ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಲ್ಲಿ ಮುಂದುವರೆಸುವ ಅಥವಾ ಬದಲಾವಣೆ ತೀರ್ಮಾನ ಕೈಗೊಳ್ಳಲು ಕಾಂಗ್ರೆಸ್ ಸಂಸದೀಯ ಮಂಡಳಿ ಸಭೆ ಭಾನುವಾರ ಸೇರಲಿದೆ.
ಕರ್ನಾಟಕ ಕಾಂಗ್ರೆಸ್‌ನಲ್ಲಿ ಭುಗಿಲೆದ್ದರುವ ಅಧಿಕಾರ ಹಸ್ತಾಂತರ ವಿಷಯಕ್ಕೆ ತೆರೆ ಎಳೆಯಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಬೆಳಗ್ಗೆ 11 ಗಂಟೆಗೆ ಪಕ್ಷದ ಕಚೇರಿಯಲ್ಲಿ ಸಭೆ ನಿಗದಿ ಮಾಡಿದ್ದಾರೆ.
ಸಭೆಯಲ್ಲಿ ಭಾಗವಹಿಸುವಂತೆ ಸಂದೇಶ
ಸಭೆಯಲ್ಲಿ ಭಾಗವಹಿಸುವಂತೆ ಸಂಸದೀಯ ಮಂಡಳಿಯ ಎಲ್ಲಾ ಸದಸ್ಯರಿಗೂ ಎಐಸಿಸಿ ಸಂದೇಶ ರವಾನಿಸಿದೆ.
ಖರ್ಗೆ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಅಂಬಿಕಾ ಸೋನಿ, ಅಭಿಷೇಕ್ ಸಿಂಘ್ವಿ, ಅಧೀರ್ ರಂಜನ್ ಚೌಧರಿ, ಅಜಯ್ ಮಾಕೆನ್, ಆನಂದ ಶರ್ಮ, ಜೈರಾಮ್ ರಮೇಶ್, ಪಿ.ಚಿದಂಬರಂ, ಪ್ರಿಯಾಂಕಾ ಗಾಂಧಿ ವಾದ್ರಾ, ದಿಗ್ವಿಜಯ್ ಸಿಂಗ್, ಕೆ.ಸಿ.ವೇಣುಗೋಪಾಲ್, ಸಚಿನ್ ಪೈಲೆಟ್, ರಣದೀಪ್ ಸಿಂಗ್ ಸುರ್ಜೇವಾಲ ಸೇರಿದಂತೆ ಪ್ರಮುಖರು ಸದಸ್ಯರಾಗಿದ್ದಾರೆ.
ಸಿದ್ದರಾಮಯ್ಯ ಆಡಳಿತಕ್ಕೆ ಎರಡು ವರ್ಷ ಪೂರ್ಣಗೊಂಡಿದ್ದು, ಉಳಿದ ಅವಧಿಗೆ ತಮಗೆ ಅಧಿಕಾರ ನೀಡಬೇಕೆಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವರಿಷ್ಠರ ಮೇಲೆ ಒತ್ತಡ ತಂದಿದ್ದಾರೆ.
ಚರ್ಚೆಗೆ ಗ್ರಾಸ
ಕಳೆದ ಒಂದು ವಾರದಿಂದ ಅಧಿಕಾರ ಹಸ್ತಾಂತರ ಕುರಿತಂತೆ ಚರ್ಚೆಗೆ ಗ್ರಾಸವಾಗಿದ್ದು, ವರಿಷ್ಠರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಇದರ ಹಿನ್ನೆಲೆಯಲ್ಲಿ ಪಕ್ಷದ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲು ಖರ್ಗೆ ಸಭೆ ಕರೆದಿದ್ದಾರೆ.

