ನವದೆಹಲಿ:ಕರ್ನಾಟಕದಲ್ಲಿ ಮಾನವ-ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಕಡಿವಾಣ ಹಾಕುವ ಸಂಬಂಧ ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ಸಚಿವ ಭೂಪೇಂದ್ರ ಯಾದವ್ ಜೊತೆ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮಹತ್ವದ ಚರ್ಚೆ ನಡೆಸಿದರು.
ಸಂಸತ್ ಭವನದಲ್ಲಿನ ಅರಣ್ಯ ಸಚಿವರ ಕಚೇರಿಯಲ್ಲಿ ನಡೆದ ಭೇಟಿ ವೇಳೆ ಕೊಡಗು, ಚಿಕ್ಕಮಗಳೂರು, ಹಾಸನ, ಮೈಸೂರು, ಚಾಮರಾಜನಗರ, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿನ ಆನೆಗಳ ದಾಳಿ ಕುರಿತು ವಿವರ ನೀಡಿದರು.
ರೈತರ ಜೀವ ಹಾನಿ
ವನ್ಯಜೀವಿ ದಾಳಿಗೆ ಅನೇಕ ಜನರು, ಅದರಲ್ಲೂ ಅರಣ್ಯದ ಅಂಚಿನಲ್ಲಿ ಬೇಸಾಯ ಮಾಡುವವರು, ದನಕರು ಮೇಯಿಸುವ ರೈತರು ಜೀವ ಕಳೆದುಕೊಂಡಿದ್ದು, ಹಲವು ಮಂದಿ ಗಾಯಗೊಂಡು ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ ಎಂದರು.
ಕುಮಾರಸ್ವಾಮಿ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ತುರ್ತು ಗಮನ ಹರಿಸುವ ಭರವಸೆ ನೀಡಿದರಲ್ಲದೆ, ಎಲ್ಲಾ ಪೂರಕ ಮಾಹಿತಿ ಪಡೆದುಕೊಂಡರು.
ದಾಳಿ ತಡೆಗೆ ಕ್ರಮ
ಸಂಸತ್ನ ಪ್ರಸ್ತುತ ಬಜೆಟ್ ಅಧಿವೇಶನ ಅಂತ್ಯದೊಳಗೆ ಸಂಪೂರ್ಣ ಮಾಹಿತಿ ನೀಡುವಂತೆ ಸಚಿವ ಭೂಪೇಂದ್ರ ಯಾದವ್ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ವನ್ಯಜೀವಿ ದಾಳಿ ತಡೆಗೆ ಕೈಗೊಳ್ಳಬೇಕಾದ ಪರಿಹಾರ ಕ್ರಮಗಳ ಕುರಿತು ನಿರ್ದೇಶನ ನೀಡಿದರು.
ಎರಡೂ ಇಲಾಖೆಗಳ ಸಮನ್ವಯತೆ, ಅಭಿವೃದ್ಧಿ ವಿಷಯ ಕುರಿತು ಮಾತುಕತೆ ಕೇಂದ್ರಿತವಾಗಿತ್ತು, ಅಲ್ಲದೆ, ಉಕ್ಕು ಉದ್ಯಮದ ಬೆಳವಣಿಗೆಗೆ ಪರಿಸರ ಇಲಾಖೆಯಿಂದ ದೊರೆಯುತ್ತಿರುವ ಉತ್ತಮ ಸಹಕಾರದ ಬಗ್ಗೆಯೂ ಮಾತುಕತೆ ನಡೆಸಿದರು.

