ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಟ್ಟ ಮಾತನಂತೆ ’ಜನವರಿ 7’ ರೊಳಗೆ ಅಧಿಕಾರ ಹಸ್ತಾಂತರ ಮಾಡದಿದ್ದರೆ ಶಕ್ತಿ ಪ್ರದರ್ಶನಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಣಿಯಾಗುತ್ತಿದ್ದಾರೆ.
ಸಹೋದರ ಡಿ.ಕೆ.ಸುರೇಶ್, ಕೆಲವು ಆಪ್ತ ಸಚಿವರು, ಶಾಸಕರು, ಹಿತೈಷಿಗಳ ಮಾರ್ಗದರ್ಶನದಲ್ಲಿ ಮುಖ್ಯಮಂತ್ರಿ ವಿರುದ್ಧ ಬಹಿರಂಗವಾಗಿಯೇ ಬಂಡಾಯ ಏಳಲು ಮುಂದಾಗಿದ್ದಾರೆ.
ಗೋವಾ ಮುಖ್ಯಮಂತ್ರಿ ಭೇಟಿ
ಈ ಮಧ್ಯೆ, ಕಳೆದ ರಾತ್ರಿ ಗೋವಾದ ಖಾಸಗಿ ಸ್ಥಳವೊಂದರಲ್ಲಿ ಅಲ್ಲಿನ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರನ್ನು ಶಿವಕುಮಾರ್ ಭೇಟಿ ಮಾಡಿದ್ದರು ಎನ್ನಲಾಗಿದೆ.
ಅಲ್ಲಿನ ವಿಧಾನಸಭಾಧ್ಯಕ್ಷ ಗಣೇಶ್ ಗಾಂವ್ಕರ್ ಮತ್ತು ಬಂದರು ಮತ್ತು ಮೀನುಗಾರಿಕೆ, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳು ವೈದ್ಯ ಈ ಭೇಟಿ ವ್ಯವಸ್ಥೆ ಮಾಡಿದ್ದರಂತೆ.
ಹಡಗು ಉದ್ಯಮಿ, ಸಚಿವ ವೈದ್ಯ, ಗೋವಾ ಮುಖ್ಯಮಂತ್ರಿ ಹಾಗೂ ಅಲ್ಲಿನ ಸರ್ಕಾರದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.
ಮಧ್ಯಸ್ಥಿಕೆ ನಾಯಕರ ಉಪಸ್ಥಿತಿ
ಗೋವಾ ಮುಖ್ಯಮಂತ್ರಿ ಜೊತೆ ಮಾತುಕತೆ ಸಂದರ್ಭದಲ್ಲೂ ಈ ಇಬ್ಬರೂ ನಾಯಕರು ಉಪಸ್ಥಿತರಿದ್ದರು ಎನ್ನಲಾಗಿದೆ.
ಅಧಿಕಾರ ಹಂಚಿಕೆ ಗೊಂದಲದ ನಡುವೆಯೇ ಶಿವಕುಮಾರ್ ಹಾಗೂ ಗೋವಾ ಮುಖ್ಯಮಂತ್ರಿ ಮಾತುಕತೆ ಕಾಂಗ್ರೆಸ್ ವಲಯದಲ್ಲಿ ಭಾರೀ ಚರ್ಚೆಗೆ ಎಡೆ ಮಾಡಿದೆ, ಆದರೆ, ಭೇಟಿಯ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.
ಶಿವಕುಮಾರ್ ಬೆಂಬಲಿಗರು ಮಾತ್ರ ಅಧಿಕಾರ ಪಡೆಯಲೇಬೇಕೆಂದು ತಮ್ಮ ನಾಯಕನನ್ನು ಹುರಿದುಂಬಿಸಿರುವುದಲ್ಲದೆ, ಹೊಸ ವರ್ಷದ ಮೊದಲ ವಾರದಲ್ಲೇ ಸ್ಫೋಟಕ ಸುದ್ದಿ ನೀಡಲು ಗೌಪ್ಯ ಕಾರ್ಯತಂತ್ರಗಳಿಗೆ ಮುಂದಾಗಿದ್ದಾರೆ.
ಸಂದೇಶ ಬೆನ್ನಲ್ಲೇ ಬೆಳವಣಿಗೆ
ಕಳೆದ ವಾರವಷ್ಟೇ ಸುರೇಶ್, ’ಗುರಿ ಮುಟ್ಟುವವರೆಗೂ ವಿಶ್ರಮಿಸದೆ ಮುನ್ನುಗ್ಗಬೇಕು’ ಎಂಬ ಸಂದೇಶ ನೀಡಿದ ಬೆನ್ನಲ್ಲೇ ಈ ಬೆಳವಣಿಗೆಗಳು ನಡೆದಿವೆ.
ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಹಾಗೂ ಪಕ್ಷದ ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ತಮ್ಮನ್ನು ಭೇಟಿಯಿಂದ ದೂರ ಇಡುತ್ತಿರುವುದು ಶಿವಕುಮಾರ್ ಅವರನ್ನು ಕೆರಳಿಸಿದೆ.
ದೆಹಲಿಯಿಂದ ಹಿಂತಿರುಗುತ್ತಿದ್ದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ನಗರದಲ್ಲೇ ಭೇಟಿ ಮಾಡಿ ವರಿಷ್ಠರ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಮತ್ತಷ್ಟು ಕೆರಳಿದ ಶಿವಕುಮಾರ್
ಸಿಡ್ಲ್ಯೂಸಿ ಸಭೆ ವೇಳೆ ಮುಖ್ಯಮಂತ್ರಿ ಅವರು, ರಾಹುಲ್ ಭೇಟಿ ಮಾಡಿದ ನಂತರ ಸಂಪುಟ ಪುನರ್ ರಚನೆ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಶಿವಕುಮಾರ್ ಮತ್ತಷ್ಟು ಕೆರಳಿದ್ದಾರೆ.
ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಮುಖ್ಯಮಂತ್ರಿ ಹಿಂದೆ ಸರಿಯುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ವರಿಷ್ಠರಿಗೆ ಮತ್ತು ಸಿದ್ದರಾಮಯ್ಯ ಅವರಿಗೆ ತಮ್ಮ ಶಕ್ತಿ ಪ್ರದರ್ಶಿಸಲು ವೇದಿಕೆ ಸಿದ್ಧ ಮಾಡುತ್ತಿದ್ದಾರೆ.

