ನವದೆಹಲಿ:ದೆಹಲಿಯ ಆಲ್ ಇಂಡಿಯಾ ಇಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್) ಮಾದರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮಂಡ್ಯ ಜಿಲ್ಲೆಯಲ್ಲಿ ಆರಂಭಿಸಲು ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದ್ದಾರೆ.
ಮಂಡ್ಯ ಸಂಸದರೂ ಆಗಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕೋರಿಕೆ ಮೇರೆಗೆ ಮೋದಿ ಅವರು, ಪ್ರಧಾನಮಂತ್ರಿ ಸ್ವಾಸ್ಥ್ಯ ಯೋಜನೆಯಡಿ 311 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಅನುಮತಿ ನೀಡಿದ್ದಾರೆ.
10 ಎಕರೆ ಜಾಗಕ್ಕೆ ಮನವಿ
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ 10 ಎಕರೆ ಜಾಗ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕುಮಾರಸ್ವಾಮಿ ಪತ್ರ ಬರೆದಿದ್ದಾರೆ.
ಬಹುತೇಕ ಮಂಡ್ಯ ಮತ್ತು ಮದ್ದೂರು ನಡುವೆ ಆಸ್ಪತ್ರೆ ನಿರ್ಮಾಣ ಮಾಡಲು ಚಿಂತನೆ ನಡೆದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಮಂಡ್ಯ ವೈದ್ಯಕೀಯ ಕಾಲೇಜು ಆಸ್ಪತ್ರೆ ಆವರಣದಲ್ಲೇ ಅತ್ಯಾಧುನಿಕ ಆಸ್ಪತ್ರೆ ನಿರ್ಮಿಸಬಹುದೇ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೇಂದ್ರ ಸಚಿವರನ್ನು ಕೇಳಿದೆ.
ಆಸ್ಪತ್ರೆ ಉನ್ನತೀಕರಣ
ಮಂಡ್ಯಕ್ಕೆ ಹೊಂದಿಕೊಂಡಂತೆ 10 ಎಕರೆ ವಿಸ್ತೀರ್ಣ ಭೂಮಿ ನೀಡಿದರೆ ಮುಂದಿನ ದಿನಗಳಲ್ಲೂ ಆಸ್ಪತ್ರೆ ಉನ್ನತೀಕರಣಕ್ಕೆ ಸಹಕಾರಿಯಾಗಲಿದೆ.
ನಾವು ಕೋರಿರುವ ಸ್ಥಳದಲ್ಲಿ ಅವಕಾಶ ಮಾಡಿಕೊಟ್ಟರೆ ನೆರೆಯ ತುಮಕೂರು, ರಾಮನಗರ ಜಿಲ್ಲೆಗಳ ರೋಗಿಗಳು ಈ ಅತ್ಯಾಧುನಿಕ ಆಸ್ಪತ್ರೆ ಸೌಲಭ್ಯ ಪಡೆಯಲು ಅವಕಾಶ ಇರಲಿದೆ ಎಂದು ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ತಿಳಿಸಿದ್ದಾರೆ.
ಏಮ್ಸ್ ಮಾದರಿ ಆಸ್ಪತ್ರೆಯಲ್ಲಿ ದಿನದ 24 ಗಂಟೆ ತುರ್ತು ಚಿಕಿತ್ಸಾ ಘಟಕ, ಟ್ರಾಮಾ ಸೆಂಟರ್, ಮಾರಣಾಂತಿಕ ರೋಗಗಳಾದ ಕ್ಯಾನ್ಸರ್, ಹೃದಯಾಘಾತ ಸೇರಿದಂತೆ ಎಲ್ಲ ಬಗೆಯ ರೋಗಗಳಿಗೂ ಚಿಕಿತ್ಸೆ ಲಭ್ಯವಿರುತ್ತದೆ.
ಇದೇ ಸಂದರ್ಭದಲ್ಲಿ 1,000 ಕೋಟಿ ರೂ. ವೆಚ್ಚದಲ್ಲಿ ಮಂಡ್ಯ ಹೊರವರ್ತುಲ ರಸ್ತೆ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಲು ಕೇಂದ್ರ ಭೂಸಾರಿಗೆ ಇಲಾಖೆ ನಿರ್ಧರಿಸಿದೆ.

