ಮೈಸೂರು:ಅಧಿಕಾರ ಹಸ್ತಾಂತರ ಕುರಿತಂತೆ ನಾವೇ ತೀರ್ಮಾನ ಮಾಡುತ್ತೇವೆ ಎಂಬುದಾಗಿ ಪಕ್ಷದ ವರಿಷ್ಠರು ಸಂದೇಶ ರವಾನೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಗೊಂದಲ ನಿವಾರಿಸುವ ಸಲುವಾಗಿ ವರಿಷ್ಠರನ್ನು ಸಂಪರ್ಕಿಸಿ ಚರ್ಚಿಸಿದಾಗ ನನಗೆ ಈ ಸಂದೇಶ ನೀಡಿದ್ದಾರೆ ಎಂದರು.
ಕಿಡಿಕಾರಿದ ಮುಖ್ಯಮಂತ್ರಿ
ವಿಧಾನಸಭೆಯಲ್ಲಿ ಹೇಳಿಕೆ ನೀಡಿದ ನಂತರವೂ ಪದೇ ಪದೇ ಅದೇ ಪ್ರಶ್ನೆಗಳನ್ನು ಕೇಳುತ್ತಿದ್ದೀರಲ್ಲಾ ಎಂದು ಮಾಧ್ಯಮದ ಮೇಲೆ ಕಿಡಿಕಾರಿದ ಮುಖ್ಯಮಂತ್ರಿ, ಹೈಕಮಾಂಡ್ ತೀರ್ಮಾನವೇ ಅಂತಿಮ.
ಅವರೇ ತೀರ್ಮಾನ ಮಾಡುತ್ತೇವೆ ಎಂದ ಮೇಲೆ ಇನ್ನು ಯಾವ ವಿಚಾರವೂ ಇರುವುದಿಲ್ಲ, ಅವರ ನಿರ್ಧಾರದಂತೆ ನಾವು ನಡೆದುಕೊಳ್ಳುತ್ತೇವೆ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕಿಂತ ಯಾರು ದೊಡ್ಡವರಲ್ಲ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಒಪ್ಪಬೇಕಾದ ವಿಚಾರ, ಪಕ್ಷಕ್ಕಿಂತ ದೊಡ್ಡವರಾಗಲು ಸಾಧ್ಯವೇ ಇಲ್ಲ ಎಂದರು.
ರಾಹುಲ್ ಗಾಂಧಿ ತೀರ್ಮಾನಿಸಬೇಕು
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ವಿಚಾರ ಅಧಿನಾಯಕ ರಾಹುಲ್ ಗಾಂಧಿ ತೀರ್ಮಾನಿಸಬೇಕು, ಅವರು ಏನು ತೀರ್ಮಾನಿಸುತ್ತಾರೋ ಅದಕ್ಕೆ ನಾವು ಬದ್ಧ.
ನಾಯಕತ್ವ ಬದಲಾವಣೆ ಮಾಧ್ಯಮಗಳಲ್ಲಷ್ಟೇ ಚರ್ಚೆಯಾಗುತ್ತಿದೆ, ವಿಧಾನಸಭೆಯಲ್ಲಿ ಈ ಬಗ್ಗೆ ಹೇಳಿದ ಮೇಲೂ ಇಷ್ಟೊಂದು ಪ್ರಶ್ನೆ ಕೇಳಬೇಕಾದ ಅಗತ್ಯ ಏನಿದೆ, ಪುನಃ ಚರ್ಚೆ ಮಾಡುವ ಅಗತ್ಯವಿಲ್ಲ ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿದ್ದು ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿದೆ.
ಯಾರು ಎನ್ನುವುದು ಮುಖ್ಯವಲ್ಲ
ಕೆ.ಎನ್.ರಾಜಣ್ಣ ಅವರನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಮಾಡಿದ್ದು ಯಾರು ಎನ್ನುವುದು ಮುಖ್ಯವಲ್ಲ, ಅಧಿಕಾರದಲ್ಲಿದ್ದಾಗ ನಾನು ಮಾಡಿದೆ, ಅವರು ಮಾಡಿದರು ಎಂಬ ಪ್ರಶ್ನೆಯೇ ಬರುವುದಿಲ್ಲ, ಎಸ್.ಎಂ.ಕೃಷ್ಣ ನೇತೃತ್ವದ ಸರ್ಕಾರದ ವೇಳೆ ಮಾಡಲಾಗಿತ್ತು ಎಂದರು.
ರಾಜ್ಯ ಮುಂಗಡಪತ್ರಕ್ಕೆ ತಾಯರಿ ನಡೆಸುವಾಗ ಮಾಧ್ಯಮಗಳಿಗೂ ತಿಳಿಸುವೆ ಎಂದರು.
ಪ್ರಚೋದನಕಾರಿ ಭಾಷಣ ತಡೆ ಮಸೂದೆಯನ್ನು ಇಂತಹ ಭಾಷಣ ಮಾಡುವವರು ವಿರೋಧಿಸುತ್ತಾರೆ, ಪ್ರಚೋದನಾಕಾರಿ ಭಾಷಣ ಮಾಡದೆ ಸುಮ್ಮನೆ ಪ್ರಕರಣ ದಾಖಲಿಸುವುದಿಲ್ಲ, ಬಿಜೆಪಿಯವರು ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ಏಕೆ ನೋಡಿಕೊಳ್ಳುತ್ತಾರೆ.
ದ್ವೇಷ ಭಾಷಣ ತಡೆ ಮಸೂದೆ
ದ್ವೇಷ ಭಾಷಣ ತಡೆ ಮಸೂದೆ ಎಲ್ಲಾ ಪಕ್ಷದವರಿಗೂ ಅನ್ವಯವಾಗುತ್ತದೆ, ಬಿಜೆಪಿ ಮಾತ್ರ ಏಕೆ ವಿರೋಧಿಸುತ್ತದೆ, ಶಾಂತಿ ಹಾಗೂ ಭಾತೃತ್ವ ಕಾಪಾಡಲು ಮಸೂದೆ ಜಾರಿ ಮಾಡಲಾಗುತ್ತಿದೆ ಎಂದರು.
ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ವರ್ಗಾವಣೆ ಆಗುವಾಗ ಲಪಟಾಯಿಸುವ ಪ್ರಶ್ನೆ ಉದ್ಭವಿಸುವುದಿಲ್ಲ, ಫೆಬ್ರವರಿ, ಮಾರ್ಚ್‌ನ ಗೃಹಲಕ್ಷ್ಮಿ ಹಣ ಬಿಡುಗಡೆಯಾಗಿಲ್ಲ, ಪರಿಶೀಲಿಸಿ ಬಿಡುಗಡೆ ಮಾಡಲಾಗುವುದು, ಕಳೆದ ೨೩ ತಿಂಗಳಿಂದ ನೀಡುತ್ತಿಲ್ಲವೇ ಎಂದರು.

