ಮಂಡ್ಯ:ಸುಮಾರು ಹದಿನೈದು ತಿಂಗಳಿಂದ ವೇತನ ಸಿಗದೇ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಇಲ್ಲಿನ ಮೈಶುಗರ್ ಶಾಲೆ ಶಿಕ್ಷಕರ ಬಾಕಿ ವೇತನಕ್ಕಾಗಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಸಂಸದರ ವೇತನವನ್ನೇ ನೀಡಿದ್ದಾರೆ.
ಭರವಸೆಯಂತೆ ಶನಿವಾರ ಬೆಳಗ್ಗೆ ಶಾಲೆಗೆ ಭೇಟಿ ನೀಡಿದ ಸಚಿವರು, 19,94,200 ರೂ. ಮೊತ್ತದ ಚೆಕ್ ಅನ್ನು ಶಾಲೆಯ ಆಡಳಿತ ಮಂಡಳಿಗೆ ಹಸ್ತಾಂತರ ಮಾಡಿದರು.
ಶಿಕ್ಷಕರ ನೋವು ಅರ್ಥವಾಗಿದೆ
ವೇತನವಿಲ್ಲದೆ ಕೆಲಸ ಮಾಡುವುದು ಕಷ್ಟ, ಶಿಕ್ಷಕರ ನೋವು ನನಗೆ ಅರ್ಥವಾಗಿದೆ, ನಿಮ್ಮ ಕಷ್ಟಕ್ಕೆ ಸ್ಪಂದಿಸುವುದಾಗಿ ಮಾತು ಕೊಟ್ಟಿದ್ದೆ, ನಿಮಗೆ ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ ಎಂದರು.
ಶಾಲೆ ಸಂಕಷ್ಟಕ್ಕೆ ಸಿಲುವುದು ನನಗೆ ಇಷ್ಟವಿಲ್ಲ, ಶಾಲೆ ಉಳಿಸುವ ಕುರಿತು ರಾಜ್ಯ ಸರ್ಕಾರಕ್ಕೂ ಮನವಿ ಮಾಡುತ್ತೇನೆ, ಪಿಯುಸಿವರೆಗೆ ಶಾಲೆಯಲ್ಲಿ ಶಿಕ್ಷಣ ಸೌಲಭ್ಯ ಒದಗಿಸಲಿ.
ಆದಿಚುಂಚನಗಿರಿ ಸ್ವಾಮೀಜಿ ಜೊತೆಯೂ ಮಾತಾಡಿದ್ದೇನೆ, ಒಂದೇ ರಾತ್ರಿಯಲ್ಲಿ ಅಭಿವೃದ್ಧಿ ಮಾಡುತ್ತೇನೆ ಎಂಬುದಾಗಿ ಹೇಳಲ್ಲ, ಹಂತ ಹಂತವಾಗಿ ಶಾಲೆ ಅಭಿವೃದ್ಧಿ ಮಾಡೋಣ, ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲಿ, ಮಂಡ್ಯದಲ್ಲಿ ಮೈಶುಗರ್ ಶಾಲೆಯೇ ನಂಬರ್ ಓನ್ ಶಾಲೆ ಆಗಿರಬೇಕು ಎಂಬುದೇ ನನ್ನ ಆಶಯ ಎಂದರು.
15 ತಿಂಗಳಿಂದ ಸಂಬಳ
ಶಿಕ್ಷಕರ ಕಷ್ಟ ತಿಳಿದು ನಾನು ಬಹಳ ನೊಂದಿದ್ದೆ, 15 ತಿಂಗಳಿಂದ ಸಂಬಳ ಇಲ್ಲದೇ ಕೆಲಸ ಮಾಡುವುದು ಸುಲಭವಲ್ಲ, ಸಂಕಷ್ಟದ ಕಾಲದಲ್ಲಿಯೂ ಮಕ್ಕಳಿಗೆ ವಿದ್ಯೆ ಕಲಿಸಿದ್ದಾರೆ, ಎಲ್ಲಾ ಶಿಕ್ಷಕರಿಗೆ ಅಭಿನಂದನೆ ಹೇಳುತ್ತೇನೆ.
