ಬಿಜೆಪಿ ಮನಃಸ್ಥಿತಿ ಬಿಟ್ಟು ಜನಸಾಮಾನ್ಯರ ಬದುಕಿನೆಡೆ ಗಮನಹರಿಸಿ
ಬೆಂಗಳೂರು:ಬಿಜೆಪಿ ಮನಃಸ್ಥಿತಿ ಬಿಟ್ಟು ಜನಸಾಮಾನ್ಯರ ಬದುಕಿನ ಕಡೆ ಗಮನಹರಿಸಿ ಎಂದು ಉದ್ಯಮಿ ಮೋಹನ್ದಾಸ್ ಪೈ ಅವರಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಕಿವಿಮಾತು ಹೇಳಿದ್ದಾರೆ.
ರಸ್ತೆಗಳ ಬಗ್ಗೆ ತಕರಾರು ಎತ್ತುತ್ತಿದ್ದ ಪೈ, ಸಾರಿಗೆ ವ್ಯವಸ್ಥೆ ಬಗ್ಗೆ ಎತ್ತಿರುವ ಅಪಸ್ವರಕ್ಕೆ ಉತ್ತರಿಸಿರುವ ರೆಡ್ಡಿ, ಸಾರ್ವಜನಿಕ ಸೇವೆಯನ್ನು ಕೇವಲ ಲಾಭ-ನಷ್ಟದ ಮೂಲಕ ನೀವು ನೋಡುತ್ತೀರಿ, ಆದರೆ, ನಾನು ಅದನ್ನು ನಾಗರಿಕರ ಹಿತದೃಷ್ಟಿಯಿಂದ ನೋಡುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.
ಬಿಜೆಪಿ ಸರ್ಕಾರಕ್ಕೆ ಪ್ರಶ್ನೆ ಮಾಡಲಿಲ್ಲ
ಈ ಹಿಂದೆ ಬಿಜೆಪಿ ನೇತೃತ್ವದ ಸರ್ಕಾರದ ಆಡಳಿತದಲ್ಲಿ ಸಾರಿಗೆ ಸಂಸ್ಥೆಯ ಯಾವುದೇ ನಿಗಮಗಳಿಗೆ ಹೊಸ ಬಸ್ಗಳ ಸೇರ್ಪಡೆ ಆಗಿರಲಿಲ್ಲ, ನಿಗಮಗಳು ಸೊರಗುತ್ತಿದ್ದಾಗ ನೀವು ಒಂದೇ ಒಂದು ಪ್ರಶ್ನೆ ಮಾಡಲಿಲ್ಲ ಏಕೆ ಎಂದು ಪೈ ಅವರನ್ನು ಪ್ರಶ್ನಿಸಿದ್ದಾರೆ.
ಸಾರಿಗೆ ವ್ಯವಸ್ಥೆ ಬಗ್ಗೆ ಟ್ವೀಟ್ ಮೂಲಕ ಅಭಿಪ್ರಾಯ ಹೇಳುವ ಬದಲಿಗೆ ಬಹಿರಂಗ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದಾರೆ.
ಜನಪರ ಸರ್ಕಾರ ಉತ್ತಮ ಕೆಲಸ ಮಾಡುತ್ತಿರುವಾಗ ಮಾತ್ರ ನಿಮ್ಮ ಈ ’ಕಾರ್ಪೊರೇಟ್ ಕಾಳಜಿ’ ಎಚ್ಚರಗೊಳ್ಳುವುದು ಏಕೆ, ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್ ಸೇರಿದಂತೆ, ಬಿಜೆಪಿ ಆಡಳಿತದ ಯಾವುದಾದರೂ ಒಂದು ರಾಜ್ಯ ಅಥವಾ ನಗರ ಈ ಮಟ್ಟದ ಸಾರಿಗೆ ವ್ಯಾಪ್ತಿ ಮತ್ತು ದಕ್ಷತೆ ಹೊಂದಿದ್ದರೆ ತೋರಿಸಿ ಎಂದು ಸವಾಲು ಹಾಕಿದ್ದಾರೆ.
ಪೂರ್ವಾಗ್ರಹಪೀಡಿತ ದೃಷ್ಟಿಕೋನ
ಕಳೆದ ಎರಡು ವರ್ಷಗಳಲ್ಲಿ ನಾವು 5,800ಕ್ಕೂ ಹೆಚ್ಚು ಹೊಸ ಬಸ್ಗಳನ್ನು ಸೇರಿಸಿದ್ದೇವೆ, ಮಾರ್ಚ್ 2026ರ ವೇಳೆಗೆ ಇನ್ನೂ 2,000 ಬಸ್ಗಳು ರಸ್ತೆಗಿಳಿಯಲಿವೆ, ನಿಮ್ಮ ದೃಷ್ಟಿಕೋನ ಕೇವಲ ಪೂರ್ವಾಗ್ರಹಪೀಡಿತ.
ರಾಜ್ಯದಲ್ಲಿ ಶೇಕಡಾ 30ರಷ್ಟು ಬಸ್ ಸಂಚಾರ ಮಾರ್ಗಗಳು ನಷ್ಟದಲ್ಲಿದ್ದರೂ, ಹಳ್ಳಿಯ ಸಾಮಾನ್ಯ ಮನುಷ್ಯ ಮತ್ತು ವಿದ್ಯಾರ್ಥಿಗಳಿಗೆ ಸಾರಿಗೆ ಸೌಲಭ್ಯ ಸುಲಭವಾಗಿ ಸಿಗಲಿ ಎನ್ನುವುದು ನಮ್ಮ ಆಶಯ, ಈ ಕಾರಣಕ್ಕೆ ನಾವು ಅವುಗಳನ್ನು ನಡೆಸುತ್ತಿದ್ದೇವೆ.
