ಬೆಂಗಳೂರು:ಅಬಕಾರಿ ಇಲಾಖೆಯ ಎಲ್ಲ ಹಂತಗಳಲ್ಲೂ ಲಂಚಕ್ಕೆ ಬೇಡಿಕೆ ಇಟ್ಟಿರುವ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ವಿಧಾನಸಭೆಯಲ್ಲಿ ಪ್ರತಿಪಕ್ಷ ಸದಸ್ಯರು ಆಗ್ರಹಿಸಿದರು.
ಅಧಿಕಾರಿಗಳನ್ನು ತಮ್ಮ ಗಾಳಕ್ಕೆ ತಕ್ಕಂತೆ ಆಡಿಸಿಕೊಂಡು ಪ್ರತಿಯೊಂದೂ ಅನುಮತಿಗೂ ಇಂತಿಷ್ಟು ಹಣ ನೀಡಲೇಬೇಕೆಂದು ಸಚಿವರು ಮತ್ತು ಅವರ ಪುತ್ರ ನಿಗದಿಪಡಿಸಿರುವ ಮಾಹಿತಿ ಆಡಿಯೊ ಹರಿದಾಡುತ್ತಿದೆ, ಇಂತಹವರನ್ನು ಸಂಪುಟದಲ್ಲಿ ಹೇಗೆ ಮುಮದುವರಿಸುತ್ತೀರಿ ಎಂದು ಪ್ರತಿಪಕ್ಷ ನಾಯಕ ಆರ್,ಅಶೋಕ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.
ಮೂರನೇ ಬಾರಿ ಆರೋಪ
ನಿಲುವಳಿ ಸೂಚನೆಯಡಿ ಪೂರ್ವಭಾವಿ ಪ್ರಸ್ತಾಪ ಮಾಡಿದ ಆರ್.ಅಶೋಕ್, ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪ ಪ್ರಕರಣದಲ್ಲಿ ಅಬಕಾರಿ ಸಚಿವರು ಮತ್ತು ಅವರ ಮಗನ ಹೆಸರು ಕೇಳಿಬಂದಿದೆ, ಇದು ಮೊದಲ ಬಾರಿಯಲ್ಲ, ಮೂರನೇ ಬಾರಿ ಆರೋಪ ಕೇಳಿಬಂದಿದ್ದು, ಸಚಿವರ ರಾಜೀನಾಮೆ ಪಡೆಯಬೇಕು ಎಂದರು.
ಸದನದಲ್ಲಿ ಪೆನ್‌ಡ್ರೈವ್ ಪ್ರದರ್ಶಿಸಿ, ಅಸ್ಸಾಂ, ಕೇರಳ ಚುನಾವಣೆಗೆ ಹಣ ಸಂಗ್ರಹ ಮಾಡಲಾಗುತ್ತಿದೆ ಎನ್ನುತ್ತಿದ್ದಂತೆ, ಬಿಜೆಪಿ ಶಾಸಕರು ಒಮ್ಮಲೇ ಎದ್ದು ನಿಂತು ಅಬಕಾರಿ ಸಚಿವರು ರಾಜೀನಾಮೆ ಕೊಡಬೇಕು, ಮುಖ್ಯಮಂತ್ರಿ ರಾಜೀನಾಮೆ ಪಡೆದುಕೊಳ್ಳಬೇಕು ಎಂಬ ಘೋಷಣೆ ಕೂಗಿದರು.
4 ಸಾವಿರ ಕೋಟಿ ರೂ. ಲೂಟಿ ಆರೋಪ
ಅಬಕಾರಿ ಇಲಾಖೆ ಮೇಲೆ 4 ಸಾವಿರ ಕೋಟಿ ರೂ. ಲೂಟಿ ಆರೋಪ ಇದೆ, ಲೋಕಾಯುಕ್ತದಲ್ಲೂ ದೂರು ದಾಖಲಾಗಿದೆ. ಸದನದಲ್ಲಿ ಚರ್ಚೆಗೆ ಅವಕಾಶ ಕೊಡಬೇಕು. ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ಯು.ಟಿ.ಖಾದರ್, ನಿಲುವಳಿ ಸೂಚನೆ ಬದಲಿಗೆ ನಿಯಮ 69ಕ್ಕೆ ಪರಿವರ್ತನೆ ಮಾಡುವುದಾಗಿ ತಿಳಿಸಿ ಮುಂದಿನ ಕಲಾಪಕ್ಕೆ ಮುಂದಾದಾಗಲೂ ಬಿಜೆಪಿ ಸದಸ್ಯರು ಅಬಕಾರಿ ಸಚಿವರ ರಾಜೀನಾಮೆಗೆ ಘೋಷಣೆ ಕೂಗುತ್ತಲೇ ಇದ್ದರು.

