ಬೆಂಗಳೂರು:ಭ್ರಷ್ಟಾಚಾರದಲ್ಲಿ ಮುಳುಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ದಿವಂಗತ ದೇವರಾಜ ಅರಸು ಆಡಳಿತಕ್ಕೆ ಹೋಲಿಕೆ ಮಾಡಿಕೊಳ್ಳುವುದು ಮೂರ್ಖತನ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌ಯಡಿಯೂರಪ್ಪ ಇಂದಿಲ್ಲಿ ವಾಗ್ದಾಳಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರಸು ಮತ್ತು ಸಿದ್ದರಾಮಯ್ಯ ಸರ್ಕಾರಕ್ಕೂ ಹೋಲಿಕೆ ಪ್ರಶ್ನೆಯೇ ಇಲ್ಲ.
ಸಾಮಾಜಿಕ ಬದ್ಧತೆ ನಾಯಕ
ಅರಸು ಸಾಮಾಜಿಕ ಬದ್ಧತೆ ಇಟ್ಟುಕೊಂಡು ರೈತರು, ಬಡವರು ಮತ್ತು ಹಿಂದುಳಿದವರ ಪರವಾಗಿ ಯೋಜನೆಗಳನ್ನು ರೂಪಿಸಿ ಶ್ರಮಿಸಿದ ನಾಯಕ ಎಂದರು.
ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಎಲ್ಲಾ ಇಲಾಖೆಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ, ಶಾಂತಿ ಸುವ್ಯವಸ್ಥೆ ಹಾಳಾಗಿದೆ, ಅಧಿಕಾರಿಗಳ ಮೇಲೆ ಹಿಡಿತವಿಲ್ಲ.
ಆಡಳಿತ ಪಕ್ಷದ ಜನಪ್ರತಿನಿಧಿಗಳೇ ಕಾನೂನು ಮೀರಿ ವರ್ತಿಸುತ್ತಿದ್ದಾರೆ, ಇವರ ಮುಂದೆ ಗೃಹ ಇಲಾಖೆ ಮತ್ತು ಪೋಲಿಸರು ಸಂಪೂರ್ಣ ನಿಷ್ಕ್ರಿಯರಾಗಿದ್ದಾರೆ.
ಸಿದ್ದರಾಮಯ್ಯ ಶೂನ್ಯ ಸಾಧನೆ
ಅರಸು ಅವರಿಗಿಂತ ಸಿದ್ದರಾಮಯ್ಯ ಹೆಚ್ಚು ದಿನ ಆಡಳಿತ ನಡೆಸಿದ ದಾಖಲೆ ಮಾಡಿರಬಹುದು, ಆದರೆ, ಉಳಿದ ಎಲ್ಲಾ ವಿಚಾರಗಳಲ್ಲೂ ಇವರದು ಶೂನ್ಯ ಸಾಧನೆ.
ದೇವರಾಜ ಅರಸು ಆಡಳಿತಕ್ಕೆ ಹೋಲಿಕೆ ಮಾಡಿಕೊಳ್ಳುವುದೇ ಅಪಹಾಸ್ಯ, ಇನ್ನು ಈ ಭ್ರಷ್ಟ ಆಡಳಿತವನ್ನು ಮುಂದುವರೆಸಬೇಕೆಂಬ ಅಭಿಲಾಷೆಯನ್ನೂ ವ್ಯಕ್ತಪಡಿಸುತ್ತಾರೆ.
ಎಲ್ಲಾ ರಂಗಗಳಲ್ಲಿ ವೈಫಲ್ಯ ಕಂಡಿರುವ ಈ ಸರ್ಕಾರದ ನಡವಳಿಕೆಯನ್ನು ಜನರ ಮುಂದಿಡಲು ಬಿಜೆಪಿ ರಾಜ್ಯಾದ್ಯಂತ ಹೋರಾಟ ಮಾಡಲಿದೆ.
ಅಧಿಕಾರದ ಚುಕ್ಕಾಣಿ
ಮುಂಬರುವ ಜಿಲ್ಲಾ, ತಾಲ್ಲೂಕು, ಪಂಚಾಯತ್ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಿ ನಾವು ಅಧಿಕಾರದ ಚುಕ್ಕಾಣಿ ಹಿಡಿಯುತ್ತೇವೆ.
ಕಾರ್ಯಕರ್ತರನ್ನು ಹುರಿದುಂಬಿಸುವ, ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡುವ ಉದ್ದೇಶದಿಂದಲೇ ಹೋರಾಟಕ್ಕೆ ಪಕ್ಷ ಅಣಿಯಾಗುತ್ತಿದೆ ಎಂದರು.

