ಬೆಂಗಳೂರು:ಉಪಮುಖ್ಯಮಂತ್ರಿ ಹುದ್ದೆಗೆ ಎಕ್ಸ್‌ಟ್ರಾ ಕೊಂಬು, ಕೋಡು ಇರಲ್ಲ, ಕೊಂಬು ಸಿಕ್ಕಿಸಿಕೊಳ್ಳೋದಕ್ಕೂ ಆಗಲ್ಲ ಎಂಬ ಸಣ್ಣ ವಿಷಯವೂ ನಿಮ್ಮ ಎಕ್ಸ್‌ಪೀರಿಯನ್ಸ್‌ಗೆ ಹೊಳೆಯಲಿಲ್ಲವೇ ಎಂದು ಡಿ.ಕೆ.ಶಿವಕುಮಾರ್ ಅವರಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ತಾವು ಉಪಮುಖ್ಯಮಂತ್ರಿ ಆಗಿರಬಹುದು, ಆದರೆ ಮಂತ್ರಿ ಪದವಿಗೆ ಇರುವಷ್ಟೇ ಶಿಷ್ಟಾಚಾರ, ಅಧಿಕಾರ ವ್ಯಾಪ್ತಿ ಆ ಹುದ್ದೆಗೂ ಇದೆ ಎನ್ನುವುದು ಗೊತ್ತಿಲ್ಲವೇ ಎಂದಿದ್ದಾರೆ.
ಅಧಿಕಾರದ ಸ್ಪಷ್ಟ ಉಲ್ಲಂಘನೆ
ಬಳ್ಳಾರಿ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳ ಸಭೆಯನ್ನು ರಾಜ್ಯ ಗೃಹ ಸಚಿವರೇ ನಡೆಸಬೇಕು, ಅದು ಅವರ ಅಧಿಕಾರ ವ್ಯಾಪ್ತಿ, ಅವರನ್ನು ಹೊರತುಪಡಿಸಿದರೆ, ಮುಖ್ಯಮಂತ್ರಿ ಇಂತಹ ಸಭೆ ನಡೆಸಬಹುದು, ಆದರೆ, ಉಪಮುಖ್ಯಮಂತ್ರಿ ಸಭೆ ನಡೆಸಿದ್ದು ಶಿಷ್ಟಾಚಾರ, ಅಧಿಕಾರದ ಸ್ಪಷ್ಟ ಉಲ್ಲಂಘನೆ, ಇದನ್ನು ಆಡಳಿತಾನುಭವ, ಸೀನಿಯಾರಿಟಿ ಎಂಬುದಾಗಿ ತಿಳಿದು ಬೆನ್ನು ತಟ್ಟಿಕೊಂಡಿದ್ದಾರೆ.
ನಿಮಗೆ ಸಭೆ ನಡೆಸಲು ಗೃಹ ಸಚಿವರಾಗಲಿ, ಮುಖ್ಯಮಂತ್ರಿಯವರಾಗಲಿ ಸೂಚಿಸಿದ್ದರೆ, ಇಲ್ಲವಲ್ಲಾ, ಅದಕ್ಕೇ ನಾನು ಹೇಳಿದ್ದು, ಅವರೇನು ಹೆಬ್ಬೆಟ್ಟು ಗೃಹ ಮಂತ್ರಿಗಳಾ ಅಥವಾ ರಬ್ಬರ್ ಸ್ಟ್ಯಾಂಪಾ.
ಒಬ್ಬ ಹಿರಿಯ ಮಂತ್ರಿ ಖಾತೆಯನ್ನು ಅಕ್ರಮವಾಗಿ ಒತ್ತುವರಿ ಮಾಡುವುದಕ್ಕೆ ಸಂವಿಧಾನದಲ್ಲಿ ವಿಶೇಷ ತಿದ್ದುಪಡಿ ಏನಾದರೂ ಮಾಡಿಸಿದ್ದೀರಾ.