ಶೇ.30ರಷ್ಟು ಮಾರ್ಗಗಳು ಲಾಭವೂ ಇಲ್ಲದ, ನಷ್ಟವೂ ಇಲ್ಲದ ಸ್ಥಿತಿಯಲ್ಲಿವೆ, ದೂರ ಪ್ರಯಾಣದ ಬಸ್ ಮಾರ್ಗಗಳಿಂದ ಶೇ.40ರಷ್ಟು ಲಾಭ ಸಿಗುತ್ತಿದೆ, ರಾಜ್ಯದ ಶೇ.98ರಷ್ಟು ಹಳ್ಳಿಗಳಿಗೆ ಬಸ್ ಸಂಪರ್ಕ ಕಲ್ಪಿಸಲಾಗಿದೆ, ಸಮಾಜಕ್ಕೆ ಸೇವೆ ಸಲ್ಲಿಸುವುದು ಹೀಗೆಯೇ ಹೊರತು, ಕೇವಲ ಬೋರ್ಡ್ ಆಫ್ ಡೈರೆಕ್ಟರ್ಗಳ ಲಾಭಕ್ಕಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ನಿಗಮಗಳಲ್ಲಿ ಒಟ್ಟು 26,054 ಬಸ್
ಕರ್ನಾಟಕ ಸಾರಿಗೆ ನಿಗಮಗಳು ಒಟ್ಟು 26,054 ಬಸ್ಗಳ ಕಾರ್ಯಾಚರಣೆ ಮಾಡುತ್ತಿದೆ, ಬೆಂಗಳೂರಿನಲ್ಲಿ ಪ್ರತಿದಿನ ಸುಮಾರು 45 ಲಕ್ಷ ಪ್ರಯಾಣಿಕರಿಗೆ ಸೇವೆ ನೀಡುತ್ತಿದ್ದೇವೆ, 7,108 ಬಸ್ಗಳ ಪೈಕಿ 1,686 ಎಲೆಕ್ಟ್ರಿಕ್ ಬಸ್ಗಳಿವೆ, ದಿನಕ್ಕೆ 13 ಲಕ್ಷ ಕಿ.ಮೀ. ಸಂಚರಿಸುತ್ತಾ 66,000 ಟ್ರಿಪ್ ಪೂರೈಸುತ್ತಿದ್ದೇವೆ, ಇದು ಇಡೀ ಭಾರತದಲ್ಲೇ ಅತಿ ಹೆಚ್ಚು.
ಮೋಹನ್ದಾಸ್ ಪೈ ಅವರೇ, ಯಾವುದೇ ವೇದಿಕೆಯಲ್ಲಿ ನಿಮ್ಮೊಂದಿಗೆ ಮುಖಾಮುಖಿ ಚರ್ಚೆ ನಡೆಸಲು ನಮ್ಮ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಒಬ್ಬರೇ ಸಾಕು, ದಯವಿಟ್ಟು ಬನ್ನಿ, ಅವರೊಂದಿಗೆ ನೇರವಾಗಿ ಸತ್ಯಾಸತ್ಯತೆಗಳ ಬಗ್ಗೆ ಚರ್ಚಿಸಿ, ನೀವು ಈ ಸವಾಲು ಸ್ವೀಕರಿಸಲು ಸಿದ್ಧರಿದ್ದೀರಾ ಅಥವಾ ಕೇವಲ ಟ್ವೀಟ್ ಮಾಡುವುದಕ್ಕಷ್ಟೇ ಸೀಮಿತವಾಗುತ್ತೀರಾ ಎಂದಿದ್ದಾರೆ.
ಸಾರಿಗೆ ಸೌಲಭ್ಯ ಕೊರತೆ
ಪೈ ತಮ್ಮ ಟ್ವೀಟ್ನಲ್ಲಿ ರಾಮಲಿಂಗಾರೆಡ್ಡಿಯವರೇ ಸಾರಿಗೆ ಸಚಿವರಾಗಿ ನಿಮ್ಮ ಸಿದ್ಧಾಂತ ಮತ್ತು ನಡೆಯಿಂದ ರಾಜ್ಯಕ್ಕೆ ಉತ್ತಮ ಸಾರಿಗೆ ವ್ಯವಸ್ಥೆ ನೀಡುವಲ್ಲಿ ವಿಫಲರಾಗಿದ್ದೀರಿ, ಸಾರ್ವಜನಿಕರು ಸಾರಿಗೆ ಸೌಲಭ್ಯ ಕೊರತೆಯಿಂದ ಪರದಾಡುತ್ತಿದ್ದಾರೆ, ದಯವಿಟ್ಟು ಖಾಸಗಿ ವಲಯಕ್ಕೆ ಅವಕಾಶ ನೀಡಿ ಎಂಬ ಸಲಹೆ ನೀಡಿದ್ದರು.
ಕಳೆದ ಕೆಲವು ವರ್ಷಗಳಿಂದ ಬಸ್ಗಳ ವ್ಯವಸ್ಥೆ ಸರಿಯಿಲ್ಲ, ಬಸ್ಗಳ ಸಂಚಾರ ಕಡಿಮೆಯಾಗಿದೆ, ಕೇವಲ ಸರ್ಕಾರಿ ಸಂಸ್ಥೆಗಳೇ ಕೆಲಸ ಮಾಡಬೇಕು ಎಂಬ ನಿಮ್ಮ ಹಠಮಾರಿತನ ಏಕೆ, ಜನರಿಗೆ ಸಾರ್ವಜನಿಕ ಸಾರಿಗೆ ಬೇಕು, ಅದನ್ನು ಯಾರು ಒದಗಿಸುತ್ತಾರೆ ಎಂದು ಪೋಸ್ಟ್ ಮಾಡಿದ್ದರು.

