ಬೆಳಗಾವಿ:ಡ್ರಗ್ಸ್ ದಂಧೆಯಲ್ಲಿ ತೊಡಗಿರುವ ವಿದೇಶಿ ಪ್ರಜೆಗಳಿಗೆ ಬಾಡಿಗೆ ನೀಡಿದರೆ ಅಂತಹ ಮನೆಗಳನ್ನು ಧ್ವಂಸಗೊಳಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧಾನ ಪರಿಷತ್ನಲ್ಲಿ ಇಂದು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರ ಡ್ರಗ್ಸ್ ದಂಧೆಗೆ ಎಷ್ಟೇ ಕಡಿವಾಣ ಹಾಕಿದರೂ ಕೆಲವು ಸ್ಥಳೀಯರ ಜೊತೆ ಕೈಜೋಡಿಸಿ ವಿದೇಶಿ ಪ್ರಜೆಗಳು ನಿರಂತರವಾಗಿ ಈ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಡ್ರಗ್ಸ್ ದಂಧೆ
ಇದನ್ನು ಮಟ್ಟ ಹಾಕಲು ಬಾಡಿಗೆ ನೀಡಿದ ಮನೆಗಳನ್ನೇ ಧ್ವಂಸ ಮಾಡಿದರೆ ಡ್ರಗ್ಸ್ ದಂಧೆಯಲ್ಲಿ ತೊಡಗಿರುವವರಿಗೆ ಬಾಡಿಗೆ ನೀಡಲು ಹಿಂಜರಿಯುತ್ತಾರೆ.
ಇದರಿಂದ ಅವರು ದೀರ್ಘಕಾಲ ರಾಜ್ಯದಲ್ಲಿ ಉಳಿಯಲು ಸಾಧ್ಯ ಆಗುವುದಿಲ್ಲ ಎಂಬ ಉದ್ದೇಶದಿಂದ ಈ ಕಠಿಣ ತೀರ್ಮಾನ ಕೈಗೊಳ್ಳಬೇಕಿದೆ ಎಂದರು.
ಪ್ರಶ್ನೋತ್ತರ ವೇಳೆ ಅಬ್ದುಲ್ ಜಬ್ಬಾರ್ ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ವಿದ್ಯಾಭ್ಯಾಸ, ಪ್ರವಾಸ ನೆಪದಲ್ಲಿ ಬರುವ ವಿದೇಶಿ ಪ್ರಜೆಗಳು ರಾಜ್ಯದಲ್ಲಿ ಡ್ರಗ್ಸ್ ದಂಧೆ ನಡೆಸುತ್ತಾರೆ, ಇಂತಹವರನ್ನು ಬಂಧಿಸಿದರೆ ಕಾನೂನಾತ್ಮಕವಾಗಿ ದಂಧೆಕೋರರಿಗೇ ಅನುಕೂಲವಾಗುತ್ತದೆ.
ಮಾಲೀಕರ ವಿರುದ್ಧ ಪ್ರಕರಣ
ಡ್ರಗ್ಸ್ ದಂಧೆಯಲ್ಲಿ ತೊಡಗಿರುವ ವಿದೇಶಿ ಪ್ರಜೆಗಳಿಗೆ ಮನೆಗಳನ್ನು ಬಾಡಿಗೆ ನೀಡುವ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.
ಮುಂದೆ ವಿದೇಶಿ ಪ್ರಜೆಗಳಿಗೆ ಬಾಡಿಗೆಗೆ ನೀಡಿರುವ ಮನೆಗಳನ್ನು ಧ್ವಂಸಗೊಳಿಸಲಾಗುವುದು, ಇಂತಹ ಕಠಿಣ ಕ್ರಮಗಳಿಂದ ಡ್ರಗ್ಸ್ ದಂಧೆ ಸಂಪೂರ್ಣ ಹತ್ತಿಕ್ಕಲಾಗುವುದು ಎಂದರು.
ಕಳೆದ ಎರಡೂವರೆ ವರ್ಷಗಳಿಂದ ಮಾದಕವಸ್ತು ಮುಕ್ತ ರಾಜ್ಯವನ್ನಾಗಿಸಲು ಪೊಲೀಸ್ ಇಲಾಖೆ ಸಾರಿರುವ ಸಮರವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು.
ಸಾವಿರಾರು ಕೆ.ಜಿ. ಡ್ರಗ್ಸ್ ವಶ
ರಾಜ್ಯಾದ್ಯಂತ ಕೋಟ್ಯಂತರ ಮೌಲ್ಯದ ಸಾವಿರಾರು ಕೆ.ಜಿ. ಡ್ರಗ್ಸ್ ವಶಪಡಿಸಿಕೊಂಡು ನಾಶಪಡಿಸಲಾಗಿದೆ, ಬೆಂಗಳೂರಿನಲ್ಲಿ ಒಂದೇ ದಿನ ಒಂದು ಸಾವಿರ ಶಾಲೆಗಳಿಗೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಡ್ರಗ್ಸ್ ಬಗ್ಗೆ ಪರಿಶೀಲನೆ ನಡೆಸಿ ಜಾಗೃತಿ ಮೂಡಿಸಿದ್ದಾರೆ.
ಎಡಿಜಿಪಿ ನೇತೃತ್ವದಲ್ಲಿ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ ಸ್ಥಾಪಿಸಿ ಡ್ರಗ್ಸ್ ವಿರುದ್ಧ ನಿರಂತರ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ.
ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ ಅಧಿಕಾರಿಗಳು ರಾಜ್ಯಾದ್ಯಂತ ಮಾದಕವಸ್ತು ಮಾರಾಟ, ಸೇವನೆ, ಸರಬರಾಜು ವಿರುದ್ಧ ಹದ್ದಿನ ಕಣ್ಣಿಟ್ಟಿದೆ ಎಂದರು.

