ಬೆಳಗಾವಿ:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಸಕ್ತ ಆಡಳಿತಾವಧಿಯಲ್ಲಿ ರಾಜ್ಯದಲ್ಲಿ 2,500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದಿಲ್ಲಿ ಆರೋಪಿಸಿದ್ದಾರೆ.
ರೈತರ ಸಂಕಷ್ಟ ಮುಂದುವರೆದಿದೆ, ರೈತರ ಆತ್ಮಹತ್ಯೆಯಲ್ಲಿ ರಾಜ್ಯ ಎರಡನೇ ಸ್ಥಾನ ಪಡೆದಿದೆ, ಇಷ್ಟು ದೊಡ್ಡ ಪ್ರಮಾಣದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದೇ ಸರ್ಕಾರದ ಸಾಧನೆಯಾಗಿದೆ ಎಂದು ಟೀಕಿಸಿದರು.
ರೈತ ವಿರೋಧಿ ನೀತಿ
ಭ್ರಷ್ಟ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ನಡೆಸಿದ ಬೃಹತ್ ಪ್ರತಿಭಟನೆ ವೇಳೆ ಮಾತನಾಡಿದ ಅವರು, ರೈತ ವಿರೋಧಿ ಸರ್ಕಾರಕ್ಕೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.
ಭತ್ತ, ಕಬ್ಬು, ಹತ್ತಿ, ಮೆಕ್ಕೆಜೋಳ ಮೊದಲಾದ ಉತ್ಪನ್ನ ಬೆಳೆಯುವ ರೈತರ ಮತ್ತು ಅನ್ನದಾತರ ಸಂಕಷ್ಟಕ್ಕೆ ಸ್ಪಂದಿಸಿಲ್ಲ, ಅತಿವೃಷ್ಟಿ ಸಂದರ್ಭದಲ್ಲಿ ಮುಖ್ಯಮಂತ್ರಿ ನೆಲದ ಮೇಲೆ ಓಡಾಡಲಿಲ್ಲ, ವೈಮಾನಿಕ ಸಮೀಕ್ಷೆ ಮಾಡಿದರು.
ಕನಿಷ್ಠ ಬೆಂಬಲ ಬೆಲೆ ಹೆಚ್ಚು ನೀಡಲು ಅವಕಾಶವಿದ್ದರೂ ಏಕೆ ನೀಡಲಿಲ್ಲ ಎಂದು ಸರ್ಕಾರವನ್ನು ಪ್ರಶ್ನಿಸಿದ ಅವರು, ಇದೊಂದು ಲಜ್ಜೆಗೆಟ್ಟ ಸರ್ಕಾರ ಎಂದರು.
ನ್ಯಾಯ ಸಿಗುವವರೆಗೆ ಹೋರಾಟ
ಬಿ.ಎಸ್.ಯಡಿಯೂರಪ್ಪ ನಡೆಸಿದ ರೈತಪರ ನಿರಂತರ ಹೋರಾಟ ಸ್ಮರಿಸಿದ ಅವರು, ನಾನು ಅವರ ಮಗನಾಗಿ, ರೈತರ ಹೋರಾಟಕ್ಕೆ ನ್ಯಾಯ ಸಿಗುವವರೆಗೆ ವಿರಮಿಸುವುದಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ರೈತರ ಧ್ವನಿ ಸುವರ್ಣಸೌಧ, ವಿಧಾನಸೌಧ ಮುಟ್ಟಬೇಕು, ವಿಧಾನಸಭೆ ಒಳಗೆ, ಹೊರಗೆ ಹೋರಾಟ ಮುಂದುವರೆಯಲಿದೆ, ಕರ್ನಾಟಕದಲ್ಲಿ ಸರ್ಕಾರ ಸತ್ತುಹೋಗಿದೆ ಎಂದು ಟೀಕಿಸಿದರು.
ಹತ್ತಿ, ತೊಗರಿ, ಉದ್ದು ಬೆಳೆ ನಾಶ
ಅನೇಕ ಪ್ರದೇಶಗಳು ಅತಿವೃಷ್ಟಿಗೆ ತುತ್ತಾಗಿ ಬೆಳೆ ನಾಶವಾಗಿವೆ, ಹತ್ತಿ, ತೊಗರಿ, ಉದ್ದು ಬೆಳೆ ನಾಶವಾಗಿದೆ, ಸರ್ಕಾರ ರೈತರ ಸಮಸ್ಯೆಗಳನ್ನು ಪರಿಹರಿಸಬೇಕಿತ್ತು, ಆದರೆ, ರೈತ ವಿರೋಧಿ ನೀತಿ ಅನುಸರಿಸುತ್ತಿದೆ.
ಸಿದ್ದರಾಮಯ್ಯ ಸರ್ಕಾರ ರೈತರ ಸಮಸ್ಯೆಗಳನ್ನು ಪರಿಹರಿಸಬೇಕು, ಇಲ್ಲವೇ ಅಧಿಕಾರ ಬಿಟ್ಟು ತೊಲಗಬೇಕು ಎಂದು ಒತ್ತಾಯಿಸಿದರು.

