ ಮತ್ತು ಭ್ರಷ್ಟಾಚಾರ ಆರೋಪದ ಮೇಲೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ಪಕ್ಷದ ಶಾಸಕರಾದ ವಿನಯ್ ಕುಲಕರ್ಣಿ ಮತ್ತು ವೀರೇಂದ್ರ ಪಪ್ಪಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಲ್ಲದೆ, ಅವರ ಬೆಂಬಲವನ್ನೂ ಪಡೆದುಕೊಂಡಿದ್ದಾರೆ.
ಬೆಂಬಲಿಗರ ಸಹಿ ಸಂಗ್ರಹ
ಶಿವಕುಮಾರ್ ಮಾತುಕತೆ ನಡೆಸುವ ಸಂದರ್ಭದಲ್ಲೇ ಅವರ ಬೆಂಬಲಿಗರೊಬ್ಬರು ಇವರಿಬ್ಬರ ಸಹಿ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇದುವರೆಗೂ ಮುಚ್ಚು ಮರೆಯಲ್ಲಿ ನಡೆಯುತ್ತಿದ್ದ ಅಧಿಕಾರ ಹಸ್ತಾಂತರ ಸಮರ ಬಹಿರಂಗವಾಗೇ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರ ಮಾಡಬೇಕೆಂಬ ಒತ್ತಾಯ ತರುತ್ತಿದ್ದಾರೆ.
ಆದರೆ, ಶಿವಕುಮಾರ್ ಮಾತ್ರ ಪಕ್ಷದ ನಿಷ್ಠರಂತೆ ಮಾತನಾಡುತ್ತಾ, ತಮಗೂ, ಈ ಬೆಳವಣಿಗೆಗೂ ಯಾವುದೇ ಸಂಬಂಧ ಇಲ್ಲ ಎನ್ನುವಂತೆ ನಡೆದುಕೊಳ್ಳುತ್ತಿದ್ದಾರೆ.

