ಬೆಳಗಾವಿ:ಅಧಿಕಾರ ಹಂಚಿಕೆ ಕುರಿತಂತೆ ಸ್ಪಷ್ಟನೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಪಕ್ಷದ ವರಿಷ್ಠರೇ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣ ಕಿಡಿಕಾರಿದೆ.
ಸಿದ್ದರಾಮಯ್ಯ ಐದು ವರ್ಷ ಆಡಳಿತಾವಧಿ ಪೂರೈಸುತ್ತಾರೆ ಎಂಬುದಾಗಿ ಯತೀಂದ್ರ ಸೋಮವಾರ ನೀಡಿದ ಹೇಳಿಕೆ ಉಭಯ ಬಣಗಳಲ್ಲಿ ಜ್ವಾಲೆಯಾಗಿ ಉರಿಯುತ್ತಿದೆ.
ಒಟ್ಟಾಗಿ ಕುಳಿತು ಪ್ರದರ್ಶನ
ಯತೀಂದ್ರ ಹೇಳಿಕೆ ನಂತರ ಶಿವಕುಮಾರ್ ಬಣದ ಶಾಸಕರು ವಿಧಾನಸಭೆ ಒಳಗೆ ಮತ್ತು ಹೊರಗೆ ಒಟ್ಟಾಗಿ ಕುಳಿತು ಪ್ರದರ್ಶನಕ್ಕೆ ಮುಂದಾದರು.
ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್ ಬಣದ ಇಕ್ಬಾಲ್ ಹುಸೇನ್, ಮುಖ್ಯಮಂತ್ರಿ ಪುತ್ರ ಎಂಬುದನ್ನೂ ಲೆಕ್ಕಿಸದೆ ಇಂದೂ ಯತೀಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.
ವರಿಷ್ಠರ ಸ್ಥಾನವನ್ನು ಯತೀಂದ್ರ ತುಂಬುವುದು ಬೇಡ, ಇಂತಹ ಹೇಳಿಕೆಗಳಿಂದ ಹೈಕಮಾಂಡ್ ದಾರಿ ತಪ್ಪಿಸಲು ಹೊರಟಿದ್ದಾರೆ.
ವರಿಷ್ಠರ ಕೆಲಸ ವರಿಷ್ಠರೇ ಮಾಡಲಿ
ವರಿಷ್ಠರ ಕೆಲಸ ವರಿಷ್ಠರೇ ಮಾಡಲಿ, ಗೊಂದಲ ಬಗೆಹರಿಸಲು ನಮ್ಮ ದೆಹಲಿ ನಾಯಕರು ಗಟ್ಟಿ ಇದ್ದಾರೆ, ಯತೀಂದ್ರ ಅವರಿಗೆ ಏನು ಕೆಲಸ ಇದೆಯೋ ಅದನ್ನು ಮಾಡಿಕೊಂಡು ಹೋಗಲಿ ಎಂದು ಇಕ್ಬಾಲ್ ಕಿಡಿಕಾರಿದ್ದಾರೆ.
ಶಿವಕುಮಾರ್ ಬಣ ಹಾಗೂ ಅವರ ಹೇಳಿಕೆಗಳ ಬಗ್ಗೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಯತೀಂದ್ರ, ಇಂದೂ ಕೂಡ ತಮ್ಮ ಹೇಳಿಕೆಗೆ ಅಚಲ ಎಂದಿದ್ದಾರೆ.
ನಿನ್ನೆ ನಾನು ಏನು ಹೇಳಬೇಕೋ ಅದನ್ನು ಹೇಳಿದ್ದೇನೆ, ಮತ್ತೆ ನಾನು ಅದರ ಬಗ್ಗೆ ಚರ್ಚೆ ಮಾಡುವುದಿಲ್ಲ, ನೀವು ಮಾಧ್ಯಮದವರೂ ಸಹಾ ಅದನ್ನು ಕೆಣಕಬೇಡಿ ಎಂದರು.
ವರಿಷ್ಠರ ಆದೇಶದವರೆಗೂ ಮುಖ್ಯಮಂತ್ರಿ
ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ವರಿಷ್ಠರ ಆದೇಶದವರೆಗೂ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುತ್ತಾರೆ.
ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ, ಉಪಹಾರ ಸಭೆ ಬಳಿಕ ಎಲ್ಲವೂ ತಿಳಿಯಾಗಿದೆ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ, ಯತೀಂದ್ರ ಹೇಳಿಕೆ ವೈಯಕ್ತಿಕವಾದುದು ಎಂದರು.
ಯತೀಂದ್ರ ಹೇಳಿಕೆಯನ್ನು ಸಚಿವ ಕೆ.ಜೆ.ಜಾರ್ಜ್ ಸಮರ್ಥಿಸಿಕೊಂಡರೆ, ಜಮೀರ್ ಅಹಮದ್ ಖಾನ್ ಮಾತ್ರ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ, ’ಸಿಎಂ ಕುರ್ಚಿ ಖಾಲಿ ಇಲ್ಲ’ ಎಂದಿದ್ದಾರೆ.

