ಬೆಂಗಳೂರು:ಅಧಿಕಾರ ಹಸ್ತಾಂತರ ಕುರಿತಂತೆ ಕಾಂಗ್ರೆಸ್ ವರಿಷ್ಠರು ನೀಡಿರುವ ಸಂದೇಶವನ್ನು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ತಲುಪಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ನಡುವಿನ ಅಧಿಕಾರ ಹಸ್ತಾಂತರ ವಿಚಾರ ಮುನ್ನೆಲೆಗೆ ಬರುತ್ತಿದ್ದಂತೆ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ, ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ರಾಜ್ಯದ ಕೆಲವು ಮುಖಂಡರು ಮತ್ತು ಸಚಿವರನ್ನು ಕರೆಸಿಕೊಂಡು ಸಮಾಲೋಚನೆ ಮಾಡಿದ್ದರು.
ಇದಕ್ಕೆ ಸಂಬಂಧಿಸಿದಂತೆ ರಾಹುಲ್, ಸಚಿವ ಪ್ರಿಯಾಂಕ್ ಅವರನ್ನು ಎರಡು-ಮೂರು ಬಾರಿ ದೆಹಲಿಗೆ ಕರೆಸಿಕೊಂಡು ಚರ್ಚೆ ಮಾಡಿದ್ದಾರೆ.
ಪ್ರತ್ಯೇಕ ಭೇಟಿ
ಒಮ್ಮೆ ಪ್ರಿಯಾಂಕ್ ದೆಹಲಿಯಿಂದ ಹಿಂತಿರುಗುತ್ತಿದ್ದಂತೆ, ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ವರಿಷ್ಠರ ಸಂದೇಶ ನೀಡಿದ್ದರು.
ಇದಾದ ನಂತರವೂ ಶಿವಕುಮಾರ್ ಅವರನ್ನು ಎರಡು ಭಾರಿ ಭೇಟಿ ಮಾಡಿದ್ದರೂ ಇಂದು ಬೆಳ್ಳಂಬೆಳಗ್ಗೆ ಮತ್ತೆ ಉಪಮುಖ್ಯಮಂತ್ರಿ ನಿವಾಸಕ್ಕೆ ತೆರಳಿ ಸುಮಾರು 90 ನಿಮಿಷಗಳವರೆಗೆ ಮುಖಾಮುಖಿ ಚರ್ಚೆ ಮಾಡಿದ್ದಾರೆ.
ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಶಿವಕುಮಾರ್, ನಿನ್ನೆ ರಾತ್ರಿ ಮದುವೆಯೊಂದರಲ್ಲಿ ಸತೀಶ್ ಜಾರಕಿಹೊಳಿ ಭೇಟಿಯಾಗಿದ್ದು ನಿಜ, ರಾಜ್ಯ ಹಾಗೂ ಪಕ್ಷದ ವಿಚಾರ ಮಾತನಾಡಿದ್ದೇವೆ, ನಾವು ಸಹೋದ್ಯೋಗಿಗಳು, ನಮ್ಮನ್ನು ವೈರಿಗಳಂತೆ ಏಕೆ ನೋಡುತ್ತೀರಿ ಎಂದು ಪ್ರಶ್ನಿಸಿದರು.
ಬಾಂಧವ್ಯ ಇದ್ದೇ ಇರುತ್ತದೆ
ನಾವು ಸಚಿವ ಸಂಪುಟ ಸಭೆಯಲ್ಲಿ ಇರುತ್ತೇವೆ, ರಾತ್ರಿ ಊಟಕ್ಕೆ ಸೇರುತ್ತೇವೆ, ಬೆಳಗ್ಗೆ ತಿಂಡಿಗೆ ಸೇರುತ್ತೇವೆ, ಇವೆಲ್ಲ ಇದ್ದದ್ದೇ, ರಾಜಕೀಯದಲ್ಲಿ ಸ್ನೇಹ, ಬಾಂಧವ್ಯ, ನೆಂಟಸ್ಥನ ಇದ್ದೇ ಇರುತ್ತದೆ.
ನಾನು ಹಾಗೂ ಎಂ.ಬಿ.ಪಾಟೀಲ್ ಸುಮಾರು ಒಂದು ಗಂಟೆ ಮಾತಾಡಿದ್ದೇವೆ, ರಾಜ್ಯಕ್ಕೆ ಬಂಡವಾಳ ಹೂಡಿಕೆದಾರರ ಆಕರ್ಷಣೆ, ಆಂಧ್ರ ಪ್ರದೇಶ, ತಮಿಳುನಾಡಿನಿಂದ ಎದುರಾಗಿರುವ ಸ್ಪರ್ಧೆ, ತೆಲಂಗಾಣ ಜಾಗತಿಕ ಸಮಾವೇಶ ಇತ್ಯಾದಿ ಚರ್ಚೆ ಮಾಡಿದ್ದೇವೆ, ರಾಜ್ಯದ ಪ್ರಗತಿ ಬಗ್ಗೆ ಚರ್ಚೆ ಸಹಜ ಎಂದರು.
ಅಧಿವೇಶನದಲ್ಲೇ ಉತ್ತರ
ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರಿಗೆ ರಾಜ್ಯದಲ್ಲಿ ಶೇ.63ರಷ್ಟು ಭ್ರಷ್ಟಾಚಾರ ಇದೆ ಎಂಬ ವರದಿ ಯಾರ ಕಾಲದ್ದು ಎಂಬುದೇ ಗೊತ್ತಿಲ್ಲ, ಮೊದಲು ಅದನ್ನು ಓದಿಕೊಂಡು ವಿಧಾನಮಂಡಲದ ಅಧಿವೇಶನದಲ್ಲಿ ಪ್ರಸ್ತಾಪಿಸಲಿ, ಅಲ್ಲಿಯೇ ಉತ್ತರ ನೀಡುತ್ತೇವೆ ಎಂದರು.
ಕೇಂದ್ರ ಸಚಿವರುಗಳು ಸಂಸತ್ ಅಧಿವೇಶನದಲ್ಲಿ ಕಾರ್ಯನಿರತರಾಗಿದ್ದು, ಡಿಸೆಂಬರ್ 8ರ ರಾಜ್ಯದ ಸಂಸದರು ಹಾಗೂ ಸರ್ವಪಕ್ಷ ಸಭೆ ಮುಂದೂಡಲಾಗಿದೆ, ಮುಂದೆ ಅನುಕೂಲಕರ ದಿನಾಂಕ ನಿಗದಿ ಮಾಡಲಾಗುವುದು ಎಂದರು.

