ಬೆಳಗಾವಿ:ತಾನು ಇನ್ನೆಷ್ಟು ದಿನ ಮುಖ್ಯಮಂತ್ರಿ ಆಗಿರುತ್ತೇನೋ ಎಂಬ ಗೊಂದಲ ಸಿದ್ದರಾಮಯ್ಯ ಅವರನ್ನು ಕಾಡುತ್ತಿದ್ದು, ಭ್ರಷ್ಟಾಚಾರ ಬಿಟ್ಟರೆ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳೇ ಆಗುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದಿಲ್ಲಿ ಟೀಕಿಸಿದ್ದಾರೆ.
ನಾಯಕತ್ವ ಸಮಸ್ಯೆಗೆ ಕಳೆದೊಂದು ವರ್ಷದಲ್ಲಿ ಪರಿಹಾರ ಕಂಡುಕೊಳ್ಳಲು ಆಡಳಿತ ಪಕ್ಷಕ್ಕೆ ಆಗುತ್ತಿಲ್ಲ, ಒಳಜಗಳ, ಡಿನ್ನರ್ ಮೀಟಿಂಗ್ ಬೆಳಗಾವಿಯಲ್ಲೂ ಮುಂದುವರೆದಿದೆ, ಮುಖ್ಯಮಂತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಒಳಜಗಳದ ಪರಿಣಾಮ ಆಡಳಿತ ಹಳಿ ತಪ್ಪಿದೆ ಎಂದರು.
ಒಂದಾದ ಮೇಲೊಂದು ಹಗರಣ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದಾಗಿನಿಂದ ಒಂದಾದ ಮೇಲೊಂದು ಹಗರಣ ಬೆಳಕಿಗೆ ಬರುತ್ತಿದೆ, ಭ್ರಷ್ಟಾಚಾರದ ಹಣ ಹೈಕಮಾಂಡ್‌ಗೆ ಸಂದಾಯ ಮಾಡುವುದು ಮುಂದುವರೆದಿದೆ, ಇದನ್ನು ಹಿಂದಿನಿಂದಲೂ ಹೇಳುತ್ತಿದ್ದೇನೆ, ವಾಲ್ಮೀಕಿ ಅಭಿವೃದ್ಧಿ ನಿಗಮದ ನೂರಾರು ಕೋಟಿ ರೂ. ಪೋಲಾಗಿದೆ ಎಂದರು.
ಗುತ್ತಿಗೆದಾರರಿಂದ ವಸೂಲಿ ಮೂಲಕ ಭ್ರಷ್ಟಾಚಾರ ಎಸಗಿ, ಖಜಾನೆ ಖಾಲಿ ಮಾಡಿ ಕಾಂಗ್ರೆಸ್ ಹೈಕಮಾಂಡ್ ತೃಪ್ತಿಪಡಿಸಿ ಅಧಿಕಾರದಲ್ಲಿ ಮುಂದುವರೆಯುವ ಆಟವೊಂದೇ ಸರ್ಕಾರದಲ್ಲಿ ನಡೆಯುತ್ತಿದೆ, ನೀರಾವರಿ ಯೋಜನೆಗಳ ಪ್ರಗತಿ ಶೇ.೧೦ರಷ್ಟೂ ಆಗಿಲ್ಲ.
ಕಂದಾಯ ಸಚಿವರ ವಿರುದ್ಧದ ಆರೋಪ ಗಂಭೀರ ಸ್ವರೂಪದ್ದಾಗಿದ್ದು, ದಾಖಲಾತಿ ಪರಿಶೀಲಿಸದೇ ‘ನಮ್ಮ ತಂದೆ ಕಾಲದ್ದು, ನಮ್ಮ ತಾತನ ಕಾಲದ್ದು’ ಎಂಬುದಾಗಿ ಹೇಳಿಕೊಂಡು ಅಕ್ರಮ ನಡೆಸಲು ಕಾನೂನಿನಲ್ಲಿ ಅವಕಾಶ ಇದೆಯೇ.
ಸಂಬಳ ಕೊಡಲೂ ಆಗುತ್ತಿಲ್ಲ
ಗೃಹಲಕ್ಷ್ಮೀ ಯೋಜನೆ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸದನಕ್ಕೆ ತಪ್ಪು ಮಾಹಿತಿ ನೀಡುವ ಮೂಲಕ ಅಪಹಾಸ್ಯಕ್ಕೆ ಒಳಗಾಗಿದ್ದಾರೆ, ಶಕ್ತಿ ಯೋಜನೆ ಗ್ಯಾರಂಟಿ ಪರಿಣಾಮ ಸಾರಿಗೆ ಇಲಾಖೆ ಸಂಕಷ್ಟಕ್ಕೆ ಸಿಲುಕಿದೆ, ಸರಿಯಾದ ಸಮಯಕ್ಕೆ ಸಂಬಳ ಕೊಡಲೂ ಆಗುತ್ತಿಲ್ಲ.
ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಹಳಿ ತಪ್ಪಿದ್ದು ಬರುವ ದಿನಗಳಲ್ಲಿ ಇವರ ಬಂಡವಾಳ ಇನ್ನಷ್ಟು ಬಯಲಾಗಲಿದೆ ಎಂದರು.

