ನವದೆಹಲಿ:ಅಧಿಕಾರ ಹಸ್ತಾಂತರ ಕುರಿತಂತೆ ರಾಹುಲ್ ಗಾಂಧಿ ಭೇಟಿ ಮಾಡಿ ತೊಂದರೆ ಕೊಡುವುದಿಲ್ಲ ಎಂದಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಇರುತ್ತೇನೆ ಎನ್ನುವ ಮೂಲಕ ನಾನಾ ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದ್ದಾರೆ.
ದೆಹಲಿಯ ಕರ್ನಾಟಕ ಭವನದಲ್ಲಿ ರಾಜ್ಯದ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಶಿವಕುಮಾರ್, ಅಧಿಕಾರ ಹಸ್ತಾಂತರ ಕುರಿತಂತೆ ಬಂದ ಪ್ರಶ್ನೆಗಳಿಗೆ ನಿರಾಸಕ್ತರಾಗಿ ಉತ್ತರಿಸಿದರು.
ಕಾರ್ಯಕರ್ತನಾಗಿಯೇ ಇರುತ್ತೇನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರ ವಿಷಯವನ್ನು ರಾಹುಲ್ ಗಾಂಧಿ ಅಂಗಳಕ್ಕೆ ಹಾಕಿದರೆ, ಶಿವಕುಮಾರ್, ಯಾರನ್ನೂ ಹೊಣೆಯಾಗಿಸದೆ, ಕಾರ್ಯಕರ್ತನಾಗಿಯೇ ಇರುತ್ತೇನೆ ಎಂದರು.
ಕಳೆದ ಮೂರು-ನಾಲ್ಕು ದಶಕಗಳಿಂದ ಪಕ್ಷದ ಎಲ್ಲಾ ಹಂತಗಳಲ್ಲಿ ದುಡಿದಿದ್ದೇನೆ, ಅಂದೂ ಸಾಮಾನ್ಯ ಕಾರ್ಯಕರ್ತ, ಇಂದೂ ಸಾಮಾನ್ಯ ಕಾರ್ಯಕರ್ತನಾಗಿರಲು ಬಯಸುತ್ತೇನೆ.
ವಿದೇಶದಿಂದ ರಾಹುಲ್ ನಿನ್ನೆಯಷ್ಟೇ ಹಿಂತಿರುಗಿದ್ದಾರೆ, ಅವರನ್ನು ಭೇಟಿ ಮಾಡಿ ತೊಂದರೆ ಕೊಡಲು ಇಷ್ಟಪಡುವುದಿಲ್ಲ ಎಂದರು.
ಯಾವುದೇ ನಾಯಕರ ಭೇಟಿ ಇಲ್ಲ
ರಾಹುಲ್ ಅಷ್ಟೇ ಅಲ್ಲ, ಪಕ್ಷದ ಯಾವುದೇ ನಾಯಕರನ್ನು ನಾನು ಭೇಟಿ ಮಾಡಲು ಇಚ್ಚಿಸುವುದಿಲ್ಲ, ಕಾರ್ಯಕರ್ತನಾಗಿರಲು ಇಷ್ಟಪಡುತ್ತೇನೆ ಎಂಬುದನ್ನಷ್ಟೇ ತಿಳಿಸಲು ಬಯಸುತ್ತೇನೆ ಎಂದು ಮುಂದಿನ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ.
ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು ರಾಹುಲ್ ಗಾಂಧಿ ಅವರಿಗೆ ಬರೆಯುತ್ತಿರುವ ಪತ್ರಗಳು ಹಾಗೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆಗೆ ಸಂಬಂಧಿಸಿದಂತೆ ಮಾಡಿರುವ ಆರೋಪ ಪ್ರಶ್ನೆಗೆ, ನನಗೆ ಅನುಭವ ಕಡಿಮೆ, ತರಬೇತಿ ಪಡೆದುಕೊಳ್ಳುವೆ ಎಂದಷ್ಟೇ ಹೇಳಿದರು.

