ಸಿದ್ದರಾಮಯ್ಯ ರಾಜಕೀಯ ವೈಖರಿಗೆ ಡಿ.ಕೆ.ಸುರೇಶ್ ವ್ಯಂಗ್ಯ
ಬೆಂಗಳೂರು:ಜಾತಿ ಮೇಲೆ ರಾಜಕಾರಣ ಮಾಡಿದರೆ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ, ಕೆಲವರು ಇದೇ ಹೆಸರಿನಲ್ಲಿ ಅಧಿಕಾರಕ್ಕೆ ಅಂಟಿಕೊಂಡು ಇರುತ್ತಾರೆ ಎಂದು ಮಾಜಿ ಸಂಸದ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಇಂದಿಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪರೋಕ್ಷ ದಾಳಿ ಮಾಡಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮತಪತ್ರ ಬಳಸುವ ಸರ್ಕಾರದ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ನಾವು ಬಹಳ ಮುಂದೆ ಹೋಗಿದ್ದೇವೆ, ಹಿಂದೆ ಸರಿಯುವುದು ಸರಿಯಲ್ಲ ಎನ್ನುವ ಮೂಲಕ ರಾಜ್ಯ ಸರ್ಕಾರದ ನಿಲುವನ್ನು ಟೀಕಿಸಿದ್ದಾರೆ.
ಆಡಳಿತ ವೈಖರಿ
ನಗರದ ತಮ್ಮ ನಿವಾಸದಲ್ಲಿ ತುರ್ತು ಸುದ್ದಿಗೋಷ್ಠಿ ಉದ್ದಕ್ಕೂ ಸಿದ್ದರಾಮಯ್ಯ ಆಡಳಿತ ಮತ್ತು ರಾಜಕೀಯ ವೈಖರಿಯನ್ನು ವ್ಯಂಗ್ಯ ಮಾಡಿದರು.
ಮುಖ್ಯಮಂತ್ರಿ ಅಧಿಕಾರವನ್ನು ಪಂಚಾಯತ್ ಅಧ್ಯಕ್ಷ ಗಾದಿಗೆ ಹೋಲಿಕೆ ಮಾಡಿ ಮಾತನಾಡಿದ ಅವರು, ಚುನಾವಣೆಗೆ ನಿಲ್ಲಲು ಸಿದ್ಧರಿರುವುದಿಲ್ಲ, ಅಧ್ಯಕ್ಷ ಸ್ಥಾನ ದಕ್ಕಲಿದೆ ಎಂದಾಗ ಅಧಿಕಾರ ಬೇಕು ಎನ್ನುತ್ತಾರೆ.
ಬೇರೆಯವರಿಗೆ ಹಸ್ತಾಂತರ ಸಮಯ ಬಂದಾಗ, 15 ದಿನ ಸಮಯ ಕೊಡು ಕಾರ್ಡ್‌ಲ್ಲಿ ಹೆಸರು ಹಾಕಿಸಿದ್ದೇನೆ ಎನ್ನುತ್ತಾರೆ, ನಂತರ ಮಾರ್ಚ್ ಮುಗಿಯಲಿ ಎನ್ನುತ್ತಾರೆ, ಮತ್ತೆ ಇನ್ನು ಮೂರು ದಿನ ಅವಕಾಶ ನೀಡಿ ಆಮೇಲೆ ಮಾಜಿ ಅನ್ನಿಸಿಕೊಳ್ಳುತ್ತೇನೆ ಎಂಬ ರಾಗ ತೆಗೆಯುತ್ತಾರೆ ಎಂದರು.
ಅಧಿಕಾರ ಹಸ್ತಾಂತರ
ಸಿದ್ದರಾಮಯ್ಯ ಅಧಿಕಾರ ಹಸ್ತಾಂತರ ವಿಷಯದಲ್ಲಿ ನಡೆದುಕೊಳ್ಳುತ್ತಿರುವುದನ್ನು ಈ ರೀತಿ ಹೋಲಿಕೆ ಮಾಡಿ ವ್ಯಂಗ್ಯವಾಡಿದ ಸುರೇಶ್, ರಾಜಕಾರಣಿಗೆ ಅಧಿಕಾರವೂ ಶಾಶ್ವತ ಅಲ್ಲ, ತಾಳ್ಮೆಯೂ ಶಾಶ್ವತ ಅಲ್ಲ ಎಂದು ಎಚ್ಚರಿಸಿದರು.
