ಬೆಂಗಳೂರು:ಗುರಿಯನ್ನು ಬೇಗ ತಲುಪಬೇಕು ಎನ್ನುವವರು ದಾರಿಯಲ್ಲಿ ವಿಶ್ರಮಿಸುತ್ತಾ ಕುಳಿತುಕೊಳ್ಳಬೇಡಿ ಎಂದು ತಮ್ಮ ಸಹೋದರ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮಾಜಿ ಸಂಸದ ಡಿ.ಕೆ.ಸುರೇಶ್ ಕಿವಿಮಾತು ಹೇಳಿದಂತಿದೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಭಾರೀ ಚರ್ಚೆಗೆ ಎಡೆ ಮಾಡಿರುವ ಬೆನ್ನಲ್ಲೇ ಸುರೇಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿ, ಹಿರಿಯರ ನುಡಿಯನ್ನು ಸಂದೇಶವಾಗಿ ಹಾಕಿದ್ದಾರೆ.
ಅಧಿಕಾರ ಹಂಚಿಕೆ ಸೂತ್ರ
ಅಧಿಕಾರ ಹಂಚಿಕೆ ಸೂತ್ರ ಜಾರಿಗೆ ತನ್ನಿ ಎಂಬುದಾಗಿ ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಸೇರಿದಂತೆ ಕೆಲವರನ್ನು ಒತ್ತಾಯಿಸಲು ದೆಹಲಿಗೆ ತೆರಳಿದ್ದ ಶಿವಕುಮಾರ್ ನಿರಾಸೆಯಿಂದ ಹಿಂತಿರುಗಿದ್ದನ್ನು ಸ್ಮರಿಸಬಹುದು.
ಈ ತಿಂಗಳ 28ರಿಂದ ದೆಹಲಿಯಲ್ಲಿ ನಡೆಯುವ ಕಾಂಗ್ರೆಸ್ ಕಾರ್ಯಕಾರಿಣಿ (ಸಿಡಬ್ಲೂಸಿ) ಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿದ್ದು, ಉಪಮುಖ್ಯಮಂತ್ರಿ ಅವರಿಗೆ ಇಲ್ಲ.
ಮಕ್ಕಳು ಅತ್ತು ತಾಯಿಯ ಗಮನ ಸೆಳೆದು ಹಾಲು ಕುಡಿಯುತ್ತವೆ, ನಿಮಗೆ ಬರಬೇಕಾದ ಅಧಿಕಾರ ಸಿಗಬೇಕಾದರೆ ರಾಜಕೀಯ ನಡೆ ಇಡಿ.
ಜಲತಾಣದಲ್ಲಿ ಸಂದೇಶ
ಯಾವುದೇ ಗುರಿ ತಲುಪಬೇಕು ಎಂದರೆ ವಿಶ್ರಮಿಸಬಾರದು, ಆ ಗುರಿ ಮುಟ್ಟುವವರೆಗೂ ನೀವು ಸಾಗುತ್ತಿರಬೇಕು ಎಂಬ ಸಂದೇಶ ಜಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ.
ಈ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ, ಅಧಿಕಾರ ಯಾರಿಗೂ ಶಾಶ್ವತವಲ್ಲ, ಅಧಿಕಾರ ಹಸ್ತಾಂತರ ಕುರಿತಂತೆ ನಾನು ಇನ್ನು ಮುಂದೆ ಪ್ರತಿಕ್ರಿಯಿಸುವುದಿಲ್ಲ ಎಂದಿದ್ದಾರೆ.
ನನ್ನ ಹೇಳಿಕೆಗೆ ಬದ್ಧ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದರೆ, ನಾನು ಈ ಹಿಂದೆ ಏನು ಹೇಳಿಕೆ ನೀಡಿದ್ದನೋ ಅದಕ್ಕೆ ಬದ್ಧನಾಗಿದ್ದೇನೆ.
ಅಧಿಕಾರ ಹಸ್ತಾಂತರ ಕುರಿತಂತೆ ನಮ್ಮ ತಂದೆ ಈಗಾಗಲೇ ಸ್ಪಷ್ಟಪಡಿಸಿದ್ದಾರೆ, ಅವರೇ ಹೇಳಿದ ಮೇಲೆ ನಾವು ಹೇಳುವುದೇನಿದೆ ಎಂದರು.

