ಬೆಂಗಳೂರು:ಪಂಚ ಗ್ಯಾರಂಟಿ ಯೋಜನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನರಿಗೆ ನೀಡಿದ್ದರೂ ಆಡಳಿತ ವಿರೋಧಿ ಅಲೆ ಇದೆ ಎಂದು ಎನ್‌ಡಿಟಿವಿ ಇತ್ತೀಚೆಗೆ ನಡೆಸಿರುವ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.
ರಾಜ್ಯ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಈಗಲೂ ಜನನಾಯಕ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಜನಪ್ರಿಯತೆಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ.
ಅಲ್ಪಸಂಖ್ಯಾತರು ಕಾಂಗ್ರೆಸ್ ಪರ
ಅಲ್ಪಸಂಖ್ಯಾತರು ಹೆಚ್ಚಾಗಿರುವ ವಿಧಾನಸಭಾ ಕ್ಷೇತ್ರ ಹಾಗೂ ಆ ಸಮುದಾಯ ಬಹುತೇಕ ಕಾಂಗ್ರೆಸ್ ಪರ ಇದೆ.
ಅಲ್ಪಸಂಖ್ಯಾತರನ್ನು ಹೊರತುಪಡಿಸಿ ಉಳಿದೆಲ್ಲಾ ಸಮುದಾಯಗಳು ಬಿಜೆಪಿ ಮತ್ತು ಜೆಡಿಎಸ್ ಪರ ಒಲವು ತೋರಿದ್ದಾರೆ.
ಸಮೀಕ್ಷಾ ವರದಿಯಲ್ಲಿ ವಿವಿಧ ಸಮುದಾಯಗಳು ಸಿದ್ದರಾಮಯ್ಯ-ಶಿವಕುಮಾರ್ ಅವರಿಗಿರುವ ಬೆಂಬಲ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಯಾವ ರೀತಿ ಜನಮನ್ನಣೆ ಇದೆ ಎಂಬುದನ್ನು ತಿಳಿಸಿದೆ.
ಬಿಜೆಪಿ-ಜೆಡಿಎಸ್‌ಗೆ ಒಲವು
ಬಿಜೆಪಿ-ಜೆಡಿಎಸ್ ಒಂದಾಗಿ ಚುನಾವಣೆ ಎದುರಿಸಿದರೆ, ಅಲ್ಪಸಂಖ್ಯಾತರು ಹೊರತುಪಡಿಸಿ ಎಲ್ಲಾ ವರ್ಗಗಳಿಂದಲೂ ಕಾಂಗ್ರೆಸ್‌ಗಿಂತ ಹೆಚ್ಚು ಬೆಂಬಲ ವ್ಯಕ್ತವಾಗಲಿದೆ.
ಬಿಜೆಪಿ ಹಾಗೂ ಜೆಡಿಎಸ್‌ಗೆ ಪರಿಶಿಷ್ಟ ಜಾತಿ ಶೇ.47.2, ಪರಿಶಿಷ್ಟ ಪಂಗಡ ಶೇ.56.3, ಹಿಂದುಳಿದ ವರ್ಗ(ಒಬಿಸಿ) ಶೇ.59.3, ಮೇಲ್ವರ್ಗದ ಶೇ.68.5, ಅಲ್ಪಸಂಖ್ಯಾತರು ಶೇ.14.8, ಕ್ರಿಶ್ಚಿಯನ್ ಶೇ.17.6 ಹಾಗೂ ಇತರೆ ಸಮುದಾಯದ ಶೇ.75.5ರಷ್ಟು ಬೆಂಬಲ ಇದೆ.
ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಇವರುಗಳಿಗೆ ಇರುವ ಎಲ್ಲ ಸಮುದಾಯಗಳ ಬೆಂಬಲಿತರ ಪ್ರಮಾಣ ಒಗ್ಗೂಡಿಸಿದರೆ ಪರಿಶಿಷ್ಟ ಜಾತಿ ಶೇ.52, ಪರಿಶಿಷ್ಟ ಪಂಗಡ ಶೇ.43.7, ಹಿಂದುಳಿದ ವರ್ಗ(ಒಬಿಸಿ) ಶೇ.40, ಮೇಲ್ವರ್ಗ ಶೇ.31, ಅಲ್ಪಸಂಖ್ಯಾತರು ಶೇ.85.2, ಕ್ರಿಶ್ಚಿಯನ್ ಶೇ.82.4 ಹಾಗೂ ಇತರೆ ಶೇ.24.2ರಷ್ಟಿದೆ ಎಂದು ವರದಿ ಹೇಳಿದೆ.
