ಬೆಳಗಾವಿ:ರಾಜ್ಯದಲ್ಲಿ 37.48 ಲಕ್ಷ ಕುಟುಂಬಗಳಿಗೆ ಸೂರು ಇಲ್ಲ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ವಿಧಾನ ಪರಿಷತ್ನಲ್ಲಿ ಇಂದು ತಿಳಿಸಿದ್ದಾರೆ.
ಪ್ರಶ್ನೋತ್ತರ ವೇಳೆ ಕೆ.ಶಿವಕುಮಾರ್, ಪ್ರದೀಪ್ ಶೆಟ್ಟರ್ ಮತ್ತಿತರರ ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ಕೇಂದ್ರದ ಮಾರ್ಗಸೂಚಿಯಂತೆ 2018ರಲ್ಲಿ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ವಸತಿ ನಿವೇಶನರಹಿತರ ಸಮೀಕ್ಷೆ ಹಾಗೂ 2017ರಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಗರ ಪ್ರದೇಶದಲ್ಲಿ ನಡೆಸಿರುವ ಸಮೀಕ್ಷೆಗಳ ಆಧಾರದಿಂದ ವಸತಿರಹಿತ ಕುಟುಂಬಗಳ ಮಾಹಿತಿ ಲಭ್ಯವಾಗಿದೆ ಎಂದರು.
ಸಮೀಕ್ಷೆ ಆಧಾರ
ಈ ಸಮೀಕ್ಷೆ ಆಧಾರವಾಗಿ ಇಟ್ಟುಕೊಂಡು ಸೂರಿಲ್ಲದವರಿಗೆ ಸೂರು ನೀಡಲು ವಿವಿಧ ಯೋಜನೆಗಳಡಿ ರಿಯಾಯಿತಿ ದರದಲ್ಲಿ ನಿವೇಶನ ಇಲ್ಲವೇ, ಮನೆಗಳನ್ನು ಹಂಚಲಾಗುತ್ತಿದೆ.
ಕಳೆದ ಸಾಲಿನಲ್ಲಿ 7.38 ಲಕ್ಷ ಮನೆಗಳ ನಿರ್ಮಾಣ ಗುರಿ ಇದ್ದು, ಇವುಗಳಲ್ಲಿ 3.27 ಲಕ್ಷ ಅನುಮೋದನೆಗೊಂಡಿದೆ, ಉಳಿದ 4 ಲಕ್ಷಕ್ಕೂ ಹೆಚ್ಚು ಮನೆಗಳು ಅನುಮೋದನೆಗೆ ಬಾಕಿ ಇವೆ ಎಂದರು.
ರಾಜ್ಯದಲ್ಲಿ ಮನೆ ನಿರ್ಮಾಣಕ್ಕೆ ನೀಡುತ್ತಿರುವ ಅನುದಾನ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 4 ಲಕ್ಷ ರೂ. ಮತ್ತು ಸಾಮಾನ್ಯ ವರ್ಗದವರಿಗೆ 3.5 ಲಕ್ಷ ರೂ.ಗೆ ಹೆಚ್ಚಳ ಮಾಡುವ ಚಿಂತನೆ ಸರ್ಕಾರದ ಮುಂದಿದೆ.
ಸಹಾಯಧನ ಹೆಚ್ಚಳ
ಬಸವ ವಸತಿ ಯೋಜನೆಗೆ ನೀಡುತ್ತಿರುವ ಸಹಾಯಧನ ಸಾಲುತ್ತಿಲ್ಲ ಎಂಬ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಕನಿಷ್ಠ 3 ರಿಂದ 4 ಲಕ್ಷ ರೂ.ವರೆಗೆ ಸಹಾಯಧನ ನೀಡಲು ಸರ್ಕಾರ ಸಿದ್ಧತೆ ಮಾಡಿದೆ.
ಗ್ರಾಮೀಣ ಭಾಗದಲ್ಲಿ ಮನೆ ನಿರ್ಮಾಣಕ್ಕೆ ಬೇಕಾಗುವ ಕಚ್ಚಾಸಾಮಗ್ರಿಗಳ ಬೆಲೆ ದುಬಾರಿ ಆಗಿದ್ದು, ಅದರಿಂದ ವಿವಿಧ ವಸತಿ ಯೋಜನೆಗಳಡಿ ಫಲಾನುಭವಿಗಳಿಗೆ ನೀಡಲಾಗುತ್ತಿರುವ ಸಹಾಯಧನ ಹೆಚ್ಚಿಸುವ ಪ್ರಸ್ತಾವನೆಯೂ ಪರಿಶೀಲನೆಯಲ್ಲಿದೆ ಎಂದರು.
ಬಜೆಟ್ನಲ್ಲಿ ಅನುಮೋದನೆ ನಿರೀಕ್ಷೆ
ಬಹುತೇಕ ಮುಂದಿನ ಮುಂಗಡಪತ್ರದಲ್ಲಿ ಈ ಯೋಜನೆಗಳಿಗೆ ಅನುಮೋದನೆ ದೊರೆಯುವ ನಿರೀಕ್ಷೆಯಲ್ಲಿದ್ದೇವೆ ಎಂದ ಸಚಿವರು, ಪ್ರಸ್ತುತ ಕೇಂದ್ರದ ವಸತಿ ಯೋಜನೆಗಳನ್ನು ಹೊರತುಪಡಿಸಿ, ಉಳಿದ ಯಾವುದೇ ವಸತಿ ಯೋಜನೆಗಳಡಿ ಅನುದಾನ ಬಿಡುಗಡೆ ಮಾಡಲು ಬಾಕಿ ಇರುವುದಿಲ್ಲ ಎಂದರು.

