ನವದೆಹಲಿ:2047ಕ್ಕೆ ವಿಕಸಿತ ಭಾರತ ಸಾಧನೆ ಸಂಕಲ್ಪ ತೊಟ್ಟಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪರಿವರ್ತನಾತ್ಮಕ ದೃಷ್ಟಿಕೋನದಿಂದ ನಾವು ಪ್ರೇರಣೆ ಪಡೆದಿದ್ದು, 2070ರ ವೇಳೆಗೆ ಉಕ್ಕು ವಲಯದಲ್ಲಿ ಇಂಗಾಲ ಹೊರಸೂಸುವಿಕೆ ಪ್ರಮಾಣ ಶೂನ್ಯಕ್ಕೆ ತರುವ ಬದ್ಧತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದೇವೆ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರ ದೃಢ ನಾಯಕತ್ವದಲ್ಲಿ ಪ್ರಾಮಾಣಿಕತೆ, ಜವಾಬ್ದಾರಿ ಮತ್ತು ಅಚಲ ಸಂಕಲ್ಪದೊಂದಿಗೆ ರಾಷ್ಟ್ರೀಯ ಧ್ಯೇಯ ಮುನ್ನಡೆಸಲು ಸಮರ್ಪಿತನಾಗಿದ್ದೇನೆ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಆಯಸ್ಕಾಂತೀಯ ಖನಿಜ ಬಳಕೆ
ಪ್ರಧಾನಿ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ವಿಶಾಖಪಟ್ಟಣದ ರಾಷ್ಟ್ರೀಯ ಉಕ್ಕು ಕಾರ್ಖಾನೆ ಪುನರುಜ್ಜೀವಗೊಳಿಸುವಲ್ಲಿ ನಿರ್ಣಾಯಕ ಕ್ರಮ ತೆಗೆದುಕೊಳ್ಳಲಾಗಿದೆ, ಬೊಕಾರೊ ಮತ್ತು ರೂರ್ಕೆಲಾ ಉಕ್ಕು ಸ್ಥಾವರಗಳಲ್ಲಿ ವಿಸ್ತರಣೆ ಮತ್ತು ಆಧುನೀಕರಣ ಪ್ರಾರಂಭಿಸಲಾಗಿದೆ, ಆತ್ಮನಿರ್ಭರ ಭಾರತ ಸಾಕಾರದ ಭಾಗವಾಗಿ ಭೂಮಿಯೊಳಗಿನ ಅಪರೂಪದ ಶಾಶ್ವತ ಆಯಸ್ಕಾಂತೀಯ ಖನಿಜಗಳ ಬಳಕೆ ಯೋಜನೆ ಜಾರಿಗೆ ತರಲಾಗಿದ್ದು, ಇದು ಮಹತ್ವಾಕಾಂಕ್ಷೆ ಕಾರ್ಯಕ್ರಮವಾಗಿದೆ.
ಇಂದು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಶುಭಾಶಯ ಕೋರಿ ನಿರಂತರ ಮಾರ್ಗದರ್ಶನ ಮಾಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಹೃದಯಪೂರ್ವಕ ಧನ್ಯವಾದ ಅರ್ಪಿಸುವುದಾಗಿ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಆಶೀರ್ವಾದ
ಸಂಸತ್ ಭವನದಲ್ಲಿನ ಪ್ರಧಾನಿ ಮೋದಿ ಅವರ ಕಚೇರಿಗೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡಿದ್ದು, ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವಾಲಯ ವ್ಯಾಪ್ತಿಯಲ್ಲಿನ ಗುರುತರ ಅಭಿವೃದ್ಧಿ ಹಾಗೂ ಪ್ರಗತಿ ಕುರಿತು ವಿವರಿಸಿದ್ದಾಗಿ ತಿಳಿಸಿದ್ದಾರೆ.
ಸಚಿವಾಲಯದ ಪ್ರಯತ್ನ, ಕಾರ್ಯಚಟುವಟಿಕೆ ಮತ್ತು ಫಲಿತಾಂಶಗಳ ಬಗ್ಗೆ ಪ್ರಧಾನಮಂತ್ರಿ ತೃಪ್ತಿ ವ್ಯಕ್ತಪಡಿಸಿರುವುದು ನನಗೆ ಮತ್ತು ನನ್ನ ಇಡೀ ತಂಡಕ್ಕೆ ಅಪಾರ ಪ್ರೋತ್ಸಾಹದ ಶಕ್ತಿಯಾಗಿದೆ ಎಂದಿದ್ದಾರೆ.