ನಾಯಕತ್ವ ಜನಪ್ರಿಯತೆ
ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ವರ್ಚಸ್ಸು ಮತ್ತು ನಾಯಕತ್ವ ಜನಪ್ರಿಯತೆಯ ಶೇಕಡಾವಾರು ಪ್ರಮಾಣಕ್ಕೆ ಹೋಲಿಸಿದರೆ, ಶಿವಕುಮಾರ್ ಆಗಲೀ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಾಗಲೀ ಹತ್ತಿರದಲ್ಲಿ ಎಲ್ಲೂ ಇಲ್ಲ ಎಂದು ಎನ್‌ಡಿಟಿವಿ ಸಮೀಕ್ಷೆ ತಿಳಿಸಿದೆ.
ಎಲ್ಲಾ ಸಮುದಾಯಗಳಿಂದ ಈ ನಾಯಕರುಗಳಿಗೆ ಯಾವ ಪ್ರಮಾಣದಲ್ಲಿ ಬೆಂಬಲ ಇದೆ ಎಂಬುದನ್ನು ತನ್ನ ಸಮೀಕ್ಷೆಯಲ್ಲಿ ವಿವರಿಸಿದೆ.
ಸಿದ್ದರಾಮಯ್ಯ ಒಬಿಸಿ ನಾಯಕ ಎಂಬುದಾಗಿ ಎಐಸಿಸಿ ಬಿಂಬಿಸುತ್ತಿದೆ, ಆದರೆ, ರಾಜ್ಯದಲ್ಲಿ ಅವರಿಗೆ ಶೇ.33.3ರಷ್ಟು ಮಾತ್ರ ಬೆಂಬಲ ಇರುವುದು ವ್ಯಕ್ತವಾಗಿದೆ.
ಯಾವ ಸಮುದಾಯ ಎಷ್ಟು ಬೆಂಬಲ
ಸಿದ್ದರಾಮಯ್ಯ ಅವರಿಗೆ ಮುಂದುವರೆದ ಜನಾಂಗದ ಬೆಂಬಲ ಶೇ.29.9ರಷ್ಟಿದ್ದರೆ, ಅಲ್ಪಸಂಖ್ಯಾತರ ಶೇ.74.9ರಷ್ಟು ಬೆಂಬಲ ಇದೆ, ಆದರೆ, ಶಿವಕುಮಾರ್ ಅವರಿಗೆ ಹಿಂದುಳಿದ ವರ್ಗದಲ್ಲಿ ಶೇ.6ರಷ್ಟಿದ್ದರೆ, ಮುಂದುವರೆದ ಜನಾಂಗದ ಶೇ.5.9 ಹಾಗೂ ಮುಸ್ಲಿಂ ಶೇ.9.1ರಷ್ಟು ಬೆಂಬಲ ಇದೆ.
ಕಳೆದ 30 ತಿಂಗಳ ಆಡಳಿತದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಜಾರಿ ಸೇರಿದಂತೆ ಬಹುತೇಕ ಬೇಡಿಕೆಗಳನ್ನು ಈಡೇರಿಸಲಾಗಿದೆ, ಇದರಿಂದ ಬಡವರು ಮತ್ತು ಮಧ್ಯಮ ವರ್ಗದವರ ಜೀವನ ಮಟ್ಟ ಸುಧಾರಿಸಿದೆ ಎಂದು ಕಾಂಗ್ರೆಸ್ ಸರ್ಕಾರ ಹೇಳಿಕೊಂಡು ಬರುತ್ತಿದೆ.
ಅಲ್ಪಸಂಖ್ಯಾತರು ಹೆಚ್ಚಾಗಿರುವ ಕ್ಷೇತ್ರಗಳನ್ನು ಹೊರತುಪಡಿಸಿ, ಬಿಜೆಪಿ ಮತ್ತು ಜೆಡಿಎಸ್‌ಗೆ ಜನತೆ ದೊಡ್ಡ ಪ್ರಮಾಣದಲ್ಲಿ ಬೆಂಬಲಿಸಿರುವುದು ಸಮೀಕ್ಷೆಯಿಂದ ವ್ಯಕ್ತವಾಗಿದೆ.

