ನವದೆಹಲಿ:ಕರ್ನಾಟಕದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವ ವೇಳೆ ನೀಡಿದ್ದ ವಾಗ್ದಾನದಂತೆ ಮುಖ್ಯಮಂತ್ರಿ ಗಾದಿ ಹಸ್ತಾಂತರಿಸುವಂತೆ ಕಾಂಗ್ರೆಸ್ ವರಿಷ್ಠರ ಮನವೊಲಿಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ ಬಿಡಾರ ಹೂಡಿದ್ದಾರೆ.
ಅಸ್ಸಾಂ ವಿಧಾನಸಭಾ ಚುನಾವಣೆಯ ಪಕ್ಷದ ಉಸ್ತುವಾರಿ ಹೊತ್ತಿರುವ ಶಿವಕುಮಾರ್ ಇಂದು ಎಐಸಿಸಿ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ತೆರಳಿದರು.
ಕೆಲವರ ಗೌಪ್ಯ ಭೇಟಿ
ಸಭೆ ನಂತರ ಪಕ್ಷದ ಅಧಿನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ನಾಯಕರನ್ನು ಪ್ರತ್ಯೇಕವಾಗಿ, ಅದರಲ್ಲೂ ಕೆಲವರನ್ನು ಗೌಪ್ಯವಾಗಿ ಭೇಟಿ ಮಾಡಿ ತಮ್ಮ ಹಕ್ಕೋತ್ತಾಯ ಮಾಡಲಿದ್ದಾರೆ.
ತಮಿಳುನಾಡಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೈಸೂರು ಮೂಲಕ ತೆರಳಲು ಆಗಮಿಸಿದ್ದ ಸಂದರ್ಭದಲ್ಲಿ ಶಿವಕುಮಾರ್ ರಾಹುಲ್ ಭೇಟಿ ಮಾಡಿ, ಅಧಿಕಾರ ಹಸ್ತಾಂತರಕ್ಕೆ ಚಾಲನೆ ನೀಡುವಂತೆ ಮನವಿ ಮಾಡಿದ್ದರು.
ಇದಕ್ಕೆ ಸ್ಪಂದಿಸಿದ್ದ ರಾಹುಲ್, ನಿಮ್ಮನ್ನು ಮತ್ತು ಮುಖ್ಯಮಂತ್ರಿ ಅವರನ್ನು ದೆಹಲಿಗೆ ಕರೆಸುವುದಾಗಿ ಹೇಳಿದ್ದರು.
ಎಐಸಿಸಿ ಸಭೆ ಕಾರಣ
ಎಐಸಿಸಿ ಸಭೆ ಕಾರಣಕ್ಕೆ ದೆಹಲಿಗೆ ತೆರಳುವ ಅವಕಾಶ ದೊರೆತಿರುವುದರಿಂದ ಇದೇ ವೇಳೆ ಅಧಿಕಾರ ಹಸ್ತಾಂತರ ವಿಷಯವನ್ನೂ ಇತ್ಯರ್ಥಪಡಿಸಿಕೊಳ್ಳುವ ಉದ್ದೇಶದಿಂದ ಹಲವು ನಾಯಕರನ್ನು ಭೇಟಿ ಮಾಡಲಿದ್ದಾರೆ.
ಈ ಮಧ್ಯೆ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಭೇಟಿ ಹೊಸತೇನಲ್ಲ, ದೆಹಲಿಯಲ್ಲಿ ಎಲ್ಲಾ ನಾಯಕರು ಇರುತ್ತಾರೆ, ಭೇಟಿ ಮಾಡುತ್ತೇನೆ ಎಂದರು.
ಸಾರ್ವಜನಿಕವಾಗಿ ಹೇಳಲಾಗದು
ರಾಹುಲ್ ಗಾಂಧಿ ನಮ್ಮ ಪಕ್ಷದ ನಾಯಕರು, ಪಕ್ಷದ ನಾಯಕರು ಹಾಗೂ ಅಧ್ಯಕ್ಷರನ್ನು ಭೇಟಿ ಚರ್ಚೆ ಸಹಜ ಪ್ರಕ್ರಿಯೆ, ಏನು ಮಾತುಕತೆ ನಡೆಯಿತೆಂಬುದನ್ನು ಸಾರ್ವಜನಿಕವಾಗಿ ಚರ್ಚೆ ಮಾಡಲಾಗದು.
ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ ಎಂಬ ನನ್ನ ಟ್ವೀಟ್ ಅನ್ನು ಕೆಲವು ಮಾಧ್ಯಮಗಳು ವಿವಿಧ ರೀತಿ ವ್ಯಾಖ್ಯಾನ ಮಾಡಿವೆ ಎಂದರು.

