ನವದೆಹಲಿ:ಸಾರ್ವಜನಿಕ ಬದುಕಿನಲ್ಲಿ ಇರುವವರು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂಬ ಸಲಹೆಯನ್ನು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ತಮ್ಮ ಪುತ್ರ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ನೀಡಿದ್ದಾರೆ.
ಕರ್ನಾಟಕದಲ್ಲಿ ಅಧಿಕಾರ ಹಂಚಿಕೆ ಸಂಬಂಧ ಎದುರಾಗಿರುವ ಸಮಸ್ಯೆ ಹಿನ್ನೆಲೆಯಲ್ಲಿ ಸೋನಿಯಾ ಅವರು ರಾಹುಲ್ ಅವರಿಗೆ ಈ ಸಲಹೆ ಕೊಟ್ಟಿದ್ದಾರೆ.
ದೆಹಲಿಗೆ ಕರೆಸುವ ಸಾಧ್ಯತೆ
ಈ ಹಿನ್ನೆಲೆಯಲ್ಲಿ ಅಧಿಕಾರ ಹಸ್ತಾಂತರ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಮ್ಮನ್ನು ಜನವರಿ 7ರ ನಂತರ ದೆಹಲಿಗೆ ಕರೆಸುವ ಸಾಧ್ಯತೆ ಇದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಪ್ತರೊಂದಿಗೆ ಹೇಳಿಕೊಂಡಿದ್ದಾರೆ.
ನನ್ನ ವಿಚಾರವನ್ನು ಸೋನಿಯಾ ಗಾಂಧಿ ಅವರು ರಾಹುಲ್ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಳಿ ಪ್ರಸ್ತಾಪಿಸಿದ್ದಾರೆ.
ನನ್ನನ್ನೂ ಸಂಪರ್ಕಿಸಿ ಅಧಿಕಾರ ಹಸ್ತಾಂತರ ಕುರಿತಂತೆ ಭರವಸೆ ವ್ಯಕ್ತಪಡಿಸಿ, ಯಾರೂ ದುಡುಕಬೇಡಿ, ನನಗೆ ದಕ್ಕಬೇಕಾದ ಸ್ಥಾನ ದೊರೆಯಲಿದೆ ಎಂಬ ಆತ್ಮವಿಶ್ವಾಸದ ಮಾತುಗಳನ್ನು ಆಡಿದ್ದಾರೆ.
ಪುನಃ ಅಧಿಕಾರ ಸಾಧ್ಯವಾಗದು
ಮಧ್ಯಪ್ರದೇಶ, ರಾಜಾಸ್ತಾನ, ಪಂಜಾಬ್, ಹರಿಯಾಣ ಹಾಗೂ ಛತ್ತೀಸ್‌ಘಡ ರಾಜ್ಯಗಳಲ್ಲಿ ಅಧಿಕಾರ ಹಸ್ತಾಂತರ ಗೊಂದಲದಿಂದ ಚುನಾವಣೆಯಲ್ಲಿ ಪರಾಭವಗೊಂಡು ಪುನಃ ಅಧಿಕಾರ ಚುಕ್ಕಾಣಿ ಹಿಡಿಯಲು ಸಾಧ್ಯವಾಗಲಿಲ್ಲ.
ಮಧ್ಯಪ್ರದೇಶದಲ್ಲಿ ದಿಗ್ವಿಜಯ ಸಿಂಗ್ ಮತ್ತು ಜ್ಯೋತಿರಾಧಿತ್ಯ ಸಿಂಧ್ಯ ನಡುವಿನ ಕಲಹದಿಂದ ಅಧಿಕಾರ ಕಳೆದುಕೊಳ್ಳಬೇಕಾಯಿತು.
ಅದೇ ರೀತಿ ರಾಜಾಸ್ತಾನದಲ್ಲಿ ಅಂದಿನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವಿನ ಗೊಂದಲ ಪರಿಹರಿಸಲು ಸಾಧ್ಯವಾಗದೆ ಅಧಿಕಾರ ಕಳೆದುಕೊಳ್ಳಬೇಕಾಯಿತು.
ಸೂಕ್ತ ಸಮಯದಲ್ಲಿ ನಿರ್ಣಯ
ಪಂಜಾಬ್‌ನಲ್ಲಿ ಕ್ಯಾಪ್ಟನ್ ಅಮ್ರೀಂದರ್ ಸಿಂಗ್ ಹಾಗೂ ನವಜೋತ್ ಸಿಂಗ್ ಸಿದ್ದು ಕಲಹ, ಹರಿಯಾಣದಲ್ಲಿ ಭೂಪಿಂದರ್ ಸಿಂಗ್ ಹೂಡ ಮತ್ತು ಕುಮಾರಿ ಶೆಲ್ಜಾ, ಛತ್ತೀಸ್‌ಘಡದಲ್ಲಿ ಭೂಪೇಶ್ ಬಘೇಲ್ ಹಾಗೂ ಟಿ.ಸಿಂಗ್ ದೇವ್ ನಡುವಿನ ಅಧಿಕಾರ ಹಂಚಿಕೆ ಗೊಂದಲಕ್ಕೆ ಸೂಕ್ತ ಸಮಯದಲ್ಲಿ ಸಮಂಜಸ ನಿರ್ಣಯ ಕೈಗೊಳ್ಳಲಾಗದೆ ಅಧಿಕಾರ ಕಳೆದುಕೊಳ್ಳಬೇಕಾಯಿತು.
ಅಂತಹ ಸ್ಥಿತಿ ಕರ್ನಾಟಕದಲ್ಲಿ ಎದುರಾಗುವುದಕ್ಕೂ ಮುನ್ನ ಸಮಸ್ಯೆ ಬಗೆಹರಿಸುವಂತೆ ರಾಹುಲ್ ಅವರಿಗೆ ಸೋನಿಯಾ ಪೂರ್ಣ ಪಾಠ ಮಾಡಿದ್ದಾರಂತೆ.
ಇಂತಹುದೇ ಪರಿಸ್ಥಿತಿ ಕರ್ನಾಟಕದಲ್ಲೂ ಮರುಕಳಿಸಬಾರದು ಎಂಬುದಾಗಿ ರಾಹುಲ್ ಅವರಿಗೆ ಸೋನಿಯಾ ಗಾಂಧಿ ಕಿವಿಮಾತು ಹೇಳಿದ್ದಾರಂತೆ.
ಮಿತ್ರ ಪಕ್ಷಗಳು ದೂರ ಸಂಭವ
ನಾವು ನಮ್ಮ ಪಕ್ಷದಲ್ಲಿನ ಸಮಸ್ಯೆಗಳನ್ನು ಪರಿಹಸಿಕೊಳ್ಳದಿದ್ದರೆ, ಇಂಡಿಯಾ ಕೂಟದಲ್ಲಿನ ಮಿತ್ರ ಪಕ್ಷಗಳು ದೂರವಾಗುವ ಸಂಭವ ಇರುತ್ತದೆ.
ಕರ್ನಾಟಕದಲ್ಲಿನ ಗೊಂದಲ ಬಗೆಹರಿಸುವಂತೆ ಸೂಚಿಸಿದ ನಂತರ ಸಮಸ್ಯೆ ಕುರಿತು ಗಮನ ನೀಡುವುದಾಗಿ ರಾಹುಲ್ ಹೇಳಿದ್ದಾರೆ ಎನ್ನಲಾಗಿದೆ.