ಬಜೆಟ್ ಸಿದ್ಧತೆ ಬಗ್ಗೆ ಮಾತನಾಡಿದ ಅವರು, ಈಗಾಗಲೇ ಬಜೆಟ್‌ಗಳನ್ನು ಮಂಡಿಸಿ ದಾಖಲೆ ಮಾಡಿದ್ದಾರೆ, ಅದಕ್ಕೆ ಇನ್ನೊಂದು ಗರಿ ಸಿಕ್ಕಿಸಿಕೊಳ್ಳಲಿ ಎಂದರು.
ಜಾತಿ ರಾಜಕಾರಣ ಬಹಳ ದಿನ ನಡೆಯುವುದಿಲ್ಲ, ಒಂದು ಪಕ್ಷಕ್ಕೆ ಒಕ್ಕಲಿಗ, ಲಿಂಗಾಯತ, ಎಸ್‌ಸಿ, ಎಸ್‌ಟಿ ಎಲ್ಲರ ಮತಗಳೂ ಬೇಕು, ಯಾವುದೇ ಒಂದು ವರ್ಗ ಬಿಟ್ಟು ರಾಜಕಾರಣ ಮಾಡಲಾಗದು.
ಜಾತಿ ಹೆಸರಲ್ಲಿ ಸರ್ಕಾರ
ಜಾತಿ ಹೆಸರಿನಲ್ಲಿ ಸರ್ಕಾರ ಮಾಡಿದರೆ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ ಎಂದು ಸದಾ ಅಹಿಂದ ಎನ್ನುವ ಮುಖ್ಯಮಂತ್ರಿ ಆಡಳಿತ ವೈಖರಿಯನ್ನು ಪರೋಕ್ಷವಾಗಿ ಜರಿದರು.
ರಾಜಕಾರಣದಲ್ಲಿ ನಂಬಿಕೆ ಮುಖ್ಯ ಎಂಬುದಾಗಿ ಪುನರುಚ್ಛರಿಸಿದ ಸುರೇಶ್, ತಮ್ಮ ಸಹೋದರ ಶಿವಕುಮಾರ್ ಅವರಿಗೆ ಅಧಿಕಾರ ಸಿಗುವುದು ದೇವರ ಇಚ್ಛೆ.
ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಕೇವಲ ಕರ್ನಾಟಕ ಮಾತ್ರವಲ್ಲ, ಇಡೀ ರಾಷ್ಟ್ರ ರಾಜಕಾರಣ ನೋಡಬೇಕಾಗುತ್ತದೆ.
ಎಲ್ಲರನ್ನೂ ವಿಶ್ವಾಸಕ್ಕೆ
ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕರ್ನಾಟಕದ ಬಗ್ಗೆ ಒಂದು ನಿಲುವಿಗೆ ಬರಲಿದ್ದಾರೆ.
ಬಜೆಟ್‌ಗೆ ಮುನ್ನವೇ ಅಧಿಕಾರ ಹಸ್ತಾಂತರ ಆಗಲಿದೆಯೇ ಎಂಬ ಪ್ರಶ್ನೆಗೆ ಕಾದು ನೋಡಿ ಎಂದರು.
ಪೋಲಿಸ್ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಕಚೇರಿಯಲ್ಲಿ ಮಹಿಳೆಯ ಜೊತೆ ವರ್ತಿಸಿದ ರೀತಿ ಖಂಡಿಸಿದ ಸುರೇಶ್, ಇಲಾಖೆಯಲ್ಲಿ ಶಿಸ್ತು ಮುಖ್ಯ, ಅಧಿಕಾರಿ ಗೃಹ ಸಚಿವರಿಗೂ ಹತ್ತಿರ, ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದರು.