ಸಿಕ್ಕಾಪಟ್ಟೆ ಸೀನಿಯಾರಿಟಿ
ನಿಮ್ಮದು ಭಾರೀ ಅನುಭವ, ಸಿಕ್ಕಾಪಟ್ಟೆ ಸೀನಿಯಾರಿಟಿ, ಆದರೂ, ಇಂಥ ಸಣ್ಣ ವಿಷಯ ನಿಮಗೇಕೆ ತಿಳಿಯಲಿಲ್ಲ ಎಂದು ಕುಮಾರಸ್ವಾಮಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಶಿವಕುಮಾರ್ ಅವರನ್ನು ಮೂದಲಿಸಿದ್ದಾರೆ.
ಬಿಜೆಪಿ-ಜೆಡಿಎಸ್ ವಿಲೀನದ ಚಿಂತೆ ಪಕ್ಕಕ್ಕೆ ಇಡಿ, ನನ್ನ ಮತ್ತು ನಿಮ್ಮ ಆಡಳಿತಾನುಭವದ ಬಗ್ಗೆ ಮಾತನಾಡೋಣ, ನಾನು ಎರಡು ಸಣ್ಣ ಅವಧಿಗೆ ಮುಖ್ಯಮಂತ್ರಿ, ಅಲ್ಪ ಅವಧಿಗೆ ಪ್ರತಿಪಕ್ಷ ನಾಯಕ, ಈಗ ಕೇಂದ್ರ ಮಂತ್ರಿ.
ನೀವೂ ಸುದೀರ್ಘ ಅವಧಿಗೆ ಶಾಸಕ, ಅನೇಕ ಬಾರಿ ಮಂತ್ರಿ, ಈಗ ಉಪಮುಖ್ಯಮಂತ್ರಿ ಹುದ್ದೆಯಲ್ಲೂ ಬರೀ ಮಂತ್ರಿ.
ಜನರನ್ನು ಕೇಳಬೇಕು
ಪರಿಸ್ಥಿತಿ ಹೀಗಿರುವಾಗ ನಮ್ಮಿಬ್ಬರ ಆಡಳಿತಾನುಭವದ ಬಗ್ಗೆ ನೀವು ಹೇಳುವುದಲ್ಲ, ಜನರನ್ನು ಕೇಳಬೇಕು.
ಕೊಳ್ಳೆ, ಸುಲಿಗೆ, ಬೇಲಿ, ಚದರಡಿ, ಕಮಿಷನ್, ಫಿಕ್ಸಿಂಗ್, ಒದ್ದು ಕಿತ್ತುಕೊಳ್ಳುವುದು, ನನ್ನ ಎಕ್ಸ್‌ಪೀರಿಯನ್ಸ್ ಅಲ್ಲಾ ಶಿವಕುಮಾರ್ ಅವರೇ.
ಏನೋ, ಜನರ ಆಶೀರ್ವಾದ ಮತ್ತು ದೇವರ ದಯೆಯಿಂದ ಸಿಕ್ಕಿದ ಅವಕಾಶದಲ್ಲಿ ಜನರಿಗೆ ಕೈಲಾದ ಸಹಾಯ ಮಾಡುವ ಹುಲು ರಾಜಕಾರಣಿ ನಾನು, ನಿಮಗೆ ಸಿದ್ಧಿಸಿರುವ ಅಂತಹ ಭಾರೀ ಅನುಭವ ನನಗಿಲ್ಲ ಎಂಬುದನ್ನು ವಿನಮ್ರವಾಗಿ ಒಪ್ಪಿಕೊಳ್ಳುವೆ ಎಂದಿದ್ದಾರೆ.
ನಿಮಗೆ ಭೂ ಕಬ್ಜ, ಒತ್ತುವರಿ ಕರತಲಾಮಲಕ, ಅದೇ ರೀತಿ ಮತ್ತೊಬ್ಬ ಸಚಿವರ ಖಾತೆ ಒತ್ತುವರಿ ಮಾಡುವುದರಲ್ಲಿಯೂ ನೀವು ನಿಸ್ಸೀಮರು, ಅದನ್ನಷ್ಟೇ ನಾನು ಹೇಳಿದ್ದು ಎಂದು ವ್ಯಂಗ್ಯವಾಡಿದ್ದಾರೆ.

