ನವದೆಹಲಿ:ಜರ್ಮನಿ ಪ್ರವಾಸದಿಂದ ಹಿಂತಿರುಗಿದ ನಂತರ ಕರ್ನಾಟಕದಲ್ಲಿ ಅಧಿಕಾರ ಹಸ್ತಾಂತರ ಕುರಿತಂತೆ ತೀರ್ಮಾನ ಕೈಗೊಳ್ಳುವುದಾಗಿ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ತಿಳಿಸಿದ್ದಾರೆ.
ದೆಹಲಿಯಲ್ಲಿ ನಡೆದ ಮತಗಳ್ಳತನ ವಿರೋಧಿ ರ‍್ಯಾಲಿ ಮುಗಿಸಿ ಭಾನುವಾರ ರಾತ್ರಿಯೇ ಜರ್ಮನಿ ಪ್ರವಾಸಕ್ಕೆ ತೆರಳಿದ ರಾಹುಲ್ ಡಿಸೆಂಬರ್ 20ಕ್ಕೆ ಹಿಂತಿರುಗಲಿದ್ದಾರೆ.
ಮುಖಂಡರ ಸಮ್ಮುಖದಲ್ಲಿ
ಪ್ರವಾಸದಿಂದ ಬರುತ್ತಿದ್ದಂತೆ ತಮ್ಮನ್ನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆಸಿ, ಪಕ್ಷದ ಮುಖಂಡರ ಸಮ್ಮುಖದಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಮತಗಳ್ಳತನ ವಿರೋಧಿ ರ‍್ಯಾಲಿಗೂ ಮುನ್ನ ಇಂದಿರಾ ಭವನದಲ್ಲಿ ನಡೆದ ಔತಣಕೂಟದ ವೇಳೆಯೇ ಶಿವಕುಮಾರ್ ಅವರಿಗೆ ರಾಹುಲ್ ಈ ವಿಷಯ ತಿಳಿಸಿದ್ದಾರೆ.
ಇದಾದ ನಂತರ ಶಿವಕುಮಾರ್ ಪಕ್ಷದ ರಾಜ್ಯ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಜೊತೆಗೂಡಿ ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಖರ್ಗೆ ನಿವಾಸದಲ್ಲಿ ಉಪಹಾರ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಇಂದು ಬೆಳಗ್ಗೆ ತೆರಳಿ ಅಲ್ಲಿಯೇ ಉಪಹಾರ ಸೇವಿಸಿ, ಅಧಿಕಾರ ಹಸ್ತಾಂತರ ಕುರಿತಂತೆ ಸಮಾಲೋಚಿಸಿದ್ದಾರೆ.
ನಂತರ ಖರ್ಗೆ ಜೊತೆಗೂಡಿಯೇ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಧಾವಿಸಿ, ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್‌ನಲ್ಲಿ ದಾವಣಗೆರೆಗೆ ತೆರಳಿ, ಹಿಂತಿರುಗಿದರು.
ದೆಹಲಿಯಿಂದ ವಿಮಾನದಲ್ಲಿ ಹಿಂತಿರುಗುವ ಸಂದರ್ಭದಲ್ಲೇ ಖರ್ಗೆ ಅವರು, ರಾಹುಲ್ ವಿದೇಶದಿಂದ ಬರುತ್ತಿದ್ದಂತೆ ಅಧಿಕಾರ ಹಸ್ತಾಂತರದ ಬಗ್ಗೆ ನಿಲುವು ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ಕಾಲಾವಕಾಶ ಕೋರಿಕೆ
ಈ ಮಧ್ಯೆ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ನೋಟಿಸ್‌ಗೆ ಉತ್ತರ ನೀಡಲು ಕಾಲಾವಕಾಶ ಕೋರುವುದಾಗಿ ತಿಳಿಸಿದರು.
ಇಂದು ದೆಹಲಿ ಪೊಲೀಸ್ ನೋಟಿಸ್‌ಗೆ ಉತ್ತರ ನೀಡಲು ನಿರ್ಧರಿಸಿದ್ದೆ, ಆದರೆ, ಶಾಮನೂರು ಶಿವಶಂಕರಪ್ಪ ನಿಧನದ ಹಿನ್ನೆಲೆಯಲ್ಲಿ ವಿಶೇಷ ವಿಮಾನದಲ್ಲಿ ದಾವಣಗೆರೆಗೆ ತೆರಳುತ್ತಿದ್ದು, ಕರ್ನಾಟಕ ವಿಧಾನಮಂಡಲ ಅಧಿವೇಶನ ಬಳಿಕ ಉತ್ತರ ನೀಡಲು ಕಾಲಾವಕಾಶ ಕೋರುವುದಾಗಿ ತಿಳಿಸಿದರು.
ಪೋಲಿಸ್ ನೋಟಿಸ್‌ಗೆ ನೀಡುವ ನನ್ನ ಉತ್ತರದ ಪ್ರತಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತೇನೆ, ಏಕೆಂದರೆ, ಅವರು ಎಫ್‌ಐಆರ್ ಪ್ರತಿ ಲಗತ್ತಿಸಿಲ್ಲ, ಜಾರಿ ನಿರ್ದೇಶನಾಲಯ (ಇ.ಡಿ.)ಕ್ಕೆ ಈಗಾಗಲೇ ಉತ್ತರಿಸಿದ್ದೇವೆ, ಎಫ್‌ಐಆರ್‌ನಲ್ಲಿ ಏನಿದೆ ಓದಿಲ್ಲ, ನೋಟಿಸ್ ಮಾತ್ರ ನೀಡಿದ್ದಾರೆ, ಎಫ್‌ಐಅರ್ ಪ್ರತಿ ನೀಡುವಂತೆ ಕೋರುತ್ತೇನೆ ಎಂದರು.
ಇಂದಿರಾ ಭವನದಲ್ಲಿ ಭೇಟಿ
ಕೆ.ಸಿ.ವೇಣುಗೋಪಾಲ್ ಹಾಗೂ ಸುರ್ಜೆವಾಲ ಭೇಟಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ದೆಹಲಿಗೆ ಬಂದಾಗ ಸುರ್ಜೆವಾಲ, ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್ ಸೇರಿದಂತೆ ಎಲ್ಲರನ್ನೂ ಭೇಟಿ ಮಾಡಬೇಕು, ನಿನ್ನೆ ಇಂದಿರಾ ಭವನದಲ್ಲಿ ನಡೆದ ಭೋಜನಕೂಟ ವೇಳೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರನ್ನೂ ಭೇಟಿ ಮಾಡಿದ್ದೆ ಎಂದರು.
ಮತ್ತೆ ರಾಹುಲ್ ಗಾಂಧಿ ಭೇಟಿ ಮಾಡುವುದು, ನಮ್ಮ ಅವರ ಮಧ್ಯೆ ಮಾತುಕತೆ ಇದ್ದೇ ಇರುತ್ತದೆ, ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದರು.

