ಬೆಂಗಳೂರು:ಕರ್ನಾಟಕದ ಮುಖ್ಯಮಂತ್ರಿ ಆಗಲೇಬೇಕೆಂಬ ಹಠಕ್ಕೆ ಬಿದ್ದಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣದ ಶಾಸಕರಲ್ಲಿ ಆಶಾಭಾವನೆಗಳು ಗರಿಗೆದರಿವೆ.
ದೆಹಲಿಯಿಂದ ಆಗಮಿಸಿದ ಶಿವಕುಮಾರ್ ಪರ ಶಾಸಕ ಬಾಲಕೃಷ್ಣ, ತಮ್ಮ ಪ್ರವಾಸ ಫಲಪ್ರದವಾಗುವ ಹಾದಿಯಲ್ಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ದೆಹಲಿ ಸಂದೇಶ
ದೆಹಲಿಯಲ್ಲಿ ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಭೇಟಿ ಮಾಡಿ ನಗರಕ್ಕೆ ಆಗಮಿಸಿದ ಪ್ರಿಯಾಂಕ್ ಖರ್ಗೆ ಉಪಮುಖ್ಯಮಂತ್ರಿ ಶಿವಕುಮಾರ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ದೆಹಲಿ ಸಂದೇಶವನ್ನು ತಲುಪಿಸಿದರು.
ಈ ಮಧ್ಯೆ ಶಿವಕುಮಾರ್ ಪಕ್ಷದ ಕೆಲವು ಹಿರಿಯ ನಾಯಕರು, ಅದರಲ್ಲೂ ಸಿದ್ದರಾಮಯ್ಯ ಪರ ಹೆಚ್ಚು ಒಲವು ಇರುವ ಸಚಿವರೊಂದಿಗೆ ಮನವೊಲಿಕೆ ಮಾತುಕತೆಯಲ್ಲಿ ತೊಡಗಿದ್ದಾರೆ.
ಸಚಿವರಾದ ಕೆ.ಜೆ.ಜಾರ್ಜ್, ಜಮೀರ್ ಅಹಮದ್, ಸತೀಶ್ ಜಾರಕಿಹೊಳಿ ಅವರುಗಳನ್ನು ಪ್ರತ್ಯೇಕವಾಗಿ ಭೇಟಿ ಮಾಡುತ್ತಿರುವ ಶಿವಕುಮಾರ್, ಮುಂದಿನ ದಿನಗಳ ರಾಜಕೀಯ ಬೆಳವಣಿಗೆಯಲ್ಲಿ ಸಹಕರಿಸುವಂತೆ ಕೋರಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯ ಬಣದೊಂದಿಗೂ ಚರ್ಚೆ
ಅಲ್ಲದೆ, ಸಿದ್ದರಾಮಯ್ಯ ಬಣದ ಶಾಸಕರ ಬಳಿಯೂ ಚರ್ಚೆ ನಡೆಸುತ್ತಿದ್ದಾರೆಂಬ ಮಾಹಿತಿಗಳು ಉನ್ನತ ಮೂಲಗಳಿಂದ ಲಭ್ಯವಾಗಿವೆ.
ಈ ಎಲ್ಲಾ ವಿದ್ಯಮಾನಗಳನ್ನು ಗಮನಿಸಿದಲ್ಲಿ ಶಿವಕುಮಾರ್ ಪಾಲಿಗೆ ಒಳ್ಳೆಯ ಕ್ಷಣಗಳು ಬರುವ ಸಾಧ್ಯತೆ ಕಂಡುಬರುತ್ತಿವೆ.
ಸುದ್ದಿಗಾರರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಕಾಂಗ್ರೆಸ್‌ಗೆ ಯಾರೂ ಅನಿವಾರ್ಯ ಅಲ್ಲ, ಸಿದ್ದರಾಮಯ್ಯ ಅಂದರೆ ಕಾಂಗ್ರೆಸ್.., ಕಾಂಗ್ರೆಸ್ ಅಂದರೆ ಸಿದ್ದರಾಮಯ್ಯ ಎಂಬುದು ಸರಿಯಲ್ಲ, ಅವರು ಪಕ್ಷಕ್ಕೆ ಬರುವ ಮೊದಲೂ ಕಾಂಗ್ರೆಸ್ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ.
ಸಿದ್ದರಾಮಯ್ಯ ನಿಸ್ಸಂಶಯ ನಾಯಕ
ಸಿದ್ದರಾಮಯ್ಯ ಪಕ್ಷಕ್ಕಾಗಿ ದುಡಿದಿರುವ ನಾಯಕರಲ್ಲಿ ಒಬ್ಬರು ಎಂಬುದರಲ್ಲಿ ಸಂಶಯವಿಲ್ಲ ಎಂದರು.
ಕಾಂಗ್ರೆಸ್‌ನಲ್ಲಿ ಬಿರುಸುಗೊಂಡಿರುವ ನಾಯಕತ್ವ ವಿಚಾರದ ಗೊಂದಲದ ನಡುವೆಯೇ ಒಂದೆಡೆ ಸೇರಿದ್ದ ಸಚಿವ ಸತೀಶ್ ಜಾರಕಿಹೊಳಿ ಅಂಡ್ ಟೀಂ ಗಹನವಾದ ಚರ್ಚೆ ನಡೆಸಿತು.
ಜಾರಕಿಹೊಳಿ ಡಿನ್ನರ್ ಮೀಟಿಂಗ್
ಶಿವಕುಮಾರ್ ಅವರೊಂದಿಗೆ ನಿನ್ನೆ ಮಿಡ್ ನೈಟ್ ಮೀಟಿಂಗ್ ನಡೆಸಿರುವ ಬೆನ್ನಲ್ಲೆ ಜಾರಕಿಹೊಳಿ ಆಪ್ತರ ಡಿನ್ನರ್ ಮೀಟಿಂಗ್ ಕುತೂಹಲ ಮೂಡಿಸಿದ್ದು, ಪಕ್ಷದ ಪ್ರಚಲಿತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಿದರು ಎನ್ನಲಾಗಿದೆ.
ಖಾಸಗಿ ಹೋಟೆಲ್‌ನಲ್ಲಿ ನಡೆದ ಡಿನ್ನರ್ ಮೀಟಿಂಗ್‌ನಲ್ಲಿ ಸತೀಶ್ ಜಾರಕಿಹೊಳಿ ಆಪ್ತ ಶಾಸಕರಾದ ಪ್ರಕಾಶ್ ಕೋಳಿವಾಡ, ವಿಶ್ವಾಸ್ ವೈದ್ಯ, ಕಂಪ್ಲಿ ಗಣೇಶ್, ಹಂಪನಗೌಡ ನಾಯಕ್, ಬಾಬಾ ಸಾಹೇಬ್ ಪಾಟೀಲ್, ಆಸೀಪ್ ಪಠಾಣ್, ಪಾವಗಡ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