ಶಾಲೆ ಅಭಿವೃದ್ಧಿ ಎಲ್ಲರ ಕರ್ತವ್ಯ, ನನ್ನ ಕೈಲಾದದ್ದನ್ನು ನಾನು ಮಾಡುತ್ತೇನೆ, ಮಕ್ಕಳ ಅನುಕೂಲಕ್ಕೆ ಎರಡು ಶಾಲಾ ಬಸ್ ಬೇಕು ಎಂಬ ಮನವಿ ಮಾಡಿದ್ದಾರೆ, ಮೈಶುಗರ್ ಶಾಲೆಯಲ್ಲಿ ಎಲ್‌ಕೆಜಿಯಿಂದ ಪಿಯುವರೆಗೆ ಉಚಿತ ಶಿಕ್ಷಣ ನೀಡಲು ಹೇಳಿದ್ದೇನೆ.
ಈ ಬಗ್ಗೆ ಚುಂಚನಗಿರಿ ಸ್ವಾಮೀಜಿ ಸಹಾ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ, ಸಂಸತ್ ಅಧಿವೇಶನ ಮುಗಿದ ಬಳಿಕ ಶ್ರೀಗಳ ಮಾರ್ಗದರ್ಶನದಲ್ಲಿ ಚರ್ಚೆ ಮಾಡುತ್ತೇವೆ, ಕಾಂಗ್ರೆಸ್ ನಾಯಕರಿಗೂ ಈ ಬಗ್ಗೆ ಹೇಳುತ್ತೇನೆ.
ರಾಜಕೀಯ ಬೇಡ
ಶಾಲೆ ವಿಷಯದಲ್ಲಿ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ, ಮೈಶುಗರ್ ಶಾಲೆ ಉಳಿಸುವುದು ನಮ್ಮೆಲ್ಲರ ಕರ್ತವ್ಯ.
ಎಂಎಸ್‌ಪಿ ಬೆಲೆ ನಿಗದಿ ಸಮಸ್ಯೆ ರಾಜ್ಯ ಸರ್ಕಾರ ಬಗೆಹರಿಸಿಕೊಳ್ಳಬೇಕು, ಮೊದಲು ಖರೀದಿ ಕೇಂದ್ರ ತೆರೆಯಿರಿ, ಆ ಬಳಿಕ ಕೇಂದ್ರವನ್ನು ಕೇಳಿ, ಎಂಎಸ್‌ಪಿ ಬೆಲೆ ಕಾರ್ಯರೂಪಕ್ಕೆ ತರುವುದು ರಾಜ್ಯದ ಕರ್ತವ್ಯ.
ನಾನು ಸಾಲ ತೀರಿಸಿದ್ದೇನೆ
ಕೇಂದ್ರ ಸರ್ಕಾರದ ಅನುದಾನ ಪಡೆಯಲು ಕೋರ್ಟ್‌ಗೆ ಹೋಗಬೇಕು ಎನ್ನುತ್ತದೆ ರಾಜ್ಯ ಸರ್ಕಾರ, ನಾನು ಮುಖ್ಯಮಂತ್ರಿ ಆಗಿದ್ದಾಗ ಕೋರ್ಟ್‌ಗೆ ಹೋಗಲಿಲ್ಲ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗಿನ 4.5 ಸಾವಿರ ಕೋಟಿ ರೂ. ಸಾಲ ನಾನು ತೀರಿಸಿದ್ದೇನೆ, ನನ್ನ ಕಾಲದ ಸಾಲ ಇವರೇನು ತೀರಿಸಿಲ್ಲ ಎಂದರು.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಇಬ್ಬರೂ ಎಷ್ಟು ಲಕ್ಷ ಬೆಲೆ ವಾಚ್ ಕಟ್ಟಿದ್ದಾರೆ ಎನ್ನುವುದು ಮುಖ್ಯವಲ್ಲ, ವಾಚ್ ಹೇಗೆ ಖರೀದಿಸಿದರು ಎಂಬುದೇ ಮುಖ್ಯ, ಅವರ ದುಡಿಮೆ ದುಡ್ಡಿನಲ್ಲಿ ಖರೀದಿ ಮಾಡಿದ್ದಾರಾ ಎನ್ನೋದು ಮುಖ್ಯ ಎಂದರು.

